ಕಲಬುರಗಿ: ಬರದ ಸಂಕಷ್ಟಕ್ಕೆ ಸಿಲುಕಿರುವ ಕಲಬುರಗಿ ದಕ್ಷಿಣ ಕ್ಷೇತ್ರದ ರೈತರೊಂದಿಗೆ ಬೆಳೆವಿಮೆ ಕಂಪನಿಗಳು ಚೆಲ್ಲಾಟವಾಡುತ್ತಿರುವುದನ್ನು ಸಹಿಸುವುದಿಲ್ಲ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ ಎಚ್ಚರಿಕೆ ನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಕೆಡಿಪಿ ಸಭೆಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಅವರು, ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಎಳ್ಳು, ಸೋಯಾ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ. ಕ್ಷೇತ್ರದ ಸುಮಾರು 4 ಸಾವಿರ ರೈತರು ಬೆಳೆವಿಮೆ ಮಾಡಿಸಿದ್ದು, ಅವರಿಗೆ ಮಧ್ಯಂತರ ಪರಿಹಾರ ನೀಡುವ ಬದಲು ‘ಬೆಳೆ ಅಲ್ಪಸ್ವಲ್ಪ ಬಂದಿದೆ’ ಎಂದು ಬರೆದುಕೊಡುವಂತೆ ವಿಮಾ ಕಂಪನಿಗಳ ಪ್ರತಿನಿಧಿಗಳು ಒತ್ತಡ ಹೇರುತ್ತಿರುವ ದೂರುಗಳು ಬಂದಿವೆ ಎಂದರು.
ವಿಮಾ ಕಂತು ಪಾವತಿಸಿ ನೋಂದಣಿಯಾಗಿರುವ ಅರ್ಹ ರೈತರಿಗೆ ಕೂಡಲೇ ಮಧ್ಯಂತರ ಪರಿಹಾರ ನೀಡಬೇಕು. ನಂತರ ಕ್ರಾಪ್ ಕಟಿಂಗ್ ಪ್ರಯೋಗದ ಆಧಾರದ ಮೇಲೆ ಅಂತಿಮ ಪರಿಹಾರ ಮೊತ್ತವನ್ನು ಲೆಕ್ಕಹಾಕಿ ಪಾವತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಿಂದಲೇ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ರೈತರ ಸಂಕಷ್ಟದ ಸಂದರ್ಭದಲ್ಲಿ ವಿಮಾ ಕಂಪನಿಗಳು ನಿಯಮಗಳ ಹೆಸರಿನಲ್ಲಿ ರೈತರನ್ನು ಸತಾಯಿಸುವುದಾಗಲಿ, ಒತ್ತಡ ಹೇರುವುದಾಗಲಿ ಮಾಡಿದರೆ ಸಹಿಸುವುದಿಲ್ಲ. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಮುಂದಿನ ಆರು ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ದಕ್ಷಿಣ ಕ್ಷೇತ್ರದ 28 ಗ್ರಾಮಗಳಲ್ಲಿ ಅಗತ್ಯವಿರುವ ಕಡೆ ಕೊಳವೆಬಾವಿ ಕೊರೆದು ಜನರು ಹಾಗೂ ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯವಿರುವ ಸ್ಥಳಗಳಲ್ಲಿ ಗೋಶಾಲೆ ಆರಂಭಿಸುವ ಕುರಿತು ಅಧಿಕಾರಿಗಳು ಸ್ಥಳೀಯ ಪರಿಸ್ಥಿತಿ ಗಮನಿಸಿ ಕ್ರಮ ಕೈಗೊಳ್ಳಬೇಕು. ಸಾಕಷ್ಟು ಪ್ರಮಾಣದಲ್ಲಿ ಮೇವಿನ ದಾಸ್ತಾನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಸಭೆಗೆ ಗೈರಾದ ಕೆಲ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಮಾನಪ್ಪ ಕಟ್ಟೀಮನಿ, ಗ್ರೇಡ್-2 ತಹಶೀಲ್ದಾರ್, ಕೃಷಿ, ಪಶುಸಂಗೋಪನೆ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.