ಆಳಂದ: ರೇವಣಾಸಿದ್ಧೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡ ನಾನು ನಾಯಕಿ ಮಹಿಳಾ ಸಮಾವೇಶವನ್ನು ಜಿಪಂ ಮಾಜಿ ಸದಸ್ಯೆ ಪೂಜಾ ಲೋಹಾರ ಉದ್ಘಾಟಿಸಿದರು. ಡಾ. ಸೀಮಾ ಪಾಟೀಲ್, ಸರಸ್ವತಿ ತೀರ್ಥೆ ಇತರರು ಇದ್ದರು.
ಆಳಂದ: ಮಹಿಳೆಯರು ತಮ್ಮೊಳಗಿನ ನಾಯಕತ್ವದ ಗುಣಗಳನ್ನು ಗುರುತಿಸಿಕೊಂಡು ಆತ್ಮವಿಶ್ವಾಸ, ಶಿಕ್ಷಣ ಹಾಗೂ ಸ್ವಾವಲಂಬನೆಯ ಮೂಲಕ ಸಮಾಜದಲ್ಲಿ ಪರಿವರ್ತನೆಯ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪೂಜಾ ರಮೇಶ ಹೇಳಿದರು.
ಪಟ್ಟಣದ ರೇವಣಾಸಿದ್ದೇಶ್ವರ ಕಾಲೋನಿಯ ರೇವಣಾಸಿದ್ಧೇಶ್ವರ ದೇವಾಲಯದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ತಾಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ “ನಾನು ನಾಯಕಿ” ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಹಿಳೆಯರು ಕುಟುಂಬದ ಜವಾಬ್ದಾರಿಗಳ ಜೊತೆಗೆ ಶಿಕ್ಷಣ, ಉದ್ಯಮ, ಆಡಳಿತ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಹಕ್ಕುಗಳು, ಕರ್ತವ್ಯಗಳು ಮತ್ತು ಅವಕಾಶಗಳ ಬಗ್ಗೆ ಅರಿವು ಬೆಳೆಸಿಕೊಂಡು ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು. ಸಮಾಜದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿದಷ್ಟೂ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮಹಿಳೆಯರ ಆರ್ಥಿಕ ಸ್ವಾವಲಂಬನೆ ಕುಟುಂಬದ ಅಭಿವೃದ್ಧಿಗೆ ಮಾತ್ರವಲ್ಲ, ಸಮಾಜದ ಸದೃಢ ನಿರ್ಮಾಣಕ್ಕೂ ಅಗತ್ಯವಾಗಿದೆ. ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಮಹಿಳೆಯರು ಇತರರಿಗೆ ಮಾದರಿಯಾಗಬೇಕು. “ನಾನು ನಾಯಕಿ” ಎಂಬ ಪರಿಕಲ್ಪನೆ ಪ್ರತಿಯೊಬ್ಬ ಮಹಿಳೆಯಲ್ಲಿರುವ ಸಾಮರ್ಥ್ಯವನ್ನು ಹೊರತರಲು ಪ್ರೇರಣೆ ನೀಡುವ ವೇದಿಕೆಯಾಗಬೇಕು ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ತಾಲೂಕು ಪ್ರಮುಖಿ ಸುರೇಖಾ ಎಸ್. ಹಿರೇಮಠ್ ಮಾತನಾಡಿ, ಮಹಿಳೆಯರು ಸ್ವಾಭಿಮಾನ, ಸ್ವಾವಲಂಬನೆ ಮತ್ತು ಆತ್ಮಗೌರವವನ್ನು ಜೀವನದ ಮೌಲ್ಯಗಳಾಗಿ ಅಳವಡಿಸಿಕೊಳ್ಳಬೇಕು. ಕೌಶಲ್ಯ ತರಬೇತಿ, ವ್ಯವಹಾರ ಜ್ಞಾನ, ಆರ್ಥಿಕ ಸಾಕ್ಷರತೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಮಹಿಳಾ ಸಮುದಾಯದ ಒಗ್ಗಟ್ಟು ಮತ್ತು ಪರಸ್ಪರ ಸಹಕಾರದಿಂದ ಸಮಾಜದಲ್ಲಿ ಇನ್ನಷ್ಟು ಬಲಿಷ್ಠ ಬದಲಾವಣೆ ತರಲು ಸಾಧ್ಯ ಎಂದು ತಿಳಿಸಿದರು.
ಸಮಾವೇಶದಲ್ಲಿ ಮಹಿಳಾ ಸಬಲೀಕರಣ, ನಾಯಕತ್ವ ವಿಕಸನ, ಸ್ವಯಂ ಉದ್ಯೋಗ, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಗೆ ಸಂಬAಧಿಸಿದ ವಿಚಾರಗಳ ಕುರಿತು ಚರ್ಚೆ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಿ, ಮಹಿಳೆಯರಲ್ಲಿ ನಾಯಕತ್ವದ ಮನೋಭಾವ ಬೆಳೆಸುವ ಅಗತ್ಯವನ್ನು ವಕ್ತಾರರು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಸೀಮಾ ಪಾಟೀಲ್, ಸರಸ್ವತಿ ಅಪ್ಪಾಸಾಬ್ ತೀರ್ಥೆ, ಶಿಕ್ಷಕಿ ಸುಹಾಸಿನಿ ಚಿಂಚೋಳಿ, ಸುಹಾಸನಿ ಸಲಗರ, ವೈಶಾಲಿ ಪಾಟೀಲ್, ಗೌರಮ್ಮ ಕಂಬಾರ, ಸುಜ್ಞಾನಿ ಪೊದ್ದಾರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.