Shubhashaya News

ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ್ ಅವರ ಧಮ್ಮಚಕ್ರ ಪ್ರವರ್ತನ ದಿನದ ಅಂಗವಾಗಿ ಹಮ್ಮಿಕೊಂಡಿರುವ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ-೨೦೨೬ಕ್ಕೆ ಸೋಮವಾರ ಕಲಬುರಗಿಯ ಜಗತ್ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆಕ್ಕೆ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು.
ಪೂಜ್ಯ ಭಂತೆ ಬೋಧಿಧಮ್ಮ ಅವರ ನೇತೃತ್ವದಲ್ಲಿ ಆರಂಭಗೊAಡಿರುವ ಈ ಯಾತ್ರೆಯು ಕಲಬುರಗಿಯಿಂದ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳು ಹಾಗೂ ತಾಲ್ಲೂಕುಗಳಲ್ಲಿ ಸಂಚರಿಸಲಿದೆ. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಭಗವಾನ್ ಗೌತಮ ಬುದ್ಧರ ವಿಚಾರಧಾರೆ, ಸಮಾನತೆ, ಸ್ವಾತಂತ್ರ‍್ಯ, ನ್ಯಾಯ, ಬಂಧುತ್ವ ಮತ್ತು ಬೌದ್ಧ ಧಮ್ಮದ ಮಾನವೀಯ ಮೌಲ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದರು.
ಅಂತರಾಷ್ಟ್ರೀಯ ಬೌದ್ಧ ಯುವ ಸಂಘಟನೆ, ಭಾರತ, ಗ್ಲೋಬಲ್ ಡಾ. ಅಂಬೇಡ್ಕರ್ ಬೌದ್ಧ ಮಿಷನ್, ಯು.ಎಸ್.ಎ., ಅಖಿಲ ಭಾರತ ಡಾ. ಅಂಬೇಡ್ಕರ್ ಭಿಕ್ಕು ಸಂಘ ಹಾಗೂ ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆ, ಸನ್ನತಿ (ಕನಗನಹಳ್ಳಿ) ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಯಾತ್ರೆ ನಡೆಯುತ್ತಿದೆ. ಅಕ್ಟೋಬರ್ ೫ರಂದು ಆರಂಭಗೊAಡಿರುವ ಯಾತ್ರೆಯ ಸಮಾರೋಪ ಸಮಾರಂಭವು ನವೆಂಬರ್ ೧ರಂದು ಚಿತ್ತಾಪುರ ತಾಲ್ಲೂಕಿನ ಸನ್ನತಿ (ಕನಗನಹಳ್ಳಿ)ಯಲ್ಲಿರುವ ಐತಿಹಾಸಿಕ ಬೌದ್ಧ ಸ್ತೂಪದ ಆವರಣದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಮಹಾದೇವ ಧನ್ನಿ, ಪ್ರಕಾಶ ಮೂಲಭಾರತಿ, ಗುಂಡಪ್ಪ ಲಂಡಕರ್, ಡಾ. ವಿ.ಟಿ. ಕಾಂಬ್ಳೆ, ಅಂಬಣ್ಣ ಜೀವಣಗಿ, ಸೂರ್ಯಕಾಂತ ನಿಂಬಾಳ್ಕರ್, ಹಣಮಂತ ಬೋಧನಕರ್, ಸಂತೋಷ ಮೇಲ್ಮನಿ, ದಿನೇಶ ದೊಡ್ಮನಿ, ಜೈಭಾರತ್ ಕಾಂಬ್ಳೆ, ಸುರೇಶ ಕಾನೇಕರ್, ಸಚಿನ್ ಶಿರವಾಳ, ರಾಜೀವ್ ಜಾನೆ, ಸೋಮಶೇಖರ ಮೇಲಿನಮನಿ, ಪ್ರಕಾಶ ಔರಾದ್ಕರ್, ಅಶೋಕ ವೀರನಾಯಕ, ದೇವೇಂದ್ರ ಸೀನೂರ್, ಅಶೋಕ ಕಪನೂರ, ಹಣಮಂತ ಇಟಗಿ, ವಿಶ್ವನಾಥ ಕಾರ್ನಾಡ, ಶ್ರೀನಿವಾಸ ಲಾಖೆ, ಅರ್ಜುನ ಗೊಬ್ಬುರ, ಪ್ರಕಾಶ ಭಾಲೆ, ಮಹೇಶ ಬೆಡಜೇವರ್ಗಿ, ಶಿವಕುಮಾರ ನಂದಿ, ಪುಂಡಲಿಕ ಹೆರೂರ್ಕರ್ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

Leave A Reply

Your email address will not be published.