ಸೇಡಂ: ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ದೊರಕಿಸಲು ಪ್ರಮುಖ ಪಾತ್ರ ವಹಿಸಿದ ಹಿರಿಯ ಮುತ್ಸದ್ದಿ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ ಮಾತನಾಡಿ, ದೇಶ ಹಾಗೂ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡುವ ಮೂಲಕ ಅವಮಾನಿಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಕೇವಲ ಒಬ್ಬ ನಾಯಕನಿಗೆ ಮಾಡಿದ ಅವಮಾನವಲ್ಲ. ಸಮಾಜ ಹಾಗೂ ದೇಶದ ಜನರಿಗೆ ಮಾಡಿದ ಅವಮಾನವಾಗಿದೆ. ಇಂತಹ ವಿಕೃತ ಕೃತ್ಯಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಅವಕಾಶ ಇರಬಾರದು. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ ಮಾಲಿಪಾಟೀಲ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೇಶ ಹಾಗೂ ಜನರ ಸೇವೆ ಅಪಾರವಾಗಿದೆ. ಜನರಿಗಾಗಿ ನಿರಂತರವಾಗಿ ಶ್ರಮಿಸಿದ ಜನನಾಯಕನಿಗೆ ಈ ರೀತಿಯಲ್ಲಿ ಅವಮಾನವಾದರೆ ಸಾಮಾನ್ಯ ಜನರ ರಕ್ಷಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತದೆ. ಇಂತಹ ಸಂಕುಚಿತ ಹಾಗೂ ಅವಹೇಳನಕಾರಿ ಪ್ರವೃತ್ತಿಯನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಜಗನ್ನಾಥ ಚಿಂತಪಳ್ಳಿ ಮಾತನಾಡಿ, 21ನೇ ಶತಮಾನದಲ್ಲಿಯೂ ಇಂತಹ ಸಂಕುಚಿತ ಮನಸ್ಥಿತಿ ಹಾಗೂ ಅನಿಷ್ಟ ಪದ್ಧತಿಗಳ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವುದು ಖಂಡನೀಯ. ಸಮಾಜವಿರೋಧಿ ಕೃತ್ಯಗಳಿಗೆ ಯಾವುದೇ ಸರ್ಕಾರಗಳು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥರ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ನಂದಿಗಾಂ, ಮುಖಂಡರಾದ ರಾಜಶೇಖರ ಪುರಾಣಿಕ, ಜೈಭೀಮ್ ಊಡಗಿ, ಬಸವರಾಜ ರೇವಗೊಂಡ, ವಿಶ್ವನಾಥ ಪಾಟೀಲ ಬೊಮ್ನಳ್ಳಿ, ಸೈಯ್ಯದ್ ನಾಜಿಮೊದ್ದಿನ್, ಅಬ್ದುಲ್ ಗಫೂರ, ಅಶೋಕ ಮಹಾಡಿಕ್, ಮೆಹಮೂದ್ ಮದನಾ, ಸೇಡಂ ಬ್ಲಾಕ್ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಸತೀಶ ಪೂಜಾರಿ, ಮುಧೋಳ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಡೇಪಲ್ಲಿ, ಸೇಡಂ ಬ್ಲಾಕ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ವಿಲಾಸಗೌತಂ, ರಾಮಯ್ಯ ಪೂಜಾರಿ, ವೆಂಕಟರೆಡ್ಡಿ ಪಾಟೀಲ ಕಡತಾಲ, ಲಕ್ಷ್ಮೀಕಾಂತ ಕುಲಕರ್ಣಿ, ವೆಂಕಟರಾವ ಖೇವಜಿ, ಗುರುನಾಥರೆಡ್ಡಿ ಪಾಟೀಲ, ಜಗದೇವಪ್ಪ ಪಾಟೀಲ ಕೊಂಕನಹಳ್ಳಿ, ಮಹ್ಮದ್ ಗೌಸ್, ಬಾಬಾ ಲಿಂಗಂಪಲ್ಲಿ, ನಾಗರಾಜ್ ನಂದೂರು, ಈರಣ್ಣ ರೆಮಣ್ಣಿ, ಹೇಮ್ಲಾನಾಯಕ, ರಾಜಕುಮಾರ ರಾಠೋಡ್, ಹಾಜಿ ನಾಡೇಪಲ್ಲಿ, ಲಿಂಗರಾಜ ಕುಪನೂರ, ವಿರೇಂದ್ರ ರುದ್ನೂರ, ಭೀಮಾಶಂಕರ ಕೊಳ್ಳಿ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.