ನೀರು ಸಮಸ್ಯೆಗೆ ಸ್ಪಂದನೆ: ಪುರಸಭೆ ಮುಂದೆ ಮಹೇಶ್ವರಿ ವಾಲಿ ಧರಣಿ
‘ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಬೇಡ; ಜನರಿಗೆ ನಿಯಮಿತ ನೀರು ಪೂರೈಸಿ’: ವಾಲಿ ಆಗ್ರಹ
ಆಳಂದ: ಪುರಸಭೆ ಕಚೇರಿ ಮುಂದೆ ಧರಣಿ ನಡೆಸಿ ನೀರು ಪೂರೈಕೆ ಸೇರಿ ಹಲವು ಬೇಡಿಕೆಗೆ ಒತ್ತಾಯಿಸಿ ಮಹೇಶ್ವರಿ ವಾಲಿ ನೇತೃತ್ವದಲ್ಲಿ ಸಾರ್ವಜನಿಕರು ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಆಳಂದ: ಪಟ್ಟಣದ ಕುಡಿಯುವ ನೀರಿನ ಸಮಸ್ಯೆ, ಅಮೃತ್ ಯೋಜನೆಯ ಕಾಮಗಾರಿಗಳಲ್ಲಿನ ವಿಳಂಬ ಹಾಗೂ ರಸ್ತೆ ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಹಾಗೂ ವಿಪಕ್ಷ ನಾಯಕಿ ಮಹೇಶ್ವರಿ ಎಸ್. ವಾಲಿ ನೇತೃತ್ವದಲ್ಲಿ ಸೋಮವಾರ ಪಕ್ಷಾತೀತವಾಗಿ ಆಳಂದ ಪುರಸಭೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಕುಡಿಯುವ ನೀರು ಜನರ ಮೂಲಭೂತ ಹಕ್ಕಾಗಿದ್ದು, ಪಟ್ಟಣದ ಜನರು ದಿನಗಟ್ಟಲೆ ನೀರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅಮರ್ಜಾ ಅಣೆಕಟ್ಟಿನಲ್ಲಿ ನೀರಿನ ಲಭ್ಯತೆ ಇದ್ದರೂ ಸಮರ್ಪಕ ಪೂರೈಕೆ ವ್ಯವಸ್ಥೆಯ ಕೊರತೆಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಮೃತ್ ಯೋಜನೆಯ ಕಾಮಗಾರಿಗಳು ವೇಗವಾಗಿ ಹಾಗೂ ಗುಣಮಟ್ಟದಿಂದ ಪೂರ್ಣಗೊಳ್ಳಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು ಮನವಿ ಸ್ವೀಕರಿಸಿ, ನೀರು ಪೂರೈಕೆಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು. ಅಮೃತ್ ಯೋಜನೆಯ ಕಾಮಗಾರಿಗಳ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ವ್ಯಾಪ್ತಿಯ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಮುಖ್ಯಾಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಮಹೇಶ್ವರಿ ವಾಲಿ ಅವರು ಧರಣಿಯನ್ನು ಹಿಂಪಡೆದರು.
‘ಜನರ ಸಮಸ್ಯೆ ಪರಿಹಾರವಾಗಬೇಕು;
ಧರಣಿ ಉದ್ದೇಶಿಸಿ ಮಾತನಾಡಿದ ಮಹೇಶ್ವರಿ ವಾಲಿ, ಜನರ ಸಮಸ್ಯೆಗಳನ್ನು ಪರಿಹರಿಸುವುದು ಆಡಳಿತದ ಮೊದಲ ಆದ್ಯತೆಯಾಗಬೇಕು. ಅಧಿಕಾರಿಗಳು ಹಾಗೂ ಶಾಸಕರು ಸಭೆ ಕರೆದಾಗ ಜನಪ್ರತಿನಿಧಿಗಳು ಭಾಗವಹಿಸುವುದು ಸಹಜ. ಆದರೆ ಅಧಿಕಾರಿಗಳ ಕೆಳಹಂತದ ಬೆಂಬಲಿಗರು ಕರೆದ ಸಭೆಗಳಲ್ಲಿ ಭಾಗವಹಿಸಿ ಅವರ ಕೈಗೊಂಬೆಯಾಗದೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು,
ಪುರಸಭೆ ಆಡಳಿತದ ವಿರುದ್ಧ ಸಾರ್ವಜನಿಕರಲ್ಲಿ ಮೂಡಿರುವ ಅಸಮಾಧಾನ ಹಾಗೂ ‘ಜನರ ಸಮಸ್ಯೆಗಳಿಗೆ ಪುರಸಭೆ ಸ್ಪಂದಿಸುತ್ತಿಲ್ಲ’ ಎಂಬ ಆರೋಪಗಳನ್ನು ದೂರ ಮಾಡಬೇಕು. ಜನರ ಮೂಲಭೂತ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿದರೆ ಹೋರಾಟದ ಅಗತ್ಯವೇ ಇರುವುದಿಲ್ಲ ಎಂದು ಅವರು ಹೇಳಿದರು.
