Shubhashaya News

ಮಾಸಾಶನ ಪ್ರಮಾಣ ಪತ್ರಗಳು ಫಲಾನುಭವಿಗಳ ಮನೆಗೆ ತಲುಪಿಸುವಂತೆ ಆಗ್ರಹ

ಚಿತ್ತಾಪುರ: ಅಂಗವಿಕಲ, ಹಿರಿಯ ನಾಗರಿಕರ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮನಸ್ವಿನಿ ಹಾಗೂ ರಾಷ್ಟ್ರೀಯ ಭದ್ರತಾ ಯೋಜನೆಯ ಮಾಸಾಶನ ಮಂಜೂರಾತಿ ಪ್ರಮಾಣ ಪತ್ರಗಳನ್ನು ಫಲಾನುಭವಿಗಳ ಮನೆಗೆ ನೇರವಾಗಿ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೊದ್ದೇಶ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಅವರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಸಾರ್ವಜನಿಕರಿಗೆ ಕಚೇರಿ ಅಲೆದಾಟ ತಪ್ಪಿಸುವುದು ಮತ್ತು ಸೇವೆಗಳನ್ನು ಸುಲಭವಾಗಿ ನೀಡುವ ಉದ್ದೇಶದಿಂದ ಮನೆ ಬಾಗಿಲಿಗೆ ಜಾತಿ ಹಾಗೂ ಆದಾಯ ಮತ್ತು ನಿವಾಸಿ ಪ್ರಮಾಣ ಪತ್ರಗಳನ್ನು ತಲುಪಿಸುವ ಮಹಾತ್ವಾಕಾಂಕ್ಷಿ ಅಭಿಯಾನವನ್ನು ಸರ್ಕಾರ ಜಾರಿಗೆ ತಂದಿರುವುದು ಸ್ವಾಗತಾರ್ಹ, ಅದರಂತೆ ಅಂಗವಿಕಲ, ಹಿರಿಯ ನಾಗರಿಕರ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮನಸ್ವಿನಿ ಹಾಗೂ ರಾಷ್ಟ್ರೀಯ ಭದ್ರತಾ ಯೋಜನೆಯ ಮಾಸಾಶನ ಮಂಜೂರಾತಿ ಪ್ರಮಾಣ ಪತ್ರಗಳನ್ನು ಸಹ ಫಲಾನುಭವಿಗಳ ಮನೆಗೆ ನೇರವಾಗಿ ತಲುಪಿಸುವ ಕ್ರಮ ಕೈಗೊಳ್ಳುವ ಮೂಲಕ ಅನಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಅಂಗವಿಕಲರು ಹಾಗೂ ಹಿರಿಯ ನಾಗರಿಕರು ತಮ್ಮ ಮಾಸಾಶನಕ್ಕಾಗಿ ತಹಶೀಲ್‌ ಕಚೇರಿಗೆ ಅಲೆದಾಡುತ್ತಿದ್ದಾರೆ. ಅಂಗವಿಕಲರು ಹಾಗೂ ಹಿರಿಯ ನಾಗರಿಕರು ತಾಲೂಕು ಕಚೇರಿಗೆ ಹೋಗಿಬರಲು ತುಂಬಾ ತೊಂದರೆಯನ್ನು ಹಾಗೂ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಇವರು ಪಡುತ್ತಿರುವ ಕಷ್ಟ ಹಾಗೂ ನರಕಯಾತನೆ ನೋವನ್ನು ಅರಿತುಕೊಂಡು ಕೂಡಲೇ ಸರ್ಕಾರ ಅವರಿಗೆ ಅಲೆದಾಡುವುದನ್ನು ತಪ್ಪಿಸಿ ಅವರ ದೈಹಿಕ ಹಾಗೂ ವಯಸ್ಸಿನ ಮೀತಿಯನ್ನು ಪರಿಗಣಿಸಿ ಮನೆ ಬಾಗಿಲಿಗೆ ಅಂಗವಿಕಲರ ಹಾಗೂ ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಮಾಸಾಶನ ಮಂಜೂರಾತಿ ಪ್ರಮಾಣ ಪತ್ರಗಳನ್ನು ತಲುಪಿಸುವ ಅಭಿಯಾನ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಆದಾಯದ ಮಿತಿ ನೆಪದಲ್ಲಿ ಅನೇಕರ ಮಾಸಾಶನ ಪ್ರಮಾಣ ಪತ್ರಗಳು ರದ್ದುಗೊಂಡಿವೆ.
