Shubhashaya News

ಆರೋಗ್ಯಕರ ಭವಿಷ್ಯಕ್ಕಾಗಿ ಫಾರ್ಮಸಿಸ್ಟ್‌ಗಳ ಸಬಲೀಕರಣ ಅಗತ್ಯ: ಡಾ. ಶರಣಬಸಪ್ಪ ಕ್ಯಾತನಾಳ

ಕಲಬುರಗಿ: ಔಷಧಗಳ ಸುರಕ್ಷಿತ ಬಳಕೆ, ಗುಣಮಟ್ಟದ ಔಷಧ ವಿತರಣೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬದಲಾಗುತ್ತಿರುವ ಆರೋಗ್ಯ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಫಾರ್ಮಸಿ ಅಧಿಕಾರಿಗಳ ಜ್ಞಾನ ಹಾಗೂ ಕೌಶಲ್ಯಗಳನ್ನು ನಿರಂತರವಾಗಿ ಬಲಪಡಿಸುವ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಕಲಬುರಗಿ ಜಿಲ್ಲಾ ಶಾಖೆ ವತಿಯಿಂದ ನಗರದ ಟ್ಯಾಂಕ್ ಬಂಡ್ ರಸ್ತೆಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯದ ಭವಿಷ್ಯಕ್ಕಾಗಿ ಫಾರ್ಮಸಿ ಅಧಿಕಾರಿಗಳ ಸಬಲೀಕರಣ ಎಂಬ ಘೋಷವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಫಾರ್ಮಸಿಸ್ಟ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ರೋಗಿಗಳಿಗೆ ಸೂಕ್ತ ಔಷಧದ ಕುರಿತು ಮಾಹಿತಿ ನೀಡುವುದು, ಔಷಧಗಳ ಸುರಕ್ಷಿತ ಬಳಕೆಯನ್ನು ಖಚಿತಪಡಿಸುವುದು ಹಾಗೂ ಗುಣಮಟ್ಟದ ಔಷಧ ವಿತರಣೆಯಲ್ಲಿ ಅವರು ವಹಿಸುವ ಜವಾಬ್ದಾರಿ ಮಹತ್ವದ್ದಾಗಿದೆ ಎಂದರು.

ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಹಾಗೂ ಜಿಮ್ಸ್ ಆಸ್ಪತ್ರೆ ಅಧೀಕ್ಷಕ ಡಾ. ಶಿವಕುಮಾರ ಸಿ.ಆರ್., ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ರುಕಿಯಾ ಅಸ್ನಾ ರಾಬಾ, ಸಹಾಯಕ ಔಷಧ ನಿಯಂತ್ರಕ-2 ತೇಜಸ್ವಿ, ಅಖಿಲ ಭಾರತ ಸರಕಾರಿ, ಖಾಸಗಿ ಹಾಗೂ ಸಾರ್ವಜನಿಕ ವಲಯದ ಫಾರ್ಮಸಿ ಅಧಿಕಾರಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಬಿ.ಎಸ್. ದೇಸಾಯಿ ಉಪಸ್ಥಿತರಿದ್ದರು.

ಫಾರ್ಮಸಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲ ಡಾ. ಅಶೋಕ ಮಾಲಪಾಣಿ ಉಪನ್ಯಾಸ ನೀಡಿದರು. ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಸಂತೋಷಕುಮಾರ ಕುಸುಮಾ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿಮ್ಸ್ ಆಸ್ಪತ್ರೆಯ ಅಸಿಸ್ಟಂಟ್ ಡೈರೆಕ್ಟರ್ ಆಫ್ ಫಾರ್ಮಸಿ ನರಸಿಂಹರಾಜ, ಚಿಮ್ಸ್ ಆಸ್ಪತ್ರೆಯ ಡೆಪ್ಯೂಟಿ ಚೀಫ್ ಫಾರ್ಮಸಿ ಆಫೀಸರ್ ಸಾವನಕುಮಾರ, ರಾಜ್ಯ ಪರಿಷತ್ ಸದಸ್ಯ ಬಸವರಾಜ ಸಜ್ಜನ, ಪ್ರಧಾನ ಕಾರ್ಯದರ್ಶಿ ರೇವಣಸಿದ್ದೇಶ್ವರ ಹಿರೇಮಠ, ಕೋಶಾಧ್ಯಕ್ಷ ಮಂಜುನಾಥ ರಾಠೋಡ ಹಾಗೂ ಜಿಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.