ಕಲಬುರಗಿ: ಕಲಬುರಗಿ ವಿಭಾಗದಲ್ಲಿ ಖಾಲಿ ಇರುವ ಉರ್ದು ಮಾಧ್ಯಮದ ವಿಷಯವಾರು ಶಿಕ್ಷಕರ ಹುದ್ದೆಗಳನ್ನು ಪ್ರಸ್ತುತ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸೇರ್ಪಡೆಗೊಳಿಸಿ, ತಿದ್ದುಪಡಿ ಅಧಿಸೂಚನೆ (Corrigendum Notification) ಹೊರಡಿಸುವಂತೆ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಹಾಗೂ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷೆ ಕನೀಜ್ ಫಾತಿಮಾ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಆಗಸ್ಟ್ 14ರಂದು ಪತ್ರ ಬರೆದಿರುವ ಅವರು, ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಇಲಾಖಾವಾರು ಹಾಗೂ ವೃಂದವಾರು ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ಜುಲೈ 6ರಂದು ಮನವಿ ಸಲ್ಲಿಸಲಾಗಿತ್ತು ಆದರೆ, ಆಗಸ್ಟ್ 11ರಂದು ಪ್ರಕಟಿಸಲಾದ ವಿಶೇಷ ರಾಜ್ಯಪತ್ರದಲ್ಲಿನ ಶಿಕ್ಷಕರ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸಿದಾಗ, ಕಲಬುರಗಿ ವಿಭಾಗದಲ್ಲಿ ಉರ್ದು ಮಾಧ್ಯಮದ ಹಲವು ವಿಷಯವಾರು ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಪ್ರಸ್ತುತ ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಲಬುರಗಿ ವಿಭಾಗದಲ್ಲಿ ಉರ್ದು ಮಾಧ್ಯಮದ ಶಿಕ್ಷಕರ ಖಾಲಿ ಹುದ್ದೆಗಳ ನೇಮಕಾತಿಗಾಗಿ ಕಳೆದ 12ರಿಂದ 15 ವರ್ಷಗಳಿಂದ ಸೂಕ್ತ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ ಈ ಭಾಗದ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳು ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಸರಕಾರದ ಗಮನ ಸೆಳೆದಿದ್ದಾರೆ.
ಹೀಗಾಗಿ ಆಗಸ್ಟ್ 11ರ ಶಿಕ್ಷಕರ ನೇಮಕಾತಿ ಅಧಿಸೂಚನೆಯನ್ನು ಮಾರ್ಪಡಿಸಿ, ಕಲಬುರಗಿ ವಿಭಾಗದಲ್ಲಿ ವಿಷಯವಾರು ಖಾಲಿ ಇರುವ ಉರ್ದು ಮಾಧ್ಯಮದ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಸೇರ್ಪಡೆಗೊಳಿಸಿ, ತಿದ್ದುಪಡಿ ಅಧಿಸೂಚನೆ ಹೊರಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.