Shubhashaya News

ಬೇಸಿಗೆಯಲ್ಲಿ ಉದ್ಯೋಗ ಖಾತರಿ ಕೆಲಸ ಮಾಡಿ

ಮೊಗಲಾ ಗ್ರಾಪಂ: ದುಡಿಯೋಣ ಬಾ ಅಭಿಯಾನಕ್ಕೆ ಇಓ ನೀಲಗಂಗಾ ಚಾಲನೆ

ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದುಡಿಯೋಣಾ ಬಾ ಅಭಿಯಾನಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಮಣ್ಣ ತುಂಬಿದ ಬುಟ್ಟಿ ಹೊತ್ತು ಚಾಲನೆ ನೀಡಿದರು.

ಬೇಸಿಗೆಯಲ್ಲಿ ಕೆಲಸ ನೀಡಲೆಂದು ಜಾರಿಗೆ ತಂದಿರುವ ಸರ್ಕಾರದ ಮಹತ್ವಾಕಾಂಕ್ಷಿಯ ಉದ್ಯೋಗ ಖಾತರಿ ಯೋಜನೆಯ ದುಡಿಯೋಣ ಬಾ ಅಭಿಯಾನದಡಿ ಕೂಲಿ ಕಾರ್ಮಿಕರು ಕೆಲಸ ಮಾಡುವ ಮೂಲಕ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ ಹೇಳಿದರು.
ತಾಲೂಕಿನ ಮೊಗಲಾ ಗ್ರಾಮ ಪಂಚಾಯತ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮದಲ್ಲಿ ಮಣ್ಣು ತುಂಬಿದ ಬುಟ್ಟಿ ಹೊತ್ತುಕೊಳ್ಳುವ ಮೂಲಕ ಕೂಲಿ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನ ಕೆಲಸ ಸೀಗುತ್ತದೆ. ಇದರಲ್ಲಿ ಬೇಸಿಗೆ ಕಾಲದಲ್ಲಿ ಉದ್ಯೋಗ ಖಾತರಿಯಲ್ಲಿ 60 ದಿನಗಳ ಕೆಲಸ ಮಾಡಿದರೆ 17 ಸಾವಿರ ರೂ.ಗಳು ಸಂಪಾದನೆ ಮಾಡಬಹುದು ಎಂದರು.
ಹೊಲಗದ್ದೆಗಳಲ್ಲಿ ರಾಶಿ ಕೆಲಸ ಮುಗಿದ ನಂತರ ಕೂಲಿಕಾರ್ಮಿಕರು ಕೆಲಸ ಇಲ್ಲದೆ ನಗರದತ್ತ ಕೆಲಸ ಅರಸಿಕೊಂಡು ವಲಸೆ ಹೋಗುವುದು ಸಾಮಾನ್ಯವಾಗಿತ್ತು. ಹೀಗಾಗಿ ಉದ್ಯೋಗ ಖಾತರಿ ಯೋಜನೆಯ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮದ ಮೂಲಕ ದುಡಿಯುವ ಕೂಲಿಕಾರರಿಗೆ ಸ್ವಂತ ಊರಿನಲ್ಲೆ ಕೆಲಸ ಮಾಡಲು ನೆರವಾಗಲಿದೆ. ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ ಏ.1 ರಿಂದ ದಿನಕ್ಕೆ ತಲಾ 289 ರೂ. ಕೂಲಿ ಹಣ ನೀಡಲಾಗುತ್ತಿದೆ ಎಂದರು.
