ಯುವಕನ ಹತ್ಯೆ; ಮೃತದೇಹವಿಟ್ಟು ಬೃಹತ್ ಪ್ರತಿಭಟನೆ
ಆರೋಪಿಗಳ ಬಂಧನ, ₹50 ಲಕ್ಷ ಪರಿಹಾರ ಹಾಗೂ ಸರ್ಕಾರಿ ಉದ್ಯೋಗಕ್ಕೆ ಆಗ್ರಹ
ಸೇಡಂ: ತಾಲೂಕಿನ ಉಡಗಿ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವಕನನ್ನು ಅನ್ಯಕೋಮಿನ ಯುವಕರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಮೃತ ಯುವಕನ ಕುಟುಂಬಕ್ಕೆ ಸರ್ಕಾರದಿಂದ ₹50 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮಾದಿಗ ಸಮುದಾಯದ ಮುಖಂಡರು ಸೋಮವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.

ಉಡಗಿ ಗ್ರಾಮದ ಭಾಗ್ಯವಂತ (22) ಮೃತಪಟ್ಟ ಯುವಕ. ಅದೇ ಗ್ರಾಮದ ನಬಿ ಎಂಬ ಯುವಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ಜಗಳ ವಿಕೋಪಕ್ಕೆ ತಿರುಗಿ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಲಬುರಗಿಯಿಂದ ಮೃತ ಯುವಕನ ಮೃತದೇಹವನ್ನು ಬಸವೇಶ್ವರ ವೃತ್ತದ ಸಮೀಪಕ್ಕೆ ತರಲಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮೃತದೇಹವನ್ನು ಸ್ಥಳದಲ್ಲಿರಿಸಿ ಕುಟುಂಬಸ್ಥರು, ಸಮಾಜದ ಮುಖಂಡರು ಹಾಗೂ ಯುವಕರು ಕೆಲಕಾಲ ರಸ್ತೆ ಮೇಲೆ ಕುಳಿತು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಅವರು ಮೃತ ಯುವಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, ಸಚಿವರ ತವರು ಕ್ಷೇತ್ರದಲ್ಲಿಯೇ ವೈಯಕ್ತಿಕ ಜಗಳದ ಹಿನ್ನೆಲೆಯಲ್ಲಿ ಅನ್ಯಕೋಮಿನ ಯುವಕರು ಗುಂಪುಗೂಡಿ ಬಂದು ಹತ್ಯೆ ನಡೆಸಿ ಭಯದ ವಾತಾವರಣ ನಿರ್ಮಿಸಿರುವುದು ಆತಂಕಕಾರಿ ಸಂಗತಿಯಾಗಿದೆ. ಸ್ಥಳೀಯವಾಗಿ ಸಚಿವರು ಇದ್ದರೂ ಮೃತ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಈ ಹಿಂದೆ ಕೂಡ ಹಿಂದೂ ಯುವಕರ ಮೇಲೆ ಹಲ್ಲೆ ನಡೆದಿರುವ ಘಟನೆಗಳು ವರದಿಯಾಗಿವೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಐವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವುದರ ಜೊತೆಗೆ, ದಲಿತ ದೌರ್ಜನ್ಯ ಕಾಯ್ದೆಯಡಿ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ವಿಜಯಕುಮಾರ್ ಆಡಕಿ, ಶಿವಕುಮಾರ್ ಬೋಳಶೆಟ್ಟಿ, ಓಂಪ್ರಕಾಶ್ ಪಾಟೀಲ್ ತರನಳ್ಳಿ, ಶಿವಪುತ್ರಪ್ಪ ಮೋಗ, ಭೀಮಾಶಂಕರ ಕೋರವಿ, ಹಣಮಂತ ಭರತನೂರ, ರಾಮು ಕಣ್ಣಿಕಲ್, ಮಾರುತಿ ಮುಗುಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.