Shubhashaya News

ಸೆ.2ರಂದು ಡಾ. ಅಪ್ಪಾಜಿ ಅವರ ಪ್ರಥಮ ಪುಣ್ಯತಿಥಿ; ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು

ಶರಣಬಸವೇಶ್ವರ ದೇವಸ್ಥಾನದಲ್ಲಿ ಪವಿತ್ರ ಶ್ರಾವಣ ಮಾಸದ 40 ದಿನಗಳ ಉತ್ಸವ

ಕಲಬುರಗಿ: ಪವಿತ್ರ ಶ್ರಾವಣ ಮಾಸದ ಅಂಗವಾಗಿ ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿವರ್ಷ ನಡೆಯುವ 40 ದಿನಗಳ ವಾರ್ಷಿಕ ಉತ್ಸವವು ಬುಧವಾರದಿಂದ ಆರಂಭವಾಗಲಿದೆ. ಉತ್ಸವದ ಅಂಗವಾಗಿ ಧಾರ್ಮಿಕ ಪ್ರವಚನ, ವಿಶೇಷ ಉಪನ್ಯಾಸ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ತಿಳಿಸಿದರು.

ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಪ್ರಥಮ ಪುಣ್ಯತಿಥಿ ಹಾಗೂ ಸಂಸ್ಥಾನದ 7ನೇ ಮಹಾದಾಸೋಹ ಪೀಠಾಧಿಪತಿಗಳಾಗಿದ್ದ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರ 43ನೇ ಪುಣ್ಯತಿಥಿಯ ಅಂಗವಾಗಿ ಈ ಬಾರಿ 40 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶ್ರಾವಣ ಮಾಸದ 30 ದಿನಗಳ ಕಾಲ ಪ್ರತಿದಿನ ಸಂಜೆ ಒಂದು ಗಂಟೆ ಧಾರ್ಮಿಕ ಪ್ರವಚನ ನಡೆಯಲಿದೆ. ಕಲಬುರಗಿ ಜಿಲ್ಲೆಯ ಸುಂಟನೂರಿನ ಖ್ಯಾತ ಧಾರ್ಮಿಕ ಪ್ರವಚನಕಾರ ಶ್ರೀ ಬಂಡಯ್ಯ ಶಾಸ್ತ್ರಿಗಳು ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶರಣಬಸವೇಶ್ವರರ ಜೀವನ ಹಾಗೂ ಸಾಧನೆ ಕುರಿತು ಪ್ರವಚನ ನೀಡಲಿದ್ದಾರೆ. ಪ್ರವಚನಕ್ಕೂ ಮುನ್ನ ಪ್ರತಿದಿನ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳು ನಡೆಯಲಿವೆ ಎಂದು ಡಾ. ಅವ್ವಾಜಿ ಹೇಳಿದರು.

ಪವಿತ್ರ ಶ್ರಾವಣ ಮಾಸದ ಅಂಗವಾಗಿ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು ಸಾಂಪ್ರದಾಯಿಕ ಪಾದಪೂಜೆ, ತ್ರಿಕಾಲ ಪೂಜೆ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸಲಿದ್ದಾರೆ. ಪ್ರತಿ ಸೋಮವಾರ ನಡೆಯುವ ಶ್ರೀ ಶರಣಬಸವೇಶ್ವರರ ವಿಶೇಷ ಪಲ್ಲಕ್ಕಿ ಉತ್ಸವದಲ್ಲಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಪ್ರತಿದಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿದ್ದು, ಕಲಬುರಗಿಯ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಮಂಡಳಿಯಿಂದ ವಚನಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿಶೇಷ ಉಪನ್ಯಾಸ:

ನಾಡಿನ ಗಣ್ಯರು, ಶಿಕ್ಷಣ ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ. ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಜೀವನಕ್ಕೆ ಅವರು ನೀಡಿದ ಕೊಡುಗೆ, ಕಲ್ಯಾಣ ಕರ್ನಾಟಕವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ ಶಿಕ್ಷಣದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವಲ್ಲಿ ವಹಿಸಿದ ಪಾತ್ರದ ಕುರಿತು ಉಪನ್ಯಾಸಗಳಲ್ಲಿ ಬೆಳಕು ಚೆಲ್ಲಲಾಗುವುದು ಎಂದು ಡಾ. ಅವ್ವಾಜಿ ತಿಳಿಸಿದರು.

ಕಳೆದ 250ಕ್ಕೂ ಹೆಚ್ಚು ವರ್ಷಗಳಿಂದ ಪವಿತ್ರ ಶ್ರಾವಣ ಮಾಸದಲ್ಲಿ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಈ ಬೃಹತ್ ಸಾಮಾಜಿಕ ಹಾಗೂ ಧಾರ್ಮಿಕ ಉತ್ಸವವು ಈ ಬಾರಿ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ನೇತೃತ್ವದಲ್ಲಿ ಹಾಗೂ ಡಾ. ದಾಕ್ಷಾಯಿಣಿ ಅವ್ವಾಜಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಕ್ರೀಡಾಕೂಟ, ಮ್ಯಾರಥಾನ್, ಆರೋಗ್ಯ ಶಿಬಿರ

ಲಿಂಗೈಕ್ಯ ಪೂಜ್ಯ ಡಾ. ಅಪ್ಪಾಜಿ ಅವರ ಪ್ರಥಮ ಪುಣ್ಯತಿಥಿಯ ಅಂಗವಾಗಿ 40 ದಿನಗಳ ಅವಧಿಯಲ್ಲಿ ಕ್ರೀಡಾಕೂಟ, ಮ್ಯಾರಥಾನ್, ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಸ್ವಚ್ಛತಾ ಹಾಗೂ ಜಾಗೃತಿ ಅಭಿಯಾನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸ್ವಚ್ಛತಾ ಹಾಗೂ ಜಾಗೃತಿ ಅಭಿಯಾನ ನಡೆಯಲಿದ್ದು, ಮಹಿಳಾ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರಿಂದ ಬೈಕ್ ರ‍್ಯಾಲಿ ಕೂಡ ಆಯೋಜಿಸಲಾಗಿದೆ. ಅಪ್ಪಾಜಿ ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕೊಡುಗೆಗಳನ್ನು ಬಿಂಬಿಸುವ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಡಾ. ಅಪ್ಪಾಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಗಣ್ಯರು ಬರೆದ ಲೇಖನಗಳು ಹಾಗೂ ನೆನಪುಗಳನ್ನು ಒಳಗೊಂಡ, ಡಾ. ನೀಲಾಂಬಿಕಾ ಶೇರಿಕಾರ್ ಸಂಪಾದಿಸಿ ರಚಿಸಿರುವ ‘ಮಹಾಮಾನವ’ ಕೃತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಅವ್ವಾಜಿ ತಿಳಿಸಿದ್ದಾರೆ.

Leave A Reply

Your email address will not be published.