ಚಿತ್ತಾಪುರ: ತಾಲೂಕಿನ ಅಲ್ಲೂರ(ಬಿ) ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಗೆಳೆಯನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸಿದ್ದಪ್ಪ ಹುಳಗೋಳನನ್ನು ಚಿತ್ತಾಪುರ ಪೊಲೀಸರು ಬಂಧಿಸಿದರು.
ಚಿತ್ತಾಪುರ: ಇತ್ತೀಚೆಗೆ ತಾಲೂಕಿನ ಅಲ್ಲೂರ(ಬಿ) ಗ್ರಾಮದಲ್ಲಿ ನಡೆದ ಕ್ಷುಲ್ಲಕ ಕಾರಣಕ್ಕೆ ಗೆಳೆಯನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸಿದ್ದಪ್ಪ ಹುಳಗೋಳನನ್ನು 48 ಗಂಟೆಗಳಿಲ್ಲಿ ಬಂಧಿಸುವಲ್ಲಿ ಚಿತ್ತಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಅಲ್ಲೂರ(ಬಿ) ಗ್ರಾಮದಲ್ಲಿ ಭೀಮರಾಯ ಮಲ್ಲೇಶಪ್ಪ ನೀಲಕಂಠರ್ (22) ಎಂಬ ವ್ಯಕ್ತಿ ತನ್ನ ಮನೆಯ ಅಂಗಳದಲ್ಲಿ ಮಲಗಿರುವಾಗ ನಸುಕಿನ ಜಾವ 5 ಗಂಟೆ ಸುಮಾರಿಗೆ ಸಿದ್ದಪ್ಪ ಮಲ್ಲಪ್ಪ ಹುಳಗೋಳ ಎಂಬ ವ್ಯಕ್ತಿ ಕೊಡಲಿಯಿಂದ ಕುತ್ತಿಗೆಯ ಪಕ್ಕಕ್ಕೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಕಳೆದ ಮೂರು ದಿನಗಳಿಂದ ಪೊಲೀಸರು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದರು. ಆರೋಪಿ ಮೊಬೈಲ್ ಬಳಸುತ್ತಿರಲಿಲ್ಲ, ಹೀಗಾಗಿ ಆರೋಪಿ ಪತ್ತೆಗೆ ಪ್ರಾರಂಭದಲ್ಲಿ ಕಷ್ಟವಾಗಿತ್ತು. ಆದರೂ ಬೇರೆ ಬೇರೆ ಜಾಡು ಹಿಡಿದು ರವಿವಾರ ಬೆಳಗಿನ ಜಾವ ದಂಡಗುಂಡ-ಯಾಗಾಪೂರ ದೊಡ್ಡ ತಾಂಡ ರಸ್ತೆ ಮಧ್ಯದಲ್ಲಿ ಆರೋಪಿ ಸಿದ್ದಪ್ಪ ಹುಳಗೋಳನನ್ನು ಬಂಧಿಸುವಲ್ಲಿ ಚಿತ್ತಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಸಿದ್ದಪ್ಪ ಹುಳಗೋಳ ಹಾಗೂ ಕೊಲೆಯಾದ ಭೀಮರಾಯ ಮಲ್ಲೇಶಪ್ಪ ನೀಲಕಂಠರ್ ಇಬ್ಬರು ಸ್ನೇಹಿತರು, ಕೊಲೆಯ ಹಿಂದಿನ ದಿನ ಗ್ರಾಮದಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಅದೇ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಕುರಿತು ಮಲ್ಲೇಶಪ್ಪ ಹಣಮಂತ ನೀಡಿರುವ ದೂರಿನಡಿ ಸಿದ್ದಪ್ಪ ಮಲ್ಲಪ್ಪ, ಸಾಬಣ್ಣ ಮಲ್ಲಪ್ಪ, ಶ್ರೀದೇವಿ ಮಲ್ಲಪ್ಪ, ಯಂಕಮ್ಮ ಸಾಬಣ್ಣ, ಶರಣಮ್ಮ ದುರ್ಗಣ್ಣ ಎಂಬುವವರ ವಿರುದ್ಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಅದರಲ್ಲಿ ಮುಖ್ಯ ಆರೋಪಿ ಸಿದ್ದಪ್ಪ ಹುಳಗೋಳನನ್ನು ಬಂಧಿಸುವಲ್ಲಿ ಚಿತ್ತಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೂಳಿದ ನಾಲ್ಕು ಜನ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಶಹಾಬಾದ ಡಿವೈಎಸ್‍ಪಿ ಉಮೇಶ್ ಚಿಕ್ಕಮಠ ರವರ ಮಾರ್ಗದರ್ಶನದಲ್ಲಿ ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲದೇವರ ನೇತೃತ್ವದಲ್ಲಿ ಪಿಎಸ್‍ಐ ಶ್ರೀಶೈಲ ಅಂಬಾಟಿ, ಎಸ್‍ಐ ಚಂದ್ರಾಮಪ್ಪ ಬಳಿಚಕ್ರ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಲ್ಲೇಶ್ ಕೆರೆಪ್ಪನವರ, ನಾಗೇಂದ್ರ ತಳವಾರ, ಮಹೇಶ್ ರೆಡ್ಡಿ, ಚಂದ್ರಶೇಖರ, ಶರಣಪ್ಪ ಜಾಂಜಿ, ಮೇಲಗೇರಿ, ವೀರಭದ್ರ, ಜಗದೀಶ, ಶ್ರೀಮಂತ ಇದ್ದ ವಿಶೇಷ ತಂಡವು ಆರೋಪಿಯನ್ನು ಕೇವಲ 48 ಗಂಟೆಯಲ್ಲಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
Prev Post
Next Post