Shubhashaya News

ಸೆ.30ರಂದು ಕಲಬುರಗಿ ವಿಭಾಗ ಪ್ರಥಮ ವಚನ ಸಾಹಿತ್ಯ ಸಮ್ಮೇಳನ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಸೆಪ್ಟೆಂಬರ್ 30ರಂದು ನಗರದ ಕನ್ನಡ ಭವನದ ಅಂಗಳದಲ್ಲಿ ಕಲಬುರಗಿ ವಿಭಾಗ ಪ್ರಥಮ ವಚನ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ.

ಕನ್ನಡ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ಕಲ್ಲೂರ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ ಹಾಗೂ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅವರು ಮಾತನಾಡಿ, ಕಲುಷಿತಗೊಳ್ಳುತ್ತಿರುವ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಶ್ರಮ ಸಂಸ್ಕೃತಿ, ಸಮಸಂಸ್ಕೃತಿ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರಚುರಪಡಿಸುವುದು ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

12ನೇ ಶತಮಾನದಲ್ಲಿ ಸಮಾಜದ ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಬಸವಾದಿ ಶರಣರು ದೀನ, ದಲಿತರು ಹಾಗೂ ಶೋಷಿತ ಸಮುದಾಯಗಳಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಮನೋಭಾವ ಬೆಳೆಸಿದರು. ದಯೆ, ಮಾನವೀಯತೆ, ಪ್ರೀತಿ, ಕರುಣೆ ಹಾಗೂ ಪರಸ್ಪರ ವಿಶ್ವಾಸವನ್ನು ತಮ್ಮ ಅನುಭವ ಸಾಹಿತ್ಯದ ಅವಿಭಾಜ್ಯ ಅಂಗವನ್ನಾಗಿಸಿಕೊಂಡ ಶರಣರು ಮನುಷ್ಯ ಸಂಬಂಧಗಳನ್ನು ಬೆಸೆದರು ಎಂದು ವಿವರಿಸಿದರು.

ವಚನ ಸಾಹಿತ್ಯವು ಕನ್ನಡ ನಾಡಿನಷ್ಟೇ ಅಲ್ಲದೆ ವಿಶ್ವಕ್ಕೆ ನೀಡಿದ ವಿಶಿಷ್ಟ ಕೊಡುಗೆಯಾಗಿದೆ. ಇಂದಿನ ಸಮಾಜದಲ್ಲಿ ವೈಚಾರಿಕ ಜಾಗೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ವಚನ ಸಾಹಿತ್ಯದ ಆಶಯಗಳನ್ನು ಯುವಜನತೆ ಸೇರಿದಂತೆ ಎಲ್ಲ ವರ್ಗಗಳಿಗೂ ತಲುಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಈ ಬಾರಿ ವಚನ ಸಾಹಿತ್ಯ ಸಮ್ಮೇಳನವನ್ನು ಮತ್ತಷ್ಟು ವೈವಿಧ್ಯಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆ ಹಾಗೂ ಸ್ವಾಗತ ಸಮಿತಿಯ ಪದಾಧಿಕಾರಿಗಳ ನೇಮಕವನ್ನು ಶೀಘ್ರದಲ್ಲೇ ನಡೆಸಲಾಗುವುದು. ಸಮ್ಮೇಳನವನ್ನು 12ನೇ ಶತಮಾನದ ಅನುಭವ ಮಂಟಪದ ಆಶಯಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ರೂಪಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಹಾಗೂ ಕಾರ್ಯಾಧ್ಯಕ್ಷ ಶಿವರಾಜ ಅಂಡಗಿ, ಹಿರಿಯ ಕವಿ ಅಮೃತಪ್ಪ ಅಣೂರ, ಶರಣರಾಜ ಛಪ್ಪರಬಂದಿ, ಜಗದೀಶ ಮರಪಳ್ಳಿ, ವಿದ್ಯಾಸಾಗರ ದೇಶಮುಖ, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಸೋಮಶೇಖರಯ್ಯ ಹೊಸಮಠ, ಕಲ್ಯಾಣಕುಮಾರ ಶೀಲವಂತ, ಮಹೇಶ ಚಿಂತನಪಳ್ಳಿ, ಹಣಮಂತರಾವ ಪೆಂಚನಪಳ್ಳಿ, ಶಿವಾನಂದ ಪೂಜಾರಿ, ಧರ್ಮರಾಜ ಜವಳಿ, ದಿನೇಶ ಮದಕರಿ, ಶಕುಂತಲಾ ಪಾಟೀಲ, ಜಯಶ್ರೀ ಜಮಾದಾರ, ರಮೇಶ ಬಡಿಗೇರ, ಸಿದ್ಧಲಿಂಗ ಬಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave A Reply

Your email address will not be published.