ಆಳಂದದ ಗುರುಭವನ ಈಗ ವಿಂಡ್ ಕಂಪನಿಗಳ ಭವನವೇ?
ಸಾರ್ವಜನಿಕರ ಬಳಕೆಗೆ ನಿರ್ಮಾಣವಾದ ಕಟ್ಟಡ ಖಾಸಗಿ ಕಂಪನಿಗಳ ಚಟುವಟಿಕೆಗಳಿಗೆ ಸೀಮಿತವಾಗಿದೆಯೇ? – ಸಮಗ್ರ ತನಿಖೆಗೆ ಸಾರ್ವಜನಿಕರ ಆಗ್ರಹ
ಆಳಂದ ಪಟ್ಟಣದ ಸಾರ್ವಜನಿಕ ಕಾರ್ಯಕ್ರಮಗಳು, ಸಭೆಗಳು ಹಾಗೂ ಸಮುದಾಯದ ವಿವಿಧ ಚಟುವಟಿಕೆಗಳಿಗಾಗಿ ನಿರ್ಮಿಸಲಾದ ಗುರುಭವನವು ಈಗ ಖಾಸಗಿ ವಿಂಡ್ ಎನರ್ಜಿ ಕಂಪನಿಗಳ ಚಟುವಟಿಕೆಗಳಿಗೆ ಹೆಚ್ಚಾಗಿ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬೆಳವಣಿಗೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸಂಬಂಧಪಟ್ಟ ಇಲಾಖೆಯು ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.
ಸ್ಥಳೀಯರ ಪ್ರಕಾರ, ಗುರುಭವನದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ವಿಂಡ್ ಕಂಪನಿಗಳ ಸಿಬ್ಬಂದಿ ಸಭೆಗಳು, ದಾಖಲೆ ಪರಿಶೀಲನೆ, ರೈತರೊಂದಿಗೆ ಮಾತುಕತೆ ಹಾಗೂ ಆಡಳಿತಾತ್ಮಕ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬರುತ್ತಿದೆ. ಇದರಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಭವನದ ಲಭ್ಯತೆ ಕಡಿಮೆಯಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಸಾಮಾಜಿಕ ಸಂಘಟನೆಗಳು ಹಾಗೂ ಸಾರ್ವಜನಿಕರು, “ಸಾರ್ವಜನಿಕ ಹಣದಿಂದ ನಿರ್ಮಿಸಲಾದ ಕಟ್ಟಡವನ್ನು ಯಾವುದೇ ಖಾಸಗಿ ಸಂಸ್ಥೆ ಬಳಸುತ್ತಿದ್ದರೆ, ಅದರ ಬಗ್ಗೆ ಸ್ಪಷ್ಟ ನಿಯಮಗಳು ಯಾವುವು? ಅನುಮತಿ ಯಾರಿಂದ ನೀಡಲಾಗಿದೆ? ಬಾಡಿಗೆ ಅಥವಾ ಬಳಕೆ ಶುಲ್ಕವನ್ನು ಪಾವತಿಸಲಾಗುತ್ತಿದೆಯೇ? ಆ ಹಣ ಯಾವ ಖಾತೆಗೆ ಜಮೆಯಾಗುತ್ತಿದೆ?” ಎಂಬ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಕೆಲವರು, ವಿಂಡ್ ಎನರ್ಜಿ ಯೋಜನೆಗಳ ಹಿನ್ನೆಲೆಯಲ್ಲಿ ರೈತರೊಂದಿಗೆ ಸಭೆ ನಡೆಸಲು ಸ್ಥಳದ ಅಗತ್ಯವಿರುವುದು ಸಹಜ ಎಂದು ಅಭಿಪ್ರಾಯಪಡುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕ ಭವನದ ಬಳಕೆ ಎಲ್ಲರಿಗೂ ಸಮಾನವಾಗಿ ಲಭ್ಯವಾಗಬೇಕು ಮತ್ತು ಯಾವುದೇ ಸಂಸ್ಥೆಗೆ ಆದ್ಯತೆ ನೀಡಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಸಾರ್ವಜನಿಕ ವಲಯದ ಕಟ್ಟಡಗಳ ಬಳಕೆ ಕುರಿತು ಪಾರದರ್ಶಕತೆ ಅತ್ಯಗತ್ಯ ಎಂದು ನಾಗರಿಕರು ಹೇಳುತ್ತಿದ್ದಾರೆ. ಗುರುಭವನದ ಬಳಕೆಯ ದಿನಚರಿ, ಅನುಮತಿ ಪತ್ರಗಳು, ಬಾಡಿಗೆ ವಿವರಗಳು ಹಾಗೂ ಆದಾಯ-ವೆಚ್ಚದ ಮಾಹಿತಿಯನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಿದರೆ ಗೊಂದಲಗಳಿಗೆ ತೆರೆ ಬೀಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಕುರಿತು ಸ್ಥಳೀಯ ಆಡಳಿತ, ಸಂಬಂಧಿಸಿದ ಇಲಾಖೆ ಹಾಗೂ ಭವನದ ನಿರ್ವಹಣಾ ಸಮಿತಿಯು ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಯಾವುದೇ ಅಕ್ರಮ ಅಥವಾ ನಿಯಮ ಉಲ್ಲಂಘನೆ ಕಂಡುಬಂದರೆ ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಗುರುಭವನ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಬಳಸಬೇಕು. ವ್ಯಾಪಾರದ ಅಥವಾ ವಾಣಿಜ್ಯದ ಉದ್ದೇಶಕ್ಕೆ ಬಳಕೆ ಮಾಡಬಾರದು. ಇದರಿಂದ ಶೈಕ್ಷಣಿಕ ವಲಯದ ಮೇಲೆ ಅನುಮಾನ ಬಂದAತಾಗುತ್ತದೆ. ನಮ್ಮ ಹಿರಿಯರು ಗುರು ಭವನವನ್ನು ಬಹಳ ಆಸ್ಥೆಯಿಂದ ಕಾಪಾಡಿಕೊಂಡು ಬಂದಿದ್ದಾರೆ. ಅದರ ಮೂಲ ಆಶಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಲಿ- ಹೆಸರು ಹೇಳಲಿಚ್ಚಿಸದ ಶಿಕ್ಷಕರು.