ಇದರಿಂದ ಅನೇಕರು ನಿತ್ಯ ತಮ್ಮ ಪ್ರಮಾಣ ಪತ್ರಗಳು ಹಾಗೂ ದಾಖಲೆಗಳನ್ನು ಹಿಡಿದುಕೊಂಡು ತಹಶೀಲ್‌ ಕಚೇರಿಗೆ ಅಲೆದಾಡುತ್ತಿದ್ದಾರೆ. ತಿಂಗಳ ಮಾಸಾಶನದ ಮೇಲೆ ತಮ್ಮ ಉಪ ಜೀವನ ನಡೆಸುತ್ತಿರುವ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ, ವಿಧವೆಯರಿಗೆ ಈಗ ಏಕಾಏಕಿ ಮಾಸಾಶನ ಸ್ಥಗಿತೊಂಡಿದ್ದರಿಂದ ಅವರ ಜೀವನ ದುಸ್ತರವಾಗಿದೆ. ಹೀಗಾಗಿ ಸರ್ಕಾರದ ಮಾಸಾಶನ ಪಡೆಯುವ ಫಲಾನುಭವಿಗಳಿಗೆ ಆದಾಯದ ಮಿತಿಯಿಂದ ವಿನಾಯಿತಿ ನೀಡಬೇಕು. ಅವರಿಗೆ ಆದಾಯವಿದ್ದರೆ ಸರ್ಕಾರದ ಮಾಸಾಶನಕ್ಕೆಗೆ ಅರ್ಜಿ ಹಾಕುತ್ತಾರೆ ಹಾಗೂ ಪ್ರತಿ ತಿಂಗಳ ಮಾಸಾಶನಕ್ಕೆಗೆ ಕಾಯುತ್ತಿರುತ್ತಾರೆ ಎಂಬುವ ಪ್ರಶ್ನೆ ಬರಲಿದೆ. ಆದ್ದರಿಂದ ಸರ್ಕಾರ ಈ ಕುರಿತು ಸ್ವಲ್ಪ ಮುತುವರ್ಜಿ ವಹಿಸುವ ಮೂಲಕ ವಿವಿಧ ಯೋಜನೆಗಳ ಮಾಸಾಶನ ಪಡೆಯುವ ಫಲಾನುಭವಿಗಳ ಹಿತದೃಷ್ಟಿಯಿಂದ ಜಾತಿ ಆದಾಯ ಪ್ರಮಾಣ ಪತ್ರಗಳು ಮನೆ ಬಾಗಿಲಿಗೆ ತಲುಪಿಸಿದಂತೆ ಅಂಗವಿಕಲ, ಸಂಧ್ಯಾ ಸುರಕ್ಷೆ ಸೇರಿದಂತೆ ವಿವಿಧ ಯೋಜನೆಗಳ ಮಾಸಾಶನ ಪ್ರಮಾಣ ಪತ್ರಗಳನ್ನು ಸಹ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಒತ್ತಾಯಿಸಿದರು.
ಮಾಸಾಶನ ಪ್ರತಿ ತಿಂಗಳು ದಿನಾಂಕ 1 ರಂದು ಫಲಾನುಭವಿಳ ಬ್ಯಾಂಕ್ ಅಥವಾ ಅಂಚೆ ಖಾತೆಗೆ ಜಮಾ ಮಾಡಬೇಕು, ಅಂಗವಿಕಲ ಹಿರಿಯ ನಾಗರಿಕರ ಸೇರಿದಂತೆ ಇತರೆ ಯೋಜನೆಗಳ ಮಾಸಾಶನ ಪಡೆಯುವ ಫಲಾನುಭವಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು, ಅಂಗವಿಕಲರ ಹಾಗೂ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಕೌಂಟರ್ ಪ್ರಾರಂಭ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವಮ್ಮ ಸಾತನೂರು, ಲಕ್ಷ್ಮೀ ಸಿದ್ದಣ್ಣ, ಜಾಹೀದಾಬೇಗಂ, ಶರಣಪ್ಪ ಬಾಹರಪೇಟ್, ಜಗದೇವಪ್ಪ ಭಾಗೋಡಿ, ಅಬ್ದುಲ್ ಖಾದರ್, ಸಿದ್ದಪ್ಪ ನೆಡಿಗೇರಿ, ಮಲ್ಲಪ್ಪ ಸಾತನೂರು, ಮಂಜೂರು ಸಾಬ್‌, ಭೀಮರಾಯ ಬಾಹರಪೇಟ್, ಮಹೇಬೂಬ್ ಸಾಬ್, ಸಿದ್ದಣ್ಣ ಬಾಹರಪೇಟ್, ಮೊಗಲಪ್ಪ ಕುಂಬಾರ, ಗಂಗಮ್ಮ ಜಡಿ, ಮಲ್ಲಿನಾಥ ಪಾಟೀಲ, ಸಾಬಣ್ಣ ನಾಲವಾರ, ಕಲ್ಯಾಣಿ ಬಾಹರಪೇಟ್, ಚಂದ್ರಕಾಂತ ಬೆಲ್ಲದ, ಮಹಾದೇವಿ ಸಾತನೂರು, ದೇವಿಂದ್ರಪ್ಪ ದಿಗ್ಗಾಂವ, ವಿಜಯಮ್ಮ ಕಾಶಿ, ಹೊನ್ನಮ್ಮ ಬಾಹರಪೇಟ್, ಲಕ್ಷ್ಮೀಕಾಂತ ಚಿತ್ತಾಪುರ, ಮಹಾದೇವಮ್ಮ ದೊಡ್ಡಮನಿ ಸೇರಿದಂತೆ ಇತರರು ಇದ್ದರು.

Leave A Reply

Your email address will not be published.