ಚಿತ್ತಾಪುರ: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚಿತ್ತಾಪುರ ಯೂಥ್ ಬ್ಲಡ್ ಡೋನರ್ ಕ್ಲಬ್ ವತಿಯಿಂದ ಪಟ್ಟಣದ ತಹಶೀಲ್ದಾರ್ ರಸ್ತೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕ್ಲಬ್ ಅಧ್ಯಕ್ಷ ಶೇಖ್ ಮೋಸಿನ್ ಅವರ ನೇತೃತ್ವದಲ್ಲಿ ನಡೆದ ಶಿಬಿರಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ತಹಶೀಲ್ದಾರ್ ನಾಗಯ್ಯ ಹಿರೇಮಠ, ಎಲ್ಲ ದಾನಗಳಿಗಿಂತ ರಕ್ತದಾನ ಅತ್ಯಂತ ಶ್ರೇಷ್ಠವಾದದ್ದು. ನಾವು ನೀಡುವ ಒಂದು ಯೂನಿಟ್ ರಕ್ತವು ಅಗತ್ಯವಿರುವ ಮತ್ತೊಬ್ಬರ ಜೀವ ಉಳಿಸಲು ನೆರವಾಗುತ್ತದೆ. ಆದ್ದರಿಂದ ಆರೋಗ್ಯವಂತ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಕರೆ ನೀಡಿದರು.
ಯೂಥ್ ಬ್ಲಡ್ ಡೋನರ್ ಕ್ಲಬ್ ಅಧ್ಯಕ್ಷ ಶೇಖ್ ಮೋಸಿನ್ ಮಾತನಾಡಿ, ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಕಳೆದ 13 ವರ್ಷಗಳಿಂದ ಕ್ಲಬ್ ವತಿಯಿಂದ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಜಾತಿ-ಧರ್ಮದ ಭೇದ ಮರೆತು ವಿವಿಧ ಸಮುದಾಯಗಳ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
ಶಿಬಿರದಲ್ಲಿ ಒಟ್ಟು 55 ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಕ್ರಂ ಪಾಶಾ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಸಿಪಿಐ ಎಸ್.ಸಿ. ಪಾಟೀಲ, ಇಸ್ಮಾಯಿಲ್, ಬಾಬಾ, ಜಮೀರ್, ವಸೀಂ ಖಾನ್, ಸೋಹೇಲ್ ಕರ್ನೂಲ್, ಹುಸೇನ್ ಪಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.