Shubhashaya News

೩೮೨ ರೂಪಾಯಿ ಕೂಲಿ; ನಗರ ವಲಸೆ ತಡೆಯಲು ವಿಬಿ-ಜಿಆರ್‌ಎಎಂಜಿ ಒತ್ತು

ಆಳಂದದ ೪೨ ಗ್ರಾಪಂಗಳಲ್ಲಿ ೫,೩೧೮ ಮಂದಿಗೆ ಉದ್ಯೋಗ:

ಆಳಂದ: ಧುತ್ತರಗಾಂವ ಗ್ರಾಮನಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ನಿರತರಾಗಿರುವÀ ಕಾರ್ಮಿಕರು. À

ಆಳಂದ: ಗ್ರಾಮೀಣ ಪ್ರದೇಶದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಆಳಂದ ತಾಲ್ಲೂಕಿನ ಎಲ್ಲ ೪೨ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿಬಿ-ಜಿಆರ್‌ಎಎಂಜಿ ಯೋಜನೆಯಡಿ ಸಾರ್ವಜನಿಕ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಆರಂಭಿಸಲಾಗಿದೆ. ೨೦೨೬–೨೭ನೇ ಸಾಲಿನಲ್ಲಿ ತಾಲ್ಲೂಕಿಗೆ ಒಟ್ಟು ೧೫,೨೯,೨೦೮ ಮಾನವ ದಿನಗಳ ಉದ್ಯೋಗದ ಗುರಿ ನಿಗದಿಪಡಿಸಲಾಗಿದ್ದು, ಆ.೧೮ರ ವೇಳೆಗೆ ೫,೩೧೮ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಹಾಂತೇಶ ಪುರಾಣಿ ಅವರ ಪ್ರಕಾರ, ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಬಯಸುವವರು ನಮೂನೆ–೬ರಲ್ಲಿ ಅರ್ಜಿ ಸಲ್ಲಿಸಿದರೆ ಮೂರು ದಿನಗಳೊಳಗೆ ಕೆಲಸ ಒದಗಿಸಲಾಗುತ್ತದೆ. ಯೋಜನೆಯಡಿ ಪ್ರತಿ ದಿನದ ಕೂಲಿಯಾಗಿ ೩೮೨ ರೂಪಾಯಿ ನೀಡಲಾಗುತ್ತದೆ.
ಲಭ್ಯವಿರುವ ಅಂಕಿ-ಅAಶಗಳ ಪ್ರಕಾರ, ತಡೋಳ ಗ್ರಾಮ ಪಂಚಾಯಿತಿಯಲ್ಲಿ ೪೧೪ ಮಂದಿ ಉದ್ಯೋಗದಲ್ಲಿದ್ದು ತಾಲ್ಲೂಕಿನಲ್ಲಿ ಅತಿ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿರುವ ಪಂಚಾಯಿತಿಯಾಗಿದೆ. ನಂತರ ಹಳ್ಳಿಸಾಲಗರದಲ್ಲಿ ೩೮೪, ಹಿರೊಳ್ಳಿಯಲ್ಲಿ ೩೮೨ ಹಾಗೂ ಕವಲಗದಲ್ಲಿ ೩೭೬ ಮಂದಿ ಕೆಲಸದಲ್ಲಿ ತೊಡಗಿದ್ದಾರೆ. ನಿಂಬರ್ಗಾದಲ್ಲಿ ೨೦೧, ತಡಕಲ್‌ನಲ್ಲಿ ೨೧೭, ಸುಂಟನೂರಿನಲ್ಲಿ ೨೪೮, ಭೋದನದಲ್ಲಿ ೨೫೫, ಧನ್ನೂರಿನಲ್ಲಿ ೨೫೬ ಹಾಗೂ ಬೆಳಮಗಿಯಲ್ಲಿ ೨೮೩ ಮಂದಿ ಕೆಲಸ ಮಾಡುತ್ತಿದ್ದಾರೆ.
ಇನ್ನು ಮಟಕಿ ಮತ್ತು ಸಾವಳೇಶ್ವರ ಗ್ರಾಮ ಪಂಚಾಯಿತಿಗಳಲ್ಲಿ ಆ.೧೮ರಂದು ಯಾವುದೇ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಅಂಕಿ-ಅAಶಗಳು ತೋರಿಸುತ್ತವೆ. ಕೊಡಲಹಂಗರಗದಲ್ಲಿ ನಾಲ್ಕು, ಮೊಘಾ (ಕೆ)ಯಲ್ಲಿ ಎರಡು, ಮಡಿಯಾಳದಲ್ಲಿ ೧೫ ಹಾಗೂ ಯಲಸಂಗಿಯಲ್ಲಿ ೨೧ ಮಂದಿ ಮಾತ್ರ ಕೆಲಸದಲ್ಲಿದ್ದಾರೆ.
ಅರ್ಜಿ ಸಲ್ಲಿಸಿದರೆ ಮೂರು ದಿನಗಳಲ್ಲಿ ಕೆಲಸ:
ಗ್ರಾಮೀಣ ಭಾಗದಲ್ಲಿ ಉದ್ಯೋಗದ ಬೇಡಿಕೆ ಇರುವ ಪ್ರತಿಯೊಬ್ಬ ಅರ್ಹ ಕಾರ್ಮಿಕರು ತಮ್ಮ ಗ್ರಾಮ ಪಂಚಾಯಿತಿಗೆ ತೆರಳಿ ನಮೂನೆ–೬ರಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಮೂರು ದಿನಗಳೊಳಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಇದ್ದು, ಇದರ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ ಗ್ರಾಮೀಣ ಕಾರ್ಮಿಕರ ನಗರ ವಲಸೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಗ್ರಾಮೀಣ ಜನರು ಕೆಲಸಕ್ಕಾಗಿ ದೂರದ ನಗರಗಳಿಗೆ ತೆರಳುವ ಬದಲು ತಮ್ಮ ಸ್ವಗ್ರಾಮದಲ್ಲಿಯೇ ಲಭ್ಯವಿರುವ ಉದ್ಯೋಗಾವಕಾಶವನ್ನು ಬಳಸಿಕೊಳ್ಳಬೇಕು. ಸಾರ್ವಜನಿಕ ಮತ್ತು ವೈಯಕ್ತಿಕ ಕಾಮಗಾರಿಗಳ ಮೂಲಕ ಗ್ರಾಮಗಳ ಅಭಿವೃದ್ಧಿಯ ಜೊತೆಗೆ ಕೂಲಿ ಕಾರ್ಮಿಕರಿಗೆ ಆದಾಯದ ಮೂಲ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.