Shubhashaya News

ಕಲಬುರಗಿ| ಕೊಲೆ ಬೆದರಿಕೆ ಆರೋಪ; ಕಾಂಗ್ರೆಸ್ ಮುಖಂಡ ಲಚ್ಚಪ್ಪ ಜಮಾದಾರ್ ಸೇರಿದಂತೆ 16 ಮಂದಿ ವಿರುದ್ಧ ಪ್ರಕರಣ ದಾಖಲು!

ಕಲಬುರಗಿ: ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವುದಲ್ಲದೆ, ಸುಳ್ಳು ಆರೋಪಗಳನ್ನು ಮಾಡಿ ಮಾನಹಾನಿ ಮಾಡಲಾಗಿದೆ ಎಂಬ ಆರೋಪದ ಮೇರೆಗೆ ಕಾಂಗ್ರೆಸ್ ಮುಖಂಡ ಲಚ್ಚಪ್ಪ ಜಮಾದಾರ್ ಸೇರಿದಂತೆ 16 ಮಂದಿ ವಿರುದ್ಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ ನಗರ ನಿವಾಸಿ ಸಿದ್ರಾಮಯ್ಯ ಹಿರೇಮಠ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ಲಚ್ಚಪ್ಪ ಸಿದ್ರಾಮ ಜಮಾದಾರ ಹಾಗೂ ಅವರ ಬೆಂಬಲಿಗರು ಎನ್ನಲಾದ ಶಿವು ಧಣಿ, ಭೀಮರಾವ ಗೌರ, ಮಹಾಲಿಂಗ ಅಂಗಡಿ, ಮಹಾಂತಪ್ಪ ಬಳುಂಡಗಿ, ಮಹಾಂತೇಶ ಬಡದಾಳ, ಸತೀಶ ಜಮಾದಾರ, ದೂರಿಹಪ್ಪ ಜಮಾದಾರ, ಬಸವರಾಜ ಬಿಲ್ಲರ, ಸಿದ್ದಪ್ಪ ಸಿನ್ನೂರ, ಪಾಂಡುರಂಗ ಬಿಲ್ಲರ, ಉಮೇಶ ಅಂದೋಡಗಿ, ರಾಮು ಉಮ್ಮರಗಿ, ದೇವೇಂದ್ರ ಶಿರಸಾವಳಗಿ, ರವಿ ಬಡಿಗೇರ ಹಾಗೂ ಮಹಾಂತೇಶ ಬಡಿಗೇರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸೆ.10ರಂದು ಅಫಜಲಪುರ ನಗರದಲ್ಲಿ ವಿವಿಧ ಸಂಘಟನೆಗಳ ಹೆಸರಿನಲ್ಲಿ ಕೆಲವರು ಪ್ರತಿಭಟನೆ ನಡೆಸಿ, ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹಾಗೂ ತಮ್ಮ ವಿರುದ್ಧ ಯಾವುದೇ ಆಧಾರ ಮತ್ತು ದಾಖಲೆಗಳಿಲ್ಲದೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಪ್ರತಿಭಟನಾಕಾರರು ಸುಳ್ಳು ಪ್ರಚಾರ ಮಾಡಿ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ದೂರುದಾರರು ಇತ್ತೀಚೆಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇತ್ತ, ಅಕ್ಟೋಬರ್ 1ರಂದು ನ್ಯಾಯಾಲಯವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅಕ್ಟೋಬರ್ 3ರಂದು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮುಂದಿನ ತನಿಖೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave A Reply

Your email address will not be published.