Shubhashaya News

ಜಿಲ್ಲೆಯನ್ನು ತಕ್ಷಣ ಬರಪೀಡಿತ ಘೋಷಿಸಲು ಗುತ್ತೇದಾರ ಆಗ್ರಹ

ಆಳಂದ: ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ತೀವ್ರ ಕೊರತೆಯಾಗಿರುವ ಪರಿಣಾಮ ಕೃಷಿ ಚಟುವಟಿಕೆಗಳು ಸಂಪೂರ್ಣ ಹಿನ್ನಡೆಯಾಗಿದ್ದು, ಜಿಲ್ಲೆಯನ್ನೇ ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸಮರ್ಪಕ ಮಳೆಯಾಗದ ಕಾರಣ ರೈತರು ಬಿತ್ತನೆ ಮಾಡಿದ ಜೋಳ, ತೊಗರಿ, ಉದ್ದು, ಹೆಸರು, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದು, ಅಪಾರ ನಷ್ಟದ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಳೆಯ ಕೊರತೆಯಿಂದ ಕೃಷಿ ಮಾತ್ರವಲ್ಲದೆ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ವಿಳಂಬ ಮಾಡದೆ ವಿಶೇಷ ಅಧಿಕಾರಿಗಳ ತಂಡವನ್ನು ಜಿಲ್ಲೆಗೆ ಕಳುಹಿಸಿ ಬೆಳೆಹಾನಿಯ ಸಮಗ್ರ ಸಮೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳ ಅನ್ವಯ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಬೆಳೆಹಾನಿ ಪರಿಹಾರ, ಇನ್‌ಪುಟ್ ಸಬ್ಸಿಡಿ, ಬೆಳೆ ಸಾಲ ಮರುಪಾವತಿಗೆ ಕಾಲಾವಕಾಶ, ಬಡ್ಡಿ ಮನ್ನಾ ಹಾಗೂ ಅಗತ್ಯವಿದ್ದಲ್ಲಿ ಹೊಸ ಕೃಷಿ ಸಾಲ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜಾನುವಾರುಗಳ ರಕ್ಷಣೆಗೆ ಮೇವು ಬ್ಯಾಂಕ್‌ಗಳನ್ನು ಆರಂಭಿಸಿ ಸಮರ್ಪಕ ಮೇವು ಪೂರೈಕೆ ಮಾಡಬೇಕು. ಜೊತೆಗೆ ಗ್ರಾಮೀಣ ಜನರಿಗೆ ಉದ್ಯೋಗ ದೊರಕುವಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎ) ಅಡಿ ಹೆಚ್ಚಿನ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರ ಹಿತಾಸಕ್ತಿಗಾಗಿ ಜನಾಂದೋಲನ ರೂಪಿಸಿ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದು ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.