Shubhashaya News

ಜನಪದ ಸಂಸ್ಕಾರ ಇಂದಿನ ಮಕ್ಕಳಿಗೆ ಅತ್ಯವಶ್ಯಕ: ಗುರುರಾಜ ಕುಲಕರ್ಣಿ

ಕಲಬುರಗಿ: ಜನಪದ ಸಂಸ್ಕೃತಿಯು ಜೀವನ ಮೌಲ್ಯಗಳು, ಸಂಸ್ಕಾರ ಮತ್ತು ನ್ಯಾಯದ ಅರಿವನ್ನು ಮೂಡಿಸುವ ಶಕ್ತಿಯುತ ಮಾಧ್ಯಮವಾಗಿದೆ. ಆಧುನಿಕ ಯುಗದಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್‌ಗಳ ಬಳಕೆಯಿಂದ ಜನಪದ ಪರಂಪರೆ ಮರೆಯಾಗುತ್ತಿರುವ ಸಂದರ್ಭದಲ್ಲಿ ಇಂದಿನ ಮಕ್ಕಳಿಗೆ ಜನಪದ ಸಂಸ್ಕಾರದ ಅಗತ್ಯತೆ ಹೆಚ್ಚಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಗುರುರಾಜ ಕುಲಕರ್ಣಿ ಹೇಳಿದರು.

ನಗರದ ಸುಖಿ ಕಲಾಭವನದಲ್ಲಿ ರವಿವರ್ಮ ಕಲಾ ಸಾಹಿತ್ಯ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ “ಜನಪದ ಝೇಂಕಾರ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನಪದದಲ್ಲಿ ನಮ್ಮ ಬದುಕಿನ ಅನುಭವಗಳು, ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ಸಂದೇಶಗಳು ಅಡಗಿವೆ. ಇಂತಹ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಗಾಯಕ ಕಿರಣ್ ಪಾಟೀಲ್ ಮಾತನಾಡಿ, ಜನಪದ ಕಲೆಗಳು ನಮ್ಮ ನಾಡಿನ ಸಾಂಸ್ಕೃತಿಕ ಸಂಪತ್ತಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಗುರು ಉಪದೇಶ ಪತ್ರಿಕೆಯ ಸಂಪಾದಕ ಗುಂಡೇರಾವ್ ಭಾಗವಹಿಸಿದ್ದರು. ರವಿವರ್ಮ ಕಲಾ ಸಂಸ್ಥೆಯ ಕಾರ್ಯದರ್ಶಿ ಶಿವಶಂಕರ್ ಬಿ. ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಚ್.ಎಸ್. ಬರಗಾಲಿ (ಕುಸನೂರು) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಜನಪದ ಕಲಾವಿದ ಯಲ್ಲಾಲಿಂಗ ಅವರು ಜಾನಪದ ಗಾಯನ ಹಾಗೂ ದಾಸವಾಣಿ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ನಾಗಭೂಷಣ ಅಗಸ್ತಿ, ಮಲ್ಲಿಕಾರ್ಜುನ್ ಜಾನಿ, ಕಾವೇರಿ ಜಿ. ಹಿರೇಮಠ, ಅನ್ನಪೂರ್ಣ ಎನ್. ಚೌವ್ವಾಣ ಸೇರಿದಂತೆ ಕಲಾವಿದರು ತಮ್ಮ ಸುಮಧುರ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಲ್ಲಿಕಾರ್ಜುನ್ ದೊಡ್ಡಿ ಅವರು ವಂದನಾರ್ಪಣೆ ಸಲ್ಲಿಸಿದರು

Leave A Reply

Your email address will not be published.