Shubhashaya News

ಸುಲೇಪೇಟ ಗ್ರಾಮಕ್ಕೆ 1200 ವರ್ಷಗಳ ಇತಿಹಾಸ: ಅಸ್ಲಂ ಮ. ವಾಲಿಕಾರ

ಶಿವನ ಉಗ್ರ ಆರಾಧಕರಾದ ಕಾಪಾಲಿಕರ ನೆಲೆಯಾಗಿದ್ದ ಸುಲ್ಯಗ್ರಾಮ:

ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮಕ್ಕೆ ಸುಮಾರು 1200 ವರ್ಷಗಳ ಇತಿಹಾಸವಿದ್ದು, ಪ್ರಾಚೀನ ಕಾಲದಲ್ಲಿ ಶಿವನ ಉಗ್ರ ಆರಾಧಕರಾದ ಕಾಪಾಲಿಕರ ನೆಲೆಯಾಗಿತ್ತು ಎಂದು ಕಲಬುರಗಿಯ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಸ್ಲಂ ಮ. ವಾಲಿಕಾರ ಹೇಳಿದರು.

ಸುಲೇಪೇಟದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ವತಿಯಿಂದ ಆಯೋಜಿಸಿದ್ದ ‘ಸುಲ್ಯಗ್ರಾಮ ಚರಿತ್ರೆ ಮತ್ತು ಸಂಸ್ಕೃತಿ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಲೇಪೇಟದಲ್ಲಿ ರಾಷ್ಟ್ರಕೂಟರು ಹಾಗೂ ಕಲ್ಯಾಣಿ ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕಗಳು ಕಂಡುಬರುತ್ತವೆ. ಗ್ರಾಮದ ಎರಡು ಪ್ರಮುಖ ಶೈವ ದೇವಾಲಯಗಳು ಕಾಲಾಮುಖ ಪಂಥದ ಪ್ರಭಾವಕ್ಕೊಳಗಾಗಿರುವುದನ್ನು ಗಮನಿಸಬಹುದು. ಕಾಪಾಲಿಕರು ಮಾಂಸ ಸೇವನೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಇದೇ ಕಾರಣದಿಂದ ಗ್ರಾಮಕ್ಕೆ ‘ಸುಲ್ಯಗ್ರಾಮ’ ಎಂಬ ಹೆಸರು ಬಂದಿರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು.

‘ಸುಲ್ಯ’ ಎಂಬ ಪದಕ್ಕೆ ಸಂಸ್ಕೃತದಲ್ಲಿ ‘ಹುರಿದ ಮಾಂಸ’ ಎಂಬ ಅರ್ಥವಿದೆ. ಕಾಪಾಲಿಕರು ತಮ್ಮ ಜೀವನದ ಸಾರ್ಥಕತೆಗಾಗಿ ಪಂಚ ‘ಮ’ ಕಾರ ಸಿದ್ಧಿಗಳಾದ ಮತ್ಸ್ಯ, ಮಾಂಸ, ಮದ್ಯ, ಮುದ್ರಾ ಹಾಗೂ ಮೈಥುನಗಳಿಗೆ ಮಹತ್ವ ನೀಡುತ್ತಿದ್ದರು ಎಂದು ವಾಲಿಕಾರ ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಜಗನ್ನಾಥ ಶೇರಿಕಾರ, ಇತಿಹಾಸ ನಮಗೆ ದಾರಿದೀಪದಂತೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ ಇತಿಹಾಸದಲ್ಲಿಯೂ ಒಳ್ಳೆಯ ಹಾಗೂ ಕೆಟ್ಟ ಘಟನೆಗಳು ಇರುತ್ತವೆ. ಎರಡೂ ಮುಖಗಳನ್ನು ಸಮಗ್ರವಾಗಿ ಕಟ್ಟಿಕೊಟ್ಟಾಗ ಮಾತ್ರ ಪರಿಪೂರ್ಣ ಇತಿಹಾಸ ರೂಪುಗೊಳ್ಳುತ್ತದೆ. ಒಂದು ಮುಖವನ್ನು ಮಾತ್ರ ಹೇಳಿದರೆ ಅದು ಅಪೂರ್ಣ ಇತಿಹಾಸವಾಗುತ್ತದೆ ಎಂದರು.

