ಆಳಂದ: ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜುನಲ್ಲಿ ಆಯೋಜಿಸಿದ್ದ ತರಬೇತಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರಾಚಾರ್ಯೆ ಡಾ. ಪ್ರೇಮಿಳಾ ಅಂಬಾರಾಯ ಅವರು ಬಹುಮಾನ ನೀಡಿ ಗೌರವಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ
ಆಳಂದ: ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಗಾರ ನಡೆದ ಮಾದರಿ ಪರೀಕ್ಷೆಯೊಂದಿಗೆ ಸಮಾರೋಪಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರೇಮಿಳಾ ಅಂಬಾರಾಯ ಮಾತನಾಡಿ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜಿನಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕಳೆದ ವರ್ಷದಿಂದ ರಜಾ ಅವಧಿಯಲ್ಲಿ ಅತಿಥಿ ಉಪನ್ಯಾಸಕರ ನಿಸ್ವಾರ್ಥ ಸೇವೆಯಿಂದಾಗಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಸ್ಮರಿಸಿದ ಅವರು, ಮುಂದಿನ ದಿನಗಳಲ್ಲಿ ವರ್ಷಪೂರ್ತಿ ದಿನಕ್ಕೆ ಒಂದು ಗಂಟೆಯAತೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ತರಗತಿಗಳನ್ನು ಆಯೋಜಿಸುವ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಡಾ. ಶಿವಶರಣಪ್ಪ ನಿಂಬರಗಿ ಮತ್ತು ಡಾ. ಅರವಿಂದ್ ಕುಮಾರ್ ಭದ್ರಶೆಟ್ಟಿ ಭಾಗವಹಿಸಿದ್ದರು.
ತರಬೇತಿ ಶಿಬಿರದಲ್ಲಿ ವಿಷಯ ತಜ್ಞರಾಗಿ ಪಾಠ ಮಾಡಿದ ಡಾ. ಅರವಿಂದ್ ಅಂಗಡಿ, ಡಾ. ಮಹದೇವ್ ಮೋಘಾ, ಡಾ. ಢಾಕಪ್ಪ, ಶ್ರೀ ರಾಜಶೇಖರ್ ಪಾಟೀಲ್, ಡಾ. ಶಿವಪ್ಪ ಭೂಸನೂರ, ಶ್ರೀ ರಾಜ್ ರೆಡ್ಡಿ ಪಾಟೀಲ, ಡಾ. ಸುಭಾಷ್ ಚಂದ್ರ, ಡಾ. ಶಿವಶಂಕರಯ್ಯ ಸ್ವಾಮಿ, ಶ್ರೀ ಶರಣಪ್ಪ ಕೌಂಚೆ ಹಾಗೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶ್ರೀ ಶಾಂತ ಮಲ್ಲಪ್ಪ ಪಾಟೀಲ್, ಶ್ರೀ ಶರಣಪ್ಪ ಭಾವಿ, ಸಂತೋಷ್, ಸಂದೀಪ್ ಮತ್ತು ಶ್ರೀಮತಿ ಚೆನ್ನಮ್ಮ ಅವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.
ಭಾಗ್ಯಶ್ರೀಗೆ ಪ್ರಥಮ, ವಿನಾಯಕಗೆ ದ್ವಿತೀಯ ಬಹುಮಾನ:
ಮಾದರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಕು. ಭಾಗ್ಯಶ್ರೀ ಹಾಗೂ ದ್ವಿತೀಯ ಸ್ಥಾನ ಪಡೆದ ವಿನಾಯಕ ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ಸರ್ಕಾರಿ ಹುದ್ದೆ ಪಡೆಯಲು ಪೂರಕವಾಗುವ ಇಂತಹ ತರಬೇತಿ ಕಾರ್ಯಗಾರ ಆಯೋಜಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಡಾ. ಶಿವಪ್ಪ ಭೂಸನೂರ ನಿರೂಪಿಸಿದರೆ, ಶ್ರೀ ರಾಜ್ ರೆಡ್ಡಿ ಪಾಟೀಲ ವಂದಿಸಿದರು.