ಕೊರಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ:
೮೭ ಮಂದಿಗೆ ತಪಾಸಣೆ, ೧೩ ಮಂದಿಗೆ ಕಣ್ಣಿನ ಪೊರೆ ಶಸ್ತçಚಿಕಿತ್ಸೆಗೆ ಆಯ್ಕೆ
ಆಳಂದ: ಕೊರಳ್ಳಿ ಗ್ರಾಮದಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಉಚಿತ ಕಣ್ಣಿನ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಉದ್ಘಾಟಿಸಿ ಮಾತನಾಡಿದರು.
ಆಳಂದ: ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿನ ಸಮಸ್ಯೆಗಳು ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಗಂಭೀರ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಅವರು ಹೇಳಿದರು. .
ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಡಿವೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಲಬುರಗಿ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ, ಕಲಬುರಗಿ ಇವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಜನರ ಬಳಿಗೇ ವೈದ್ಯಕೀಯ ಸೇವೆಗಳನ್ನು ಕೊಂಡೊಯ್ಯುವ ಇಂತಹ ಉಚಿತ ಆರೋಗ್ಯ ಶಿಬಿರಗಳು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತವೆ ಎಂದು ಹೇಳಿದರು.
ಶಿಬಿರದಲ್ಲಿ ವಿವಿಧ ತಜ್ಞ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಸಲಹೆ ಹಾಗೂ ಚಿಕಿತ್ಸೆಯನ್ನು ನೀಡಿದರು. ಒಟ್ಟು ೮೭ ಮಂದಿ ಹೊರರೋಗಿಗಳು ಆರೋಗ್ಯ ತಪಾಸಣೆಗೆ ಒಳಗಾದರು. ಇವರಲ್ಲಿ ೧೩ ಮಂದಿಯನ್ನು ಕಣ್ಣಿನ ಪೊರೆ ಶಸ್ತçಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಯ ಕುರಿತು ವೈದ್ಯರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಫಾದರ್ ವಿಲಿಯಂ ಮೀರಾಂದ್, ಗುರಯ್ಯ ಎಂ. ಹಿರೇಮಠ್, ಶ್ರೀಕಾಂತ್ ಎಚ್. ವಾರದ್, ಶರಣಬಸಪ್ಪ ಅಂಬಳಿ, ಗ್ರಾಮ ಪಂಚಾಯಿತಿ ಸಹಾಯಕಾಧಿಕಾರಿ ಹನುಮಂತರಾಯ ಕೆ. ಮಧುಗುಣಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ. ಕಿರಣ್ ಜಾರ್ಜ್, ಡಾ. ಡೆಂಜಿಲ್, ಡಾ. ಅಂಬಿಕಾ, ನೇತ್ರ ತಜ್ಞೆ ಡಾ. ದೀಪಾ, ಕುಮಾರ್ ಹಾಗೂ ಕೊರಳ್ಳಿ ಗ್ರಾಮ ಪಂಚಾಯಿತಿಯ ಪದಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ ವೈದ್ಯಕೀಯ ಸೇವೆ ಸಲ್ಲಿಸಿದರು.
ಗ್ರಾಮೀಣ ಜನರಿಗೆ ಉಚಿತವಾಗಿ ಕಣ್ಣಿನ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆಯ ಸೌಲಭ್ಯ ದೊರೆತ ಹಿನ್ನೆಲೆಯಲ್ಲಿ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.