ಶಾಸನಗಳಲ್ಲಿ ‘ಸುಲ್ಯಗ್ರಾಮ’ ಎಂದು ಉಲ್ಲೇಖವಾಗಿರುವ ಇಂದಿನ ಸುಲೇಪೇಟ ಗ್ರಾಮವು ಹಿಂದೆ ಸುಲಗೇಮಿ, ಸುಲೇಗಾಂವ್ ಹಾಗೂ ಸುಲ್ಹಾಪೇಟ ಸೇರಿದಂತೆ ಹಲವು ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಇದು ತಾಲೂಕಿನ ಪ್ರಮುಖ ಪಟ್ಟಣ ಹಾಗೂ ವ್ಯಾವಹಾರಿಕ ಕೇಂದ್ರವಾಗಿದ್ದು, ಇಲ್ಲಿನ ವೀರಭದ್ರೇಶ್ವರ ವೈಭವದ ಜಾತ್ರೆ ಗ್ರಾಮದ ಸಾಂಸ್ಕೃತಿಕ ಹಿರಿಮೆಯನ್ನು ಸಾರುತ್ತದೆ ಎಂದು ಅಸ್ಲಂ ಮ. ವಾಲಿಕಾರ ತಿಳಿಸಿದರು.

ನಿಜಾಮರ ಆಡಳಿತದ ಅವಧಿಯಲ್ಲಿ ನಿರ್ಮಾಣಗೊಂಡ ಹೊಸ ಊರಿನ ಪಗಡೆ ಬಜಾರ್ ಕೂಡ ಸುಲೇಪೇಟದ ಪ್ರಮುಖ ಐತಿಹಾಸಿಕ ವಿಶೇಷತೆಗಳಲ್ಲಿ ಒಂದಾಗಿದೆ ಎಂದರು.

ಕಲಬುರಗಿಯ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಸವರಾಜ ಬಾಗಾ ಮಾತನಾಡಿ, ಸುಲೇಪೇಟ ಹಿಂದಿನಿಂದಲೂ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಗ್ರಾಮದಲ್ಲಿ ನವಜಾತ ಶಿಶುಗಳಿಗೆ ‘ಮುರು’ (ಮತ್ಸ್ಯ) ಊರುವ ವಿಶಿಷ್ಟ ಪರಂಪರೆ ಇಂದಿಗೂ ಕಂಡುಬರುತ್ತದೆ. ವೇಷಗಾರರ ಕಾಡುಪಾಪ ಸಮುದಾಯದವರು ಇಲ್ಲಿ ನೆಲೆಸಿದ್ದಾರೆ. ನಿಜಾಮರ ಕಾಲದಲ್ಲಿ ಗ್ರಾಮದಲ್ಲಿ ಹಲವು ಬಟ್ಟೆ ಗಿರಣಿಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ದಶರಥ ನಾಯನೂರು ಮಾತನಾಡಿ, ಇತಿಹಾಸ ಕೆಲವೊಮ್ಮೆ ಗೊಂದಲ ಮೂಡಿಸುತ್ತದೆ. ವಿಭಿನ್ನ ಇತಿಹಾಸಕಾರರು ಒಂದೇ ಘಟನೆಯನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸುವುದರಿಂದ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲ ಸಹಜ. ಆದರೆ ಇತಿಹಾಸಾಸಕ್ತ ವಿದ್ಯಾರ್ಥಿಗಳು ಯಾವುದೇ ವಿಚಾರವನ್ನು ಕಡೆಗಣಿಸದೆ ಎಲ್ಲ ಆಯಾಮಗಳನ್ನು ಓದಿ ಅಧ್ಯಯನ ಮಾಡಿದಾಗ ಮಾತ್ರ ಸಮಗ್ರ ಇತಿಹಾಸದ ಅರಿವು ಮೂಡುತ್ತದೆ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡದ ಜಿಲ್ಲಾ ಸಂಯೋಜಕ ವೀರಶೆಟ್ಟಿ ಗಾರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ಅನಾವರಣಗೊಳಿಸುವಲ್ಲಿ ಸಂಘವು ಮಹತ್ವದ ಪಾತ್ರ ವಹಿಸುತ್ತಿದ್ದು, ನಾಡಿನ ಚರಿತ್ರೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದರು.

ಜನಾರ್ದನ ಸ್ವಾಗತಿಸಿದರು. ರೇವತಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಬಡಿಗೇರ ವಂದಿಸಿದರು.

Leave A Reply

Your email address will not be published.