Shubhashaya News

ಸಂವಿಧಾನ ರಕ್ಷಣೆಗಾಗಿ ಭೀಮ ಸೇನೆಯ ಹೋರಾಟ ಮತ್ತಷ್ಟು ತೀವ್ರ: ಬಾಬುರಾವ್ ಅರುಣದೋಯ

ಆಳಂದ: ಕರ್ನಾಟಕ ಭೀಮ ಸೇನೆ (ರಿ) ಕಲ್ಯಾಣ ಕರ್ನಾಟಕ ಪ್ರದೇಶದ ನೂತನ ಅಧ್ಯಕ್ಷ ಬಾಬುರಾವ್ ಅರುಣದೋಯ ಅವರನ್ನು ಪಟ್ಟಣದಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿವಿಧ ಸಮಾಜಗಳ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿದರು.

ಸಂವಿಧಾನದ ಆಶಯಗಳ ಸಂರಕ್ಷಣೆ, ಸಾಮಾಜಿಕ ನ್ಯಾಯದ ಸ್ಥಾಪನೆ ಹಾಗೂ ಶೋಷಿತ–ವಂಚಿತ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಕರ್ನಾಟಕ ಭೀಮ ಸೇನೆ ನಿರಂತರ ಹೋರಾಟ ನಡೆಸಲಿದ್ದು, ಸಂಘಟನೆಯ ಕಾರ್ಯಕರ್ತರು ಒಗ್ಗಟ್ಟಿನಿಂದ ಸಮಾಜಮುಖಿ ಸೇವೆಯಲ್ಲಿ ತೊಡಗಬೇಕು ಎಂದು ಕರ್ನಾಟಕ ಭೀಮ ಸೇನೆ (ರಿ) ಕಲ್ಯಾಣ ಕರ್ನಾಟಕ ಪ್ರದೇಶದ ನೂತನ ಅಧ್ಯಕ್ಷ ಬಾಬುರಾವ್ ಅರುಣದೋಯ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಭೀಮ ಸೇನೆ ತಾಲ್ಲೂಕು ಘಟಕದ ಆಶ್ರಯದಲ್ಲಿ ನೂತನ ಪ್ರದೇಶಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಆಗಮಿಸಿದ ಅವರಿಗೆ ತಾಲ್ಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿವಿಧ ಸಮಾಜಗಳ ಮುಖಂಡರು ಹೂಮಾಲೆ ಹಾಕಿ, ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಘಟನೆಯು ಕೇವಲ ಹೆಸರಿಗಷ್ಟೇ ಸೀಮಿತವಾಗದೆ ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿ ಹೊಂದಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ತತ್ವವೇ ಸಮಾಜದ ಉನ್ನತಿಯ ಮಾರ್ಗವಾಗಿದೆ. ಸಮಾನತೆ, ಸ್ವಾಭಿಮಾನ ಹಾಗೂ ಸಂವಿಧಾನ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಭಾಗದ ಪ್ರತಿಯೊಂದು ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು ಎಂದು ತಿಳಿಸಿದರು.
ಯುವಕರನ್ನು ಸಂಘಟನೆಯ ಮುಂಚೂಣಿಗೆ ತಂದು ನಾಯಕತ್ವದ ಅವಕಾಶ ಕಲ್ಪಿಸಲಾಗುವುದು. ಸಮಾಜದ ಮೇಲೆ ನಡೆಯುವ ದೌರ್ಜನ್ಯ, ಅಸಮಾನತೆ ಹಾಗೂ ಅನ್ಯಾಯದ ವಿರುದ್ಧ ಸಂವಿಧಾನಬದ್ಧ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ನಡೆಸುವುದು ಸಂಘಟನೆಯ ಪ್ರಮುಖ ಧ್ಯೇಯವಾಗಿದೆ. ಸಮಾಜದ ಎಲ್ಲ ವರ್ಗದ ಜನರು ಭೀಮ ಸೇನೆಯೊಂದಿಗೆ ಕೈಜೋಡಿಸಿ ಸಾಮಾಜಿಕ ಬದಲಾವಣೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಂಘಟನೆಯ ಬಲವೇ ಸಮಾಜದ ಬಲವಾಗಿದ್ದು, ಜನಸೇವೆ, ಸಾಮಾಜಿಕ ಜಾಗೃತಿ ಹಾಗೂ ಸಂವಿಧಾನದ ಮೌಲ್ಯಗಳ ರಕ್ಷಣೆಗೆ ತಮ್ಮ ಅವಧಿಯಲ್ಲಿ ವಿಶೇಷ ಆದ್ಯತೆ ನೀಡುವುದಾಗಿ ಅವರು ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಸಂಜಯ್ ಭೋಸಲೆ, ಜಿಲ್ಲಾ ಕಾರ್ಯದರ್ಶಿ ಶಿವಪ್ರಸನ್ನ, ಆಳಂದ ತಾಲ್ಲೂಕು ಅಧ್ಯಕ್ಷ ನಿತಿನ್ ಆರ್. ಡೋಲೆ, ಗೌರವ ಅಧ್ಯಕ್ಷ ನಾಗರಾಜ ಸಿಂಗೆ, ಉಪಾಧ್ಯಕ್ಷ ಜೈಭೀಮ್ ಸುಳ್ಳದ, ಪ್ರಧಾನ ಕಾರ್ಯದರ್ಶಿ ಮಹೇಶ್ ಪೋಟೆ, ಯುವ ಘಟಕದ ಕಾರ್ಯದರ್ಶಿ ಪ್ರಜ್ವಲ್ ಡೋಲೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೋರಾಟಗಾರ ಮುಖಂಡರಾದ ರಮೇಶ್ ಲೋಹಗ, ಕೋಳಿ ಸಮಾಜದ ಹಿರಿಯ ಮುಖಂಡ ಅಶೋಕ ಜಮಾದಾರ, ತಾನಾಜಿ ಲಾವಟೆ, ಲಕ್ಷ್ಮಿಕಾಂತ ಭಜನ್, ಮಲ್ಲಿನಾಥ ಮಂಟಳೆ, ಮಲ್ಲಿಕಾರ್ಜುನ ಬೋಳನಿ, ಶಶಿಕಾಂತ ಸಿಂಗೆ, ದಿಲೀಪ ಕಾಳೆ, ಶರಣು ಕವಲಗಾ, ಸಿದ್ದುಗೌಡ ಪಾಟೀಲ, ಮಲ್ಲಿನಾಥ ಚಿಂಚೋಳಿ, ಸಿದ್ಧಾರ್ಥ ಸಿಂಗೆ, ಜಯಾನಂದ ಸಿಂಗೆ, ಸಲ್ಮಾನ್ ಖಾನ್ ನಗರ, ಸಿದ್ಧಾರ್ಥ ಹುಸುರೆ, ಶೇಖರ್ ಡೋಲೆ, ಮಹೇಶ್ ಕೊಚ್ಚಿ, ಜೈಭೀಮ್ ಕಂಠೇಕುರೆ, ಅಕ್ಷಯ ಮೇಲಿನಕೇರಿ, ಬಾಬುರಾವ್ ಡೋಲೆ, ಪ್ರವೀಣ ಮೊದಲೇ, ಆಕಾಶ್ ದೇಗಾಂವ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು.

Leave A Reply

Your email address will not be published.