Shubhashaya News

ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳು: ಮಂಜುಳಾ ಬಿ. ಜಾನೆ

ಕಲಬುರಗಿ: ಕಲಾವಿದರಿಗೆ ಕಲೆಯೇ ಸಂಪತ್ತು. ಕಲೆ ಮತ್ತು ಸಂಸ್ಕೃತಿಗಳು ದೇಶದ ಸಂಪತ್ತಾಗಿದ್ದು, ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳು ಎಂದು ಹಿರಿಯ ಚಿತ್ರಕಲಾವಿದೆ ಮತ್ತು ಕೃತಿಕಾ ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ಮಂಜುಳಾ ಬಿ. ಜಾನೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಲ್ಲಿ ವಿಜಯನಗರ ಕಾಲೋನಿಯಲ್ಲಿರುವ ಅನುಚಂದ್ರ ಆರ್ಟ್ ಸ್ಟೋಡಿಯೋದಲ್ಲಿ ಆಯೋಜಿಸಿದ ನೀಲಾಂಬಿಕಾ ಹಿರೇಮಠ ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಿಂದಿನ ಕಾಲದಲ್ಲಿ ಮಹಿಳೆ ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತಳಾಗಿದ್ದಳು. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಚಿತ್ರಕಲಾ ಕ್ಷೇತ್ರ ಸೇರಿದಂತೆ ವೃತ್ತಿಯೊಂದಿಗೆ ಅನೇಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಚಿತ್ರಕಲಾವಿದ ಬಿ.ಎನ್. ಪಾಟೀಲ ಮುಖ್ಯ ಅತಿಥಿಯಾಗಿ ಮಾತನಾಡಿ, ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ, ಕಲಾ ಕ್ಷೇತ್ರ ಮಾತ್ರ ಕೆಲವನ್ನೂ ಮಾತ್ರ ಆರಿಸಿಕೊಳ್ಳುತ್ತದೆ. ಅದರಂತೆ ನೀಲಾಂಬಿಕ ಅವರ ಕಲಾಕೃತಿಗಳಲ್ಲಿ ರೇಖೆ, ಬಣ್ಣ, ಮೈವಳಿಕೆಗಳ ಸಮತೋಲನವಿದೆ. ಕಲ್ಯಾಣ ಕರ್ನಾಟಕ ಬಾಗದ ಮಹಿಳಾ ಕಲಾವಿದೆಯರು ರಾಜ್ಯದ ಗಡಿ ದಾಟಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿ ಯಶಸ್ವಿಯಾಗಲೆಂದು ಆಶಸಿದರು.
ಕಡಗಂಚಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿನಯಕುಮಾರ್ ರುದ್ರಸ್ವಾಮಿಮಠ ಮಾತನಾಡಿ, ಚಿತ್ರಕಲಾ ಕ್ಷೇತ್ರಕ್ಕೆ ಮಹಿಳಾ ಕಲಾವಿದರ ಕೊಡುಗೆ ಅಪಾರವಾಗಿದೆ. ಶ್ರೇಷ್ಠ ಕಲಾವಿದೆಯರಾದ ಅಮೃತ ಶೇರ-ಗಿಲ್, ನಳಿನಿ ಮಳಿನಿ, ಅನುಪಮ ಸೂದ್, ಪುಷ್ಪಮಾಲಾ. ಎನ್ ಸೇರಿದಂತೆ ಇನ್ನು ಅನೇಕರು ಭಾರತೀಯ ಚಿತ್ರಕಲಾ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ಅನುಚಂದ್ರ ಆರ್ಟ ಸ್ಟುಡಿಯೋ ಮುಖ್ಯಸ್ಥ ಚಂದ್ರಹಾಸ ಜಾಲಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವರಾಜ ಜಾನೆ, ನಿಂಗಣ್ಣ ಕೇರಿ, ದಾನಯ್ಯ ಚೌಕಿಮಠ, ಡಾ. ಪರಶುರಾಮ, ಡಾ. ಕೆ. ಎಂ. ಕುಮಾರಸ್ವಾಮಿ, ಮಹೇಶ್ ಎಂ, ಮಲ್ಲಿಕಾರ್ಜುನ ಕೋರಳ್ಳಿ, ಸಂಗಮೇಶ್ ಚಿಲಶೆಟ್ಟಿ, ಕಾವ್ಯ ಗಡ್ಡಿ, ಸೂರ್ಯಕಾಂತ್ ನಂದೂರ, ಶಶಿಕಾಂತ್ ಪಾಟೀಲ್ ಸೇರದಂತೆ ಮುಂತಾದವರಿದ್ದರು. ಕು. ಲಕ್ಷ್ಮಿ ಬೇರೂರು ಪ್ರಾರ್ಥನೆ ಗೀತೆ ಹಾಡಿದರು. ಕವಿತಾ ಕಟ್ಟೆ ಸ್ವಾಗತಿಸಿದರು. ನೀಲಾಂನಿಕಾ ವಂದಿಸಿದರು. ಮಲ್ಲಿಕಾರ್ಜುನ ಮುಗಳಿ ಕಾರ್ಯಕ್ರಮ ನಿರ್ವಹಿಸಿದರು.

Leave A Reply

Your email address will not be published.