ಉದ್ಯೋಗ ಖಾತರಿ ಯೋಜನೆಯಡಿ ರೈತರ ಹೊಲಗಳ ಬದು ನಿರ್ಮಾಣ, ರಸ್ತೆ, ಹಣದಿ ಸುಧಾರಣೆ ಮುಂತಾದ ಕೆಲಸ ಮಾಡಲು ಅವಕಾಶವಿದೆ. ಸಣ್ಣ ಅತಿ ಸಣ್ಣ ರೈತ ಕುಟುಂಬಗಳು ಉದ್ಯೋಗ ಖಾತರಿ ಕೆಲಸ ಮಾಡಿದರೆ ಕೃಷಿಗೆ ಅಗತ್ಯವಾದ ಬೀಜ, ರಸಗೊಬ್ಬರ ಖರೀದಿ, ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಕೋವಿಡ್ ವ್ಯಾಕ್ಸಿನ್ ಲಸಿಕೆ ಕೊಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಸಮೀಪದ ಆರೋಗ್ಯ ಕೇಂದ್ರಗಳಿಗೆ ಕರೆದುಕೊಂಡು ಹೋಗಲಾಗುತ್ತದೆ. ಉಚಿತ ಸೌಲಭ್ಯ ಸದುಪಯೋಗ ಮಾಡಿಕೊಳ್ಳಲು ಜನರು ಮುಂದೆ ಬರಬೇಕು ಎಂದರು.
ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮದಡಿ ಕೆಲಸ ಮಾಡಲು ಬಯಸುವವರು ನಿಗಧಿ ನಮೂನೆಯಲ್ಲಿ ಪಂಚಾಯಿತಿಗೆ ಅರ್ಜಿ ಸಲ್ಲಿಸಿದಾಗ ಕಡ್ಡಾಯವಾಗಿ ಕೆಲಸ ನೀಡಲಾಗುತ್ತದೆ. ಕೂಲಿ ಹಣ ಬರುತ್ತದೆಯೋ ಇಲ್ಲವೋ ಎಂಬ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷ ತಮ್ಮಣ್ಣ ಡಿಗ್ಗಿ ಮಾತನಾಡಿ, ಇಟಗಾ ಗ್ರಾಮಸ್ಥರು ನಡೆದುಕೊಂಡು ಮೊಗಲಾ ಗ್ರಾಮ ಮತ್ತು ಪಂಚಾಯಿತಿಗೆ ಬರಲು ಇರುವ ಹಳೆ ಹಣದಿ ರಸ್ತೆ ಸುಧಾರಣೆ ಮಾಡಬೇಕಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ರಸ್ತೆ ಸುಧಾರಣೆ ಕೆಲಸ ಕೈಗೆತ್ತಿಕೊಳ್ಳಲಾಗಿದೆ ಎಂದರು.
ತಾಪಂ ವ್ಯವಸ್ಥಾಪಕ ಅಮೃತ ಕ್ಷೀರಸಾಗರ, ಪಿಡಿಒ ದೇವೀಂದ್ರಪ್ಪ ಬಾಲ್ಕೆ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಕವಿತಾ ಲಖನ್, ಉದ್ಯೋಗ ಖಾತರಿ ಯೋಜನೆ ಸಹಾಯಕ ನಿರ್ದೇಶಕ ಸೋಮಶೇಖರ, ಗ್ರಾಪಂ ಸದಸ್ಯರಾದ ಬನ್ನೇಶ, ಭಾಗಮ್ಮ, ಕಿಶನ್, ರಾಜು, ಕಾಳಪ್ಪ, ಸರಸ್ವತಿ, ಸತ್ಯಮ್ಮ, ಮುಖಂಡರಾದ ಮಲ್ಲಿಕಾರ್ಜುನ ಪುಜಾರಿ, ಶಿವಶರಣಪ್ಪ ಹೂಗಾರ, ರಮೇಶ ಪೂಜಾರಿ, ಶರಣು ಲಕ್ಕಾ, ಸಂತೋಷ ತೊನಸನಳ್ಳಿ ಇದ್ದರು.
ಶಿಕ್ಷಕ ವೀರಸಂಗಪ್ಪ ಸುಲೇಗಾಂವ ನಿರೂಪಿಸಿ, ವಂದಿಸಿದರು.

Leave A Reply

Your email address will not be published.