Shubhashaya News

ಅರಸು ಅವರ ಆಡಳಿತ ಮಾದರಿ ಇಂದಿಗೂ ಪ್ರಸ್ತುತ: ತಹಸೀಲ್ದಾರ್ ಅಣ್ಣಾರಾವ್ ಪಾಟೀಲ

ಆಳಂದ: ಸಾಮಾಜಿಕ ನ್ಯಾಯ, ಭೂ ಸುಧಾರಣೆ ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಹೊಸ ದಿಕ್ಕು ತೋರಿಸಿದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಆಡಳಿತದ ಆಶಯಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದು ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತದ ಆಶ್ರಯದಲ್ಲಿ ಡಿ. ದೇವರಾಜ ಅರಸು ಅವರ ೧೧೧ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ದೇವರಾಜ ಅರಸು ಅವರು ನಾಡು ಕಂಡ ಅಪರೂಪದ ದೂರದೃಷ್ಟಿಯ ನಾಯಕರು. ಅಧಿಕಾರವನ್ನು ಕೇವಲ ಆಡಳಿತ ನಡೆಸುವ ಸಾಧನವಾಗಿ ಬಳಸದೆ, ಸಾಮಾಜಿಕವಾಗಿ ಹಿಂದುಳಿದವರು, ಶೋಷಿತರು ಹಾಗೂ ದುರ್ಬಲ ವರ್ಗಗಳ ಬದುಕಿನಲ್ಲಿ ಬದಲಾವಣೆ ತರಲು ಪರಿಣಾಮಕಾರಿಯಾಗಿ ಬಳಸಿದ ಮಹಾನ್ ನಾಯಕ ಎಂದು ಸ್ಮರಿಸಿದರು.
ಅರಸು ಅವರ ಚಿಂತನೆಗಳು ಹಾಗೂ ಆಡಳಿತದ ಮಾದರಿಯನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ, ಅವರ ತತ್ವ-ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪುವಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದೇ ಅರಸು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಂಜಯ ಅವರು ದೇವರಾಜ ಅರಸು ಅವರ ಜೀವನ, ಹೋರಾಟ ಹಾಗೂ ಆಡಳಿತಾತ್ಮಕ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು. ಅರಸು ಅವರು ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣರಾದರು. ವಿಶೇಷವಾಗಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅವರು ಕೈಗೊಂಡ ಕ್ರಮಗಳು ಕರ್ನಾಟಕದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಮೈಲುಗಲ್ಲುಗಳಾಗಿವೆ ಎಂದು ವಿವರಿಸಿದರು.
ಬಿಸಿಎಂ ಅಧಿಕಾರಿ ಗಜಾನಂದ ಬುಕ್ಕಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವರಾಜ ಅರಸು ಅವರ ಜೀವನ ಮತ್ತು ಸಾಧನೆಗಳು ಇಂದಿನ ಯುವಜನತೆಗೆ ಹಾಗೂ ಆಡಳಿತ ವರ್ಗಕ್ಕೆ ಪ್ರೇರಣೆಯಾಗಬೇಕು ಎಂದರು.
ಗೋಲ್ಲರ ಸಮಾಜದ ಮುಖಂಡ ಹಾಗೂ ಅಲೆಮಾರಿ ಜನಾಂಗದ ಅಧ್ಯಕ್ಷ ಯಲ್ಲಪ್ಪ ಬೋರುಟ್ಟಿ, ಹಿಂದುಳಿದ ವರ್ಗಗಳ ಮುಖಂಡರಾದ ಬಾಬುರಾವ್ ಫುಲಾರ, ಪಂಡಿತ್ ಶೇರಿಕಾರ, ಭೀಮಾಶಂಕರ ಜಮಗಿ, ಬಿಸಿಎಂ ವಿಸ್ತರಣಾಧಿಕಾರಿ ನಿಲಕಂಠ ಸಿಂಗೆ, ನಿಲಯ ಮೇಲ್ವಿಚಾರಕ ಅಣವೀರಪ್ಪ, ಶರಣಬಸಯ್ಯಾ, ಕವಿತಾ, ಜನಾಬಾಯಿ, ಪ್ರಕಾಶ, ಎಫ್‌ಡಿಸಿ ಶಾಂತಾಬಾಯಿ, ರುಕುಂಬಿ, ಪ್ರದೀಪ ಶೇರಿಕಾರ, ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ, ಪುರಸಭೆ ಸಿಬ್ಬಂದಿ ಹರಿಷ ಗೋವಿನ ಸೇರಿದಂತೆ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.