ಶಹಾಬಾದ್: ರಾಜ್ಯ ಸರಕಾರಿ ನೌಕರರಿಗೆ ರಾಜ್ಯ ಮಟ್ಟದಲ್ಲಿ ನೀಡಲಾಗುವ ‘ಸರಕಾರಿ ನೌಕರರ ಸೇವಾ ಪ್ರಶಸ್ತಿ’ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಶಹಾಬಾದ್ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ ತಿಳಿಸಿದ್ದಾರೆ.
ರಾಜ್ಯ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಎ, ಬಿ, ಸಿ ಮತ್ತು ಡಿ ವರ್ಗದ ಖಾಯಂ ನೌಕರರು ಪ್ರಶಸ್ತಿಗೆ ಅರ್ಹರಾಗಿದ್ದು, ಪ್ರತಿ ವರ್ಷ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ₹200 ಸದಸ್ಯತ್ವ ಶುಲ್ಕ ಪಾವತಿಸುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳನ್ನು ಅಕ್ಟೋಬರ್ 15ರೊಳಗೆ ಆನ್‌ಲೈನ್ ಮೂಲಕ ಶಿಫಾರಸು ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಪ್ರಶಸ್ತಿಗೆ ಅರ್ಹರಾಗಿರುವ ಅಧಿಕಾರಿಗಳು ಹಾಗೂ ನೌಕರರು ಸ್ವತಃ ಅರ್ಜಿ ಸಲ್ಲಿಸುವಂತಿಲ್ಲ. ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು, ಮೇಲಾಧಿಕಾರಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಅರ್ಹ ನೌಕರರನ್ನು ನಿಗದಿತ ಇ-ಲಿಂಕ್ ಮೂಲಕ ಶಿಫಾರಸು ಮಾಡಬಹುದಾಗಿದೆ.
ನೌಕರರ ಕರ್ತವ್ಯನಿಷ್ಠೆ, ಸೇವೆಯ ಗುಣಮಟ್ಟ, ಪ್ರಾಮಾಣಿಕತೆ, ಸಾರ್ವಜನಿಕರಿಗೆ ಸ್ಪಂದಿಸುವಿಕೆ, ಸೇವಾವಧಿಯಲ್ಲಿ ಮಾಡಿದ ಗಮನಾರ್ಹ ಸಾಧನೆ, ಸಾರ್ವಜನಿಕ ಹಿತಕ್ಕಾಗಿ ಕೈಗೊಂಡ ವಿಶೇಷ ಕಾರ್ಯಗಳು, ಕಚೇರಿಯ ಕಾರ್ಯಕ್ಷಮತೆ, ಸಮಯಪಾಲನೆ, ಹೊಸ ಆಲೋಚನೆಗಳ ಅನುಷ್ಠಾನ ಹಾಗೂ ಕಾರ್ಯವಿಧಾನಗಳ ಸರಳೀಕರಣಕ್ಕೆ ಕೈಗೊಂಡ ಪ್ರಯತ್ನಗಳು ಪ್ರಶಸ್ತಿಗೆ ಪ್ರಮುಖ ಮಾನದಂಡಗಳಾಗಿವೆ ಎಂದು ಶಿವಪುತ್ರ ಕರಣಿಕ ತಿಳಿಸಿದ್ದಾರೆ.