ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಅಡಿಯಲ್ಲಿ ಯಾದಗಿರಿ ಜಿಲ್ಲೆಯ ಯುವ ಚಿತ್ರಕಲಾವಿದ ಅಮೀನ ರೆಡ್ಡಿ ಎನ್. ಅವರ ‘ಬ್ಲಾö್ಯಕ್ ಪ್ಲಾವರ್-೪’ ಶೀರ್ಷಿಕೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಆ. ೧೫ ರಿಂದ ೧೭, ೨೦೨೬ ರವರೆಗೆ ನಗರದ ಅನುಚಂದ್ರ ಆರ್ಟ್ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಚಿತ್ರಕಲಾ ಪ್ರದರ್ಶನವನ್ನು ಆ. ೧೫, ೨೦೨೬ ರಂದು ಸಾಯಂಕಾಲ ೪:೩೦ ಗಂಟೆಗೆ ಯಾದಗಿರಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಉತ್ತರಾದೇವಿ ಎಸ್. ಮಠಪತಿ ಇವರು ಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಚಿತ್ರಕಲಾವಿದ ಡಾ. ಅಶೋಕ್ ಶೆಟಗಾರ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಡಾ. ಬಸವರಾಜ ಎಸ್. ಕಲೆಗಾರ ಅವರು ಆಗಮಿಸಲಿದ್ದಾರೆ. ಹಿರಿಯ ಚಿತ್ರಕಲಾವಿದ ಚಂದ್ರಹಾಸ ವಾಯ್ ಜಾಲಿಹಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ಅಮೀನ ರೆಡ್ಡಿ ಎನ್. ಅವರು ವಿವಿಧ ಮಾಧ್ಯಮದಲ್ಲಿ ರಚಿಸಿದ ಸುಮಾರು ೩೦ಕ್ಕೂ ಹೆಚ್ಚು ವರ್ಣಚಿತ್ರ ಮತ್ತು ರೇಖಾಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇವರ ಚಿತ್ರಕಲಾ ಕೃತಿಗಳ ಮುಖ್ಯ ಆಶಯವು ನಿಸರ್ಗದ ಅದ್ಭುತ ಸೌಂದರ್ಯ ಹಾಗೂ ಮಾನವನ ಅತಿಯಾದ ದುರುಪಯೋಗದಿಂದ ನಿಸರ್ಗಕ್ಕೆ ಉಂಟಾಗುತ್ತಿರುವ ಹಾನಿಯನ್ನು ಬಣ್ಣಗಳ, ರೇಖೆಗಳ ಮೂಲಕ ವ್ಯಕ್ತಪಡಿಸಿದ್ದಾರೆ. ನಿಸರ್ಗವು ಮಾನವನಿಗೆ ದೊರೆತ ಅಮೂಲ್ಯ ವರವಾಗಿದ್ದು, ಹಸಿರು ಕಾಡುಗಳು, ಬೆಟ್ಟಗಳು, ನದಿಗಳು, ಜಲಪಾತಗಳು, ಹೂವುಗಳು, ಪ್ರಾಣಿ-ಪಕ್ಷಿಗಳು ಮತ್ತು ನೀಲಾಕಾಶ ಇವೆಲ್ಲವು ಭೂಮಿಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇಂತಹ ನೈಸರ್ಗಿಕ ದೃಶ್ಯಾವಳಿಗಳನ್ನು ಹಸಿರು, ನೀಲಿ, ಹಳದಿ, ಕಿತ್ತಳೆ ಮತ್ತು ವಿವಿಧ ಬಣ್ಣಗಳ ಸಮನ್ವಯದ ಮೂಲಕ ಚಿತ್ರಗಳಲ್ಲಿ ಸುಂದರವಾಗಿ ಅಭಿವ್ಯಕ್ತಿಸಿದ್ದಾರೆ.
ದೃಶ್ಯಕಲೆಯಲ್ಲಿ ಸ್ನಾತಕೋತ್ತರ ಮತ್ತು ಎಂ.ಫಿಲ್ ಪದವಿ ಪಡೆದಿರುವ ಅಮೀನ ರೆಡ್ಡಿ ಎನ್. ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಮೂರು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸಿದ್ದು, ಮೂರಕ್ಕೂ ಹೆಚ್ಚು ಸಮೂಹ ಚಿತ್ರಕಲಾ ಪ್ರದರ್ಶನ ಮತ್ತು ಕಲಾ ಶಿಬಿರಗಳಲ್ಲಿ ಬಾಗವಹಿಸಿರುತ್ತಾರೆ.