“ನಾವು ಯಾರ ವಿರುದ್ಧವೂ ವೈಯಕ್ತಿಕ ಹೋರಾಟ ಮಾಡುತ್ತಿಲ್ಲ. ಜನರ ಸಮಸ್ಯೆ ಪರಿಹಾರವಾಗಬೇಕು ಎಂಬ ಉದ್ದೇಶದಿಂದ ಧ್ವನಿ ಎತ್ತುತ್ತಿದ್ದೇವೆ. ಜನರಿಗೆ ನೀರು ಸಿಗಬೇಕು, ಕಾಮಗಾರಿಗಳು ಗುಣಮಟ್ಟದಿಂದ ನಡೆಯಬೇಕು, ಸಾರ್ವಜನಿಕ ಹಣ ಸಮರ್ಪಕವಾಗಿ ಬಳಕೆಯಾಗಬೇಕು. ಇದೇ ನಮ್ಮ ಹೋರಾಟದ ಉದ್ದೇಶ” ಎಂದು ವಾಲಿ ಸ್ಪಷ್ಟಪಡಿಸಿದರು.
‘ಧರಣಿ ಆರಂಭವಾಗುತ್ತಿದ್ದAತೆ ನೀರು ಹರಿದಿದೆ;
ಪುರಸಭೆಗೆ ಮುತ್ತಿಗೆ ಹಾಗೂ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಬಳಿಕ ಪಟ್ಟಣದ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗಿದೆ ಎಂದು ವಾಲಿ ಹೇಳಿದರು.
“ಧರಣಿ ಆರಂಭಿಸುವ ಮುನ್ನ ಹಾಗೂ ಹೋರಾಟದ ಎಚ್ಚರಿಕೆ ನೀಡಿದ ಬಳಿಕ ನೀರು ಹರಿಯುತ್ತಿರುವುದಾಗಿ ಸಾರ್ವಜನಿಕರೇ ದೂರವಾಣಿ ಮೂಲಕ ನಮಗೆ ಮಾಹಿತಿ ನೀಡಿದ್ದಾರೆ. ಜನರು ಕರೆ ಮಾಡಿ ನೀರು ಬರುತ್ತಿರುವುದನ್ನು ತಿಳಿಸಿದ್ದಾರೆ. ಇದು ಜನರ ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕಿರುವ ಪ್ರತಿಕ್ರಿಯೆ” ಎಂದು ಅವರು ಹೇಳಿದರು.
ಆದರೆ ನೀರು ಹರಿದಿರುವುದನ್ನು ತೋರಿಸುವುದಕ್ಕಿಂತ ನಿಯಮಿತವಾಗಿ, ಸಮರ್ಪಕವಾಗಿ ಮತ್ತು ಎಲ್ಲ ಬಡಾವಣೆಗಳಿಗೂ ನೀರು ಪೂರೈಕೆಯಾಗುವ ವ್ಯವಸ್ಥೆ ಕಲ್ಪಿಸುವುದು ಮುಖ್ಯ ಎಂದು ಅವರು ಹೇಳಿದರು.
ನೀರಿನ ಪೂರೈಕೆ ಆರಂಭವಾದ ಕೂಡಲೇ ರಾಜಕೀಯ ಶ್ರೇಯಸ್ಸು ಪಡೆಯುವ ಪೈಪೋಟಿ ನಡೆಯಬಾರದು. ಜನರಿಗೆ ವರ್ಷಪೂರ್ತಿ ಸಮರ್ಪಕ ನೀರು ಸಿಗುವಂತೆ ವ್ಯವಸ್ಥೆ ಮಾಡುವುದು ಆಡಳಿತದ ಜವಾಬ್ದಾರಿ ಎಂದು ವಾಲಿ ತಿಳಿಸಿದರು.
‘ಅಮೃತ್ ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಬೇಡ’:
ಅಮೃತ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದನ್ನು ಉಲ್ಲೇಖಿಸಿದ ವಾಲಿ, ಕಾಮಗಾರಿಗಳು ಕೇವಲ ತೋರಿಕೆಗೆ ನಡೆಯದೆ ನಿಗದಿತ ಗುಣಮಟ್ಟ ಹಾಗೂ ತಾಂತ್ರಿಕ ಮಾನದಂಡಗಳAತೆ ನಡೆಯಬೇಕು ಎಂದು ವಾಲಿ ಅವರು ಒತ್ತಾಯಿಸಿದರು.
