ಶಿಕ್ಷಕರ ಸಂಘದ ನೂತನ ಸಾರಥಿಗಳಿಗೆ ಸ್ನೇಹ ಬಳಗದ ಗೌರವ
ಮೃತ್ಯುಂಜಯ ಭಾಗೋಡಿ ಹಾಗೂ ಲಕ್ಷ್ಮೀಕಾಂತ ಕಲಬುರಗಿ ಅವರಿಗೆ ಸನ್ಮಾನ
ಆಳಂದ: ಆಳಂದ ತಾಲೂಕು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮೃತ್ಯುಂಜಯ ಭಾಗೋಡಿ ಹಾಗೂ ಹುಲಸೂರ ತಾಲೂಕು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀಕಾಂತ ಕಲಬುರಗಿ ಅವರನ್ನು ಆಳಂದ ತಾಲೂಕಿನ ಸ್ನೇಹ ಬಳಗದ ವತಿಯಿಂದ ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಶಹಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಶಿವುಕುಮಾರ ಪಾರಶೆಟ್ಟಿ, ಶಿಕ್ಷಕರ ಸಂಘಟನೆಗಳು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸಹಕಾರಿಯಾಗಬೇಕು. ನೂತನ ಅಧ್ಯಕ್ಷರು ಶಿಕ್ಷಕರ ವಿಶ್ವಾಸವನ್ನು ಗಳಿಸಿಕೊಂಡು ಸಂಘವನ್ನು ಸಮರ್ಥವಾಗಿ ಮುನ್ನಡೆಸಲಿ ಎಂದು ಶುಭ ಹಾರೈಸಿದರು.

ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಅಂಬಾದಾಸ ಕಾಂಬಳೆ ಮಾತನಾಡಿ, ಶಿಕ್ಷಕರಿಗೆ ಸಂಘಟನೆಯು ಶಕ್ತಿ ಮತ್ತು ಆತ್ಮವಿಶ್ವಾಸ ನೀಡುತ್ತದೆ. ನೂತನ ಪದಾಧಿಕಾರಿಗಳು ಎಲ್ಲ ಶಿಕ್ಷಕರನ್ನು ಒಗ್ಗೂಡಿಸಿ ಉತ್ತಮ ಕಾರ್ಯನಿರ್ವಹಣೆ ಮಾಡಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ ಸನ್ಮುಖ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ ಜಿಡಗೆ ಹಾಗೂ ಹಿರಿಯ ಜಿಪಿಟಿ ಶಿಕ್ಷಕ ಸೀತಾರಾಮ ಬೇತಾಳೆ ಮಾತನಾಡಿ, ಮೃತ್ಯುಂಜಯ ಭಾಗೋಡಿ ಮತ್ತು ಲಕ್ಷ್ಮೀಕಾಂತ ಕಲಬುರಗಿ ಅವರ ಆಯ್ಕೆಯನ್ನು ಅಭಿನಂದಿಸಿದರು. ಶಿಕ್ಷಕರ ಹಿತಾಸಕ್ತಿ, ವೃತ್ತಿಪರ ಗೌರವ ಹಾಗೂ ಸಂಘಟನೆಯ ಬಲವರ್ಧನೆಗೆ ಇಬ್ಬರೂ ಅಧ್ಯಕ್ಷರು ಪ್ರಾಮಾಣಿಕವಾಗಿ ಶ್ರಮಿಸಲಿ ಎಂದು ಆಶಿಸಿದರು.
ನೂತನ ಅಧ್ಯಕ್ಷರಾದ ಮೃತ್ಯುಂಜಯ ಭಾಗೋಡಿ ಹಾಗೂ ಲಕ್ಷ್ಮೀಕಾಂತ ಕಲಬುರಗಿ ಅವರು ತಮ್ಮನ್ನು ಅಭಿನಂದಿಸಿದ ಸ್ನೇಹ ಬಳಗಕ್ಕೆ ಕೃತಜ್ಞತೆ ಸಲ್ಲಿಸಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಸಂಘದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಸಮಾರಂಭವು ಆತ್ಮೀಯ ವಾತಾವರಣದಲ್ಲಿ ನಡೆದಿದ್ದು, ಶಿಕ್ಷಕರು ಹಾಗೂ ಸ್ನೇಹ ಬಳಗದ ಸದಸ್ಯರು ನೂತನ ಸಾರಥಿಗಳಿಗೆ ಶುಭ ಹಾರೈಸಿದರು.