ಕಲಬುರಗಿ: ಕರ್ನಾಟಕ ಏಕೀಕರಣ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಕರ್ನಾಟಕದಲ್ಲಿ ಸೇರಿಸಲು ಬಾಕೀಕರಣ ಚಳವಳಿ ಆರಂಭಿಸಿದ್ದ ಜಯದೇವಿತಾಯಿ ಲಿಗಾಡೆ ಅವರು ಜಾನಪದ ವಿದ್ವಾಂಸರು ಆಗಿದ್ದರು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಕಲಬುರಗಿ ಜಿಲ್ಲಾ ಘಟಕ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾ ವಿದ್ಯಾಲಯ ಇವುಗಳ ಆಶ್ರಯದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಮಹಿಳಾ ಜಾನಪದ ವಿದ್ವಾಂಸರ ಬದುಕು ಬರಹ ಉಪನ್ಯಾಸ ಮಾಲಿಕೆ-2 ಕಾರ್ಯಕ್ರಮದಲ್ಲಿ ಜಯದೇವಿ ತಾಯಿ ಲಿಗಾಡೆ ಅವರ ಬದುಕು ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಆ ಕಾಲದಲ್ಲಿ ಆಗರ್ಭ ಶ್ರೀಮಂತರಾಗಿದ್ದ ಸೊಲ್ಲಾಪುರದ ವಾರದ ಮಲ್ಲಪ್ಪನವರ ಇಂಧ್ರ ಭವನದಲ್ಲಿ ಬೆಳೆದು ಬಸವಕಲ್ಯಾಣದ ಭಕ್ತಿ ಭವನಕ್ಕೆ ಬಂದ ಸುದೀರ್ಘ
ಪಯಣ ಬಹಳ ರೋಚಕವಾದದ್ದು ಎಂದು ತಿಳಿಸಿದರು.
ಮರಾಠಿ ಮಾತೃ ಭಾಷೆಯಾಗಿದ್ದರೂ ಕನ್ನಡ ಕಲಿತು ಕನ್ನಡದಲ್ಲಿ ಸಿದ್ಧರಾಮೇಶ್ವರ ಪುರಾಣ ಬರೆಯುವ ಮೂಲಕ ಕನ್ನಡದ ಉಡಿ ತುಂಬಿದ ಶ್ರೇಷ್ಠ ಜಾನಪದ ವಿದ್ವಾಂಸರಾಗಿದ್ದರು ಎಂದು ಹೇಳಿದರು.
ಜಾಪದ ಶೈಲಿಯ ಇವರ ತ್ರಿಪದಿಗಳಲ್ಲಿ ಬಸವಣ್ಣ, ಗಾಂಧಿ, ಕಿತ್ತೂರು ರಾಣಿ ಚನ್ನಮ್ಮ ಮುಂತಾದವರಲ್ಲದೆ ಬದುಕಿಗೆ ಬೇಕಾಗುವ ಹಲವು ಉಪಯುಕ್ತ ಮಾತುಗಳಿವೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್. ಕೊಂಡಾ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕರಾದ ಡಾ. ವಿಜಯಕುಮಾರ ಪರೂತೆ, ರೇವಣಸಿದ್ದಪ್ಪ ದುಖಾನ್ ವೇದಿಕೆಯಲ್ಲಿದ್ದರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಕವಿತಾ ಎ.ಎಂ. ನಿರೂಪಿಸಿದರು. ಸೃಷ್ಠಿ ಬಿರಾದಾರ ಪ್ರಾರ್ಥನೆಗೀತೆ ಹಾಡಿದರು. ದಾನಮ್ಮ ಕೋರವಾರ ಸ್ವಾಗತಿಸಿದರು. ಬಸಮ್ಮ ಗೊಬ್ಬುರ ವಂದಿಸಿದರು.
ರೇಣುಕಾ ಹಾಗರಗುಂಡಗಿ, ಡಾ.ಮಹೇಶ ಗಂವ್ಹಾರ, ಶಿವರಾಜ ಪಾಟೀಲ, ಚನ್ನಬಸಪ್ಪ ಅಣಬಿ, ಡಾ.ಪ್ರೇಮಚಂದ್ ಚವ್ಹಾಣ, ಮನೋಹರ ಪೋತ್ದಾರ ಇತರರಿದ್ದರು.