“ಅಮೃತ್ ಯೋಜನೆಯ ಕಾಮಗಾರಿ ಪೂರ್ಣಗೊಂಡ ನಂತರವೂ ಮತ್ತೆ ರಸ್ತೆ ಒಡೆದು ಪೈಪ್‌ಲೈನ್ ದುರಸ್ತಿ ಮಾಡುವ ಪರಿಸ್ಥಿತಿ ಬರಬಾರದು. ಕಾಮಗಾರಿ ಈಗಲೇ ಗುಣಮಟ್ಟದಿಂದ ನಡೆಯಬೇಕು. ಸಾರ್ವಜನಿಕ ಹಣ ಖರ್ಚಾಗುತ್ತಿದೆ. ಜನರಿಗೆ ದೀರ್ಘಕಾಲ ಪ್ರಯೋಜನವಾಗುವಂತೆ ಕಾಮಗಾರಿ ಪೂರ್ಣಗೊಳಿಸಬೇಕು” ಎಂದು ಅವರು ಆಗ್ರಹಿಸಿದರು.
ಕಾಮಗಾರಿಯ ವೇಗದ ಜೊತೆಗೆ ಅದರ ಗುಣಮಟ್ಟವನ್ನೂ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಜನರಿಗೆ ಸಮರ್ಪಕ ನೀರು ತಲುಪದಿದ್ದರೆ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ ಎಂದು ಅವರು ಹೇಳಿದರು.
‘ಮನೆ ಮನೆಗೆ ನೀರು ತಲುಪಿಸುವ ವ್ಯವಸ್ಥೆ ಬೇಕು’:
ಪಟ್ಟಣದ ಪ್ರತಿಯೊಂದು ಬಡಾವಣೆಗೂ ನಿಗದಿತ ವೇಳಾಪಟ್ಟಿಯಂತೆ ನೀರು ಪೂರೈಸಬೇಕು. ಪೈಪ್‌ಲೈನ್, ವಾಲ್ವ್, ಮೋಟಾರ್, ವಿದ್ಯುತ್ ಹಾಗೂ ಇತರ ತಾಂತ್ರಿಕ ದೋಷಗಳಿಂದ ನೀರು ಪೂರೈಕೆಗೆ ಅಡ್ಡಿಯಾಗುತ್ತಿದ್ದರೆ ಅವುಗಳನ್ನು ತಕ್ಷಣ ಪತ್ತೆಹಚ್ಚಿ ನಿವಾರಿಸಬೇಕು ಎಂದು ವಾಲಿ ಒತ್ತಾಯಿಸಿದರು.
‘ಭರವಸೆ ಈಡೇರದಿದ್ದರೆ ಹೋರಾಟ ಮತ್ತೆ’:
ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು ಮನವಿ ಸ್ವೀಕರಿಸಿ ಸಮಸ್ಯೆಗಳ ಪರಿಹಾರಕ್ಕೆ ಕಾಲಾವಕಾಶ ಕೋರಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಧರಣಿಯನ್ನು ಹಿಂಪಡೆಯಲಾಗಿದೆ. ಆದರೆ ನೀಡಿದ ಭರವಸೆಗಳು ಕಾರ್ಯರೂಪಕ್ಕೆ ಬರಬೇಕು. ಅಧಿಕಾರಿಗಳು ನೀಡಿದ ಭರವಸೆಯಂತೆ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ, ಅಮೃತ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಪಟ್ಟಣಕ್ಕೆ ನಿಯಮಿತ ಕುಡಿಯುವ ನೀರು ಪೂರೈಸಬೇಕು ಎಂದು ಮಹೇಶ್ವರಿ ವಾಲಿ ಹೇಳಿದರು.
“ಕಾಲಾವಕಾಶ ನೀಡಿದ್ದೇವೆ. ಜನರು ಇನ್ನಷ್ಟು ದಿನ ಸಮಸ್ಯೆ ಅನುಭವಿಸಬೇಕು ಎಂಬ ಕಾರಣಕ್ಕೆ ಅಲ್ಲ. ಅಧಿಕಾರಿಗಳು ನೀಡಿದ ಭರವಸೆ ಕಾರ್ಯರೂಪಕ್ಕೆ ಬರಲಿ ಎಂಬ ನಂಬಿಕೆಯಿAದ ಧರಣಿ ಹಿಂಪಡೆದಿದ್ದೇವೆ. ಭರವಸೆ ಈಡೇರದಿದ್ದರೆ ಮತ್ತೆ ಜನರೊಂದಿಗೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ” ಎಂದು ಅವರು ಎಚ್ಚರಿಸಿದರು.
ಆಳಂದ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ನಾಗರಿಕರ ಮೂಲಭೂತ ಸಮಸ್ಯೆಗಳಿಗೆ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕು. ಜನರ ನೀರಿನ ಹಕ್ಕಿಗಾಗಿ ನಡೆಯುವ ಹೋರಾಟಕ್ಕೆ ನಾಗರಿಕರು ಬೆಂಬಲ ನೀಡಬೇಕು ಎಂದು ವಾಲಿ ಕರೆ ನೀಡಿದರು.
ಧರಣಿಯಲ್ಲಿ ಸೈಫಾನ ಪಟೇಲ್, ಗುರುಸ್ವಾಮಿ, ಚಕ್ರಪಾಣಿ ಸೂರೆ, ಸೈಯದ್ ಜಾಕೀರ್, ಶಿವುಕುಮಾರ ನಾಗೂರೆ ಅನೇಕರಿದ್ದರು.