Shubhashaya News

ಬಿಟ್‌ಚಾಟ್‌ ನಿರ್ಬಂಧ ಸಂವಿಧಾನ ವಿರೋಧಿ: ಸಿಪಿಐ(ಎಂ) ಖಂಡನೆ

ಕಲಬುರಗಿ: ಎಲ್ಲರಿಗೂ ಮುಕ್ತವಾಗಿ ಬಳಸಲು ಅವಕಾಶವಿರುವ ಓಪನ್‌ ಸೋರ್ಸ್ ಮೆಸೇಜಿಂಗ್ ಅಪ್ಲಿಕೇಶನ್ ಬಿಟ್‌ಚಾಟ್ (BitChat) ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ನಿರ್ಬಂಧವು ಸಂವಿಧಾನ ವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಆರೋಪಿಸಿದೆ.

ಈ ಕುರಿತು ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಪತ್ರಿಕಾ ಹೇಳಿಕೆ ನೀಡಿದ್ದು, ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಕ್ಕುಗಳು ಹಾಗೂ ನಾಗರಿಕರ ಶಾಂತಿಯುತ ಸಂವಹನ ಮತ್ತು ಸಂಘಟನೆಯ ಹಕ್ಕಿನ ಮೇಲೆ ಮತ್ತೊಂದು ದಾಳಿಯಾಗಿದೆ ಎಂದು ಹೇಳಿದ್ದಾರೆ.

ಬಿಟ್‌ಚಾಟ್‌ ಮೇಲಿನ ನಿರ್ಬಂಧಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಅಧಿಕೃತ ಅಧಿಸೂಚನೆ ಅಥವಾ ಸಾರ್ವಜನಿಕ ಆದೇಶ ಹೊರಡಿಸಿಲ್ಲ ಎಂದು ಆರೋಪಿಸಿರುವ ಅವರು, ಅಪ್ಲಿಕೇಶನ್ ಅಭಿವೃದ್ಧಿ ತಂಡದ ಜ್ಯಾಕ್ ಡಾರ್ಸಿ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕವೇ ಈ ವಿಷಯ ಸಾರ್ವಜನಿಕರಿಗೆ ತಿಳಿದಿರುವುದು ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಪರೀಕ್ಷಾ ಅಕ್ರಮಗಳ ವಿರುದ್ಧ ನ್ಯಾಯಕ್ಕಾಗಿ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆಗಳ ಸಂದರ್ಭದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವುದು, ಸಂವಹನದ ಮೇಲಿನ ನಿರ್ಬಂಧ, ಪೊಲೀಸ್ ದಬ್ಬಾಳಿಕೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ ಹೇರುವ ಕ್ರಮಗಳು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನಗಳಾಗಿವೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಪ್ರಕಾರ ಇಂಟರ್ನೆಟ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಯಾವುದೇ ನಿರ್ಬಂಧವು ಕಾನೂನುಬದ್ಧತೆ, ಅಗತ್ಯತೆ ಮತ್ತು ಪ್ರಮಾಣಬದ್ಧತೆಯ ಮಾನದಂಡಗಳನ್ನು ಪಾಲಿಸಬೇಕು. ಪಾರದರ್ಶಕತೆ ಮತ್ತು ಸೂಕ್ತ ಕಾನೂನು ಪ್ರಕ್ರಿಯೆಯಿಲ್ಲದೆ ಇಂತಹ ನಿರ್ಬಂಧ ಹೇರುವುದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ.

Leave A Reply

Your email address will not be published.