Shubhashaya News

ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ; ಸಂಸದ ರಾಧಾಕೃಷ್ಣ ದೊಡ್ಡಮನಿ ಭಾಗಿ

ಕಲಬುರಗಿ: ಬಿಜೆಪಿ ಸರ್ಕಾರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ ಅವರ ಮೂಲಕ ಮತ ಚೋರಿ ಮಾಡುತ್ತಿದ್ದು, ಕೂಡಲೇ ಅವರನ್ನು ಆ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷ ನವದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕಲಬುರಗಿ ಲೋಕಾಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಭಾಗವಹಿಸಿದ್ದರು.

ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿಕೊಂಡು ನಡೆಸುತ್ತಿರುವ ಚುನಾವಣಾ ಅಕ್ರಮಗಳ ವಿರುದ್ದ ಪ್ರಖರ ಧ್ವನಿ ಎತ್ತಿರುವ ಸಂಸದರು ” ಪ್ರಜಾಸತ್ತೆಯನ್ನು ರಕ್ಷಿಸಿ” ಎಂದು ಫಲಕ ಹಿಡಿದುಕೊಂಡು ಪ್ರತಿಭಟನಾಕಾರರೊಂದಿಗೆ ಘೋಷಣೆ ಕೂಗಿದರು.

ಜ್ಞಾನೇಶ್ ಕುಮಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದೀನದಲಿತರ, ಬಡವರ, ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಪಟ್ಟಿಯಿಂದ ತೆಗೆದುಹಾಕುವ ಮೂಲಕ ಸಂವಿಧಾನಬದ್ದವಾಗಿ ನೀಡಲಾದ ಹಕ್ಕುನ್ನು ಕಸಿಯುವ ಪ್ರಯತ್ನ ನಡೆಸಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷ ಪ್ರಬಲವಾಗಿ ವಿರೋಧಿಸುತ್ತದೆ.

ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಕಾಂಗ್ರೆಸ್ ಪಕ್ಷ ಬೀದಿಗಿಳಿಯಲು ಸದಾ ಸಿದ್ದವಿದ್ದು ಈಗ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಅಧಿಕಾರದಿಂದ ಇಳಿಯುವವರೆಗೆ ಹೋರಾಟ ಮಾಡುತ್ತದೆ ಎಂದು ರಾಧಾಕೃಷ್ಣ ದೊಡ್ಡಮನಿ ಈ ಸಂದರ್ಭದಲ್ಲಿ ಹೇಳಿದರು.

Leave A Reply

Your email address will not be published.