ಕಾಳಗಿ: 2025-26ನೇ ಸಾಲಿನ ಬೆಳೆ ವಿಮೆ ಪರಿಹಾರದಲ್ಲಿ ಕಾಳಗಿ ತಾಲೂಕಿನ ರೈತರಿಗಾದ ತಾರತಮ್ಯ ಖಂಡಿಸಿ ಮಂಗಳವಾರ ವಿವಿಧ ಮಠಾಧೀಶರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಹಮ್ಮಿಕೊಂಡ ಕಾಳಗಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ರೈತರ ಹೋರಾಟಕ್ಕೆ ವ್ಯಾಪಾರಸ್ಥರು ಹಾಗೂ ಸಾರಿಗೆ ಇಲಾಖೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಪಟ್ಟಣದ ಮಾರುಕಟ್ಟೆ, ಅಂಗಡಿ-ಮುಂಗಟ್ಟುಗಳು, ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ, ಬಸ್ ನಿಲ್ದಾಣ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಸುತ್ತಮುತ್ತ ಜನಸಂಚಾರ ವಿರಳವಾಗಿತ್ತು. ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪಟ್ಟಣ ಬಿಕೋ ಎನ್ನುತ್ತಿತ್ತು.
ತಾಲೂಕಿನ ವಿವಿಧ ಗ್ರಾಮಗಳಿಂದ ಸ್ವಯಂಪ್ರೇರಿತವಾಗಿ ಆಗಮಿಸಿದ ನೂರಾರು ರೈತರು ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಕಾಲ್ನಡಿಗೆ ಮೂಲಕ ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಿ ಹಳೆಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಚಿಂಚೋಳಿ–ಕಲಬುರಗಿ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತರು, ಜಿಲ್ಲೆಯ ವಿವಿಧ ತಾಲೂಕಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆ ಪರಿಹಾರ ಹಣ ಜಮೆ ಆಗಿವೆ. ಆದರೆ ಕಾಳಗಿ ತಾಲೂಕಿಗೆ ಮಾತ್ರ ಪ್ರಿಮಿಯಮ್ ಹಣಕ್ಕಿಂತ ಕಡಿಮೆ
ವಿಮೆ ಪರಿಹಾರ ನೀಡುವ ಮೂಲಕ ತಾರತಮ್ಯ ಮಾಡಿ
ರೈತರಿಗೆ ಅನ್ಯಾಯ ಮಾಡಲಾಗಿದೆ. ಅದನ್ನು ಸರಿಪಡಿಸಿ, ಅರ್ಹ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು ಹಾಗೂ ತಾಲೂಕನ್ನು ಬರಗಾರ ಘೋಷಣೆ ಮಾಡಿ ಪ್ರತಿ ಎಕರೆಗೆ 25ಸಾವಿರ ರೂ. ಪರಿಹಾರ ಹಣ ಜಮೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.
ಶಾಸಕ ಡಾ.ಅವಿನಾಶ ಜಾಧವ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ತಾಲೂಕಿನ ಹದಿನಾಲ್ಕು ಗ್ರಾಪಂ ವ್ಯಾಪ್ತಿಯಲ್ಲಿ ವಿಮೆ ಹಣ ಬಂದಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಗಮನಕ್ಕೆ ತರಲಾಗಿದೆ. ಸಚಿವರು ಬೆಳೆ ಹಾನಿ ಸಮೀಕ್ಷೆ ಪರಿಸೀಲನೆ ಅಧಿಕಾರಿಗಳ ವಿಶೇಷ ತಂಡ ರಚನೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಂಡು ರೈತರ ಖಾತೆಗೆ ನ್ಯಾಯಯುತ ಹಣ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಜಿಪಂ ಸದಸ್ಯ ರಾಜೇಶ್ ಗುತ್ತೇದಾರ ಮಾತನಾಡಿ, ತಾಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರದಲ್ಲಿ ಆದ ಅನ್ಯಾಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವ ಮೂಲಕ ರೈತರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.
ಕಲಬುರಗಿ- ಚಿಂಚೋಳಿ ರಾಜ್ಯ ಹೆದ್ದಾರಿ ಬಂದ್ ಮಾಡಿ
ಸುಮಾರು ಏಳು ಗಂಟೆಗಳ ಕಾಲ ಬೃಹತ್ ಪ್ರತಿಭಟನೆ ಮಾಡಿದ್ದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು. ನಂತರ ಕಲಬುರಗಿ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಅವರಿಗೆ ಮನವಿ ಪತ್ರಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಜಿಲ್ಲಾಧಿಕಾರಿಗಳು ಸಮೀಕ್ಷೆ ಪರಿಶೀಲನೆಗೆ ವಿಶೇಷ ಅಧಿಕಾರಿಗಳ ತಂಡ ರಚಿಸಿದ್ದಾರೆ. ಕ್ರಾಪ್ ಕಟಿಂಗ್ ಲೋಪದೋಷವಾಗಿದ್ದರೆ ರೈತರಿಗೆ ನ್ಯಾಯ ದೊರಕಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.
ಭರತನೂರ ಪೂಜ್ಯ ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು, ಮಾಜಿ ಸಂಸದ ಡಾ. ಉಮೇಶ ಜಾಧವ, ರೈತ ಸಂಘ ಹಾಗೂ ರೈತ ಸೇನೆ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ, ಶರಣಬಸಪ್ಪ ಮಮಶೆಟ್ಟಿ, ಶಿವರಾಜ ಪಾಟೀಲ ಗೋಣಗಿ, ಮಲ್ಲಿಕಾರ್ಜುನ ಪಾಟೀಲ ರುದನೂರ, ಮೋಹನ ಚಿನ್ನ, ಸುಂದರ ಸಾಗರ ಮಾತನಾಡಿದರು.
ಸೂಗುರ ಪೂಜ್ಯ ಡಾ. ಚನ್ನರುದ್ರಮುನಿ ಶಿವಾಚಾರ್ಯರರು, ರಟಕಲ್ ಪೂಜ್ಯ ನೀಲಕಂಠ ಮಹಾಸ್ವಾಮಿಗಳು, ಮಂಗಲಗಿ ಡಾ. ಶಾಂತಸೋಮನಾಥ ಶಿವಾಚಾರ್ಯರು, ರಾಯಕೊಡ ಪೂಜ್ಯ ಪ್ರಶಾಂತ ದೇವರು, ಕೋಡ್ಲಿ ಪೂಜ್ಯ ಬಸವಲಿಂಗ ಶಿವಾಚಾರ್ಯರು, ಹೊಸ್ಸಳ್ಳಿ ಪೂಜ್ಯ ಸಿದ್ಧಲಿಂಗ ಶಿವಾಚಾರ್ಯರರು, ಗೌರಿಗುಡ್ಡದ ಪೂಜ್ಯ ರೇವಣಸಿದ್ಧ ಶರಣರು, ರುಮ್ಮನಗುಡ ಏಕನಾಥ ಮಹಾರಾಜ, ರೈತರಾದ ರಮೇಶ ಹೆಬ್ಬಾಳ, ಸೋಮಶೇಖರ ಚಿಂಚೋಳಿ, ಜಗದೀಶ್ ಮಾಲಿಪಾಟೀಲ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಹಾಜರಿದ್ದರು.