ವಿದೇಶಿ ನಿಧಿ, ದೇಶೀಯ ಭದ್ರತೆ ಮತ್ತು ಪ್ರಜಾಸತ್ತೆಯ ಪ್ರಶ್ನೆಗಳು
The Foreign Contribution (Regulation) Amendment Bill, 2026
ಜಾಗತೀಕರಣದ ಯುಗದಲ್ಲಿ ಬಂಡವಾಳವು ಗಡಿಗಳನ್ನು ದಾಟಿ ಹರಿಯುವುದು ಆರ್ಥಿಕ ವಿದ್ಯಮಾನದ ಆಚೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಸಮಾಜ ಸೇವೆ ಮತ್ತು ಹಕ್ಕುಗಳ ಹೋರಾಟದ ಹೆಸರಿನಲ್ಲಿ ಹರಿದುಬರುವ ವಿದೇಶಿ ದೇಣಿಗೆಯು ಯಾವುದೇ ಸಾರ್ವಭೌಮ ರಾಷ್ಟ್ರದ ಆಂತರಿಕ ರಾಜಕಾರಣದ ಮೇಲೆ ಗಾಢವಾದ ಪ್ರಭಾವ ಬೀರಬಲ್ಲದು. ಇತ್ತೀಚೆಗೆ ಕೇಂದ್ರ ಸರ್ಕಾರವು ‘ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ’ (FCRA 2026) ಯನ್ನು ಮತ್ತಷ್ಟು ಬಿಗಿಗೊಳಿಸುವ ಮೂಲಕ ಇಂತಹ ಬಾಹ್ಯ ಪ್ರಭಾವಗಳಿಗೆ ಕಡಿವಾಣ ಹಾಕುವ ಮಹತ್ವದ ಹೆಜ್ಜೆ ಇಟ್ಟಿದೆ. ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಪಾರದರ್ಶಕತೆಯ ದೃಷ್ಟಿಯಿಂದ ಈ ತಿದ್ದುಪಡಿಯು ಒಂದು ನಿರ್ಣಾಯಕ ಆಡಳಿತಾತ್ಮಕ ಮೈಲುಗಲ್ಲಾಗಿದೆ.
ಯಾವುದೇ ದೇಶದ ಆಂತರಿಕ ಭದ್ರತೆಗೆ ಹೊರಗಿನಿಂದ ಬರುವ ನಿಯಂತ್ರಣವಿಲ್ಲದ ಹಣಕಾಸು ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಆರ್ಥಿಕ ನೆರವಿನ ಮುಖವಾಡದ ಹಿಂದೆ ಕಾರ್ಯನಿರ್ವಹಿಸುವ ಕೆಲವು ಸಂಸ್ಥೆಗಳು, ವ್ಯವಸ್ಥಿತವಾಗಿ ದೇಶದ ಅಭಿವೃದ್ಧಿ ಯೋಜನೆಗಳಿಗೆ ತಡೆವೊಡ್ಡುವ ಅಥವಾ ಸಾಮಾಜಿಕ ಅಶಾಂತಿಯನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿರುವ ಉದಾಹರಣೆಗಳು ಜಾಗತಿಕ ಮಟ್ಟದಲ್ಲಿ ಹೇರಳವಾಗಿವೆ. ಭೌಗೋಳಿಕ ರಾಜಕಾರಣದಲ್ಲಿ ಶತ್ರು ರಾಷ್ಟ್ರಗಳು ನೇರ ಯುದ್ಧದ ಬದಲಿಗೆ, ಆಂತರಿಕ ಸಂಸ್ಥೆಗಳಿಗೆ ಹಣದ ಹೊಳೆ ಹರಿಸಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ತಂತ್ರವನ್ನು ವ್ಯಾಪಕವಾಗಿ ಬಳಸುತ್ತಿವೆ. ಈ ಹಿನ್ನೆಲೆಯಲ್ಲಿ, ಪ್ರತಿಯೊಂದು ವಿದೇಶಿ ಡಾಲರ್‌ನ ಮೂಲ ಮತ್ತು ಬಳಕೆಯ ಉದ್ದೇಶವನ್ನು ನಿಖರವಾಗಿ ಲೆಕ್ಕಹಾಕುವ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಪ್ರಭುತ್ವದ ಜವಾಬ್ದಾರಿಯುತ ನಡೆಯಾಗಿದೆ. ನೈಜ ಉದ್ದೇಶದಿಂದ ಹಾಗೂ ಪಾರದರ್ಶಕತೆಯಿಂದ ಕೆಲಸ ಮಾಡುವ ಸಂಸ್ಥೆಗಳಿಗೆ ಲೆಕ್ಕಪತ್ರ ಒದಗಿಸುವುದು ಎಂದಿಗೂ ಹೊರೆಯಾಗುವುದಿಲ್ಲ.
ಸರ್ಕಾರ ಮತ್ತು ಕಟ್ಟಕಡೆಯ ನಾಗರಿಕನ ನಡುವಿನ ಕಂದಕವನ್ನು ಬೆಸೆಯುವಲ್ಲಿ ನಾಗರಿಕ ಸಮಾಜ ಮತ್ತು ಸ್ವಯಂಸೇವಾ ಸಂಸ್ಥೆಗಳ (NGO) ಪಾತ್ರ ಅಗಾಧವಾದದ್ದು. ಕಠಿಣ ನಿಯಮಾವಳಿಗಳು ದೇಶವಿರೋಧಿ ಶಕ್ತಿಗಳನ್ನು ಮಟ್ಟಹಾಕುವ ಉದ್ದೇಶ ಹೊಂದಿದ್ದರೂ, ಅವುಗಳ ಅನುಷ್ಠಾನವು ತಳಮಟ್ಟದಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಸಣ್ಣಪುಟ್ಟ ಸಂಸ್ಥೆಗಳ ಉಸಿರುಗಟ್ಟಿಸುವ ಅಪಾಯವನ್ನು ಒಳಗೊಂಡಿರುತ್ತದೆ. ಭಾರಿ ಪ್ರಮಾಣದ ಆಡಳಿತಾತ್ಮಕ ಮತ್ತು ಕಾನೂನುಬದ್ಧ ದಾಖಲಾತಿಗಳನ್ನು ನಿರ್ವಹಿಸುವುದು ಗ್ರಾಮೀಣ ಭಾಗದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಅಂಚಿಗೆ ತಳ್ಳಲ್ಪಟ್ಟವರ ಶ್ರೇಯೋಭಿವೃದ್ಧಿಗಾಗಿ ದುಡಿಯುವ ಅನೇಕ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸುತ್ತದೆ.
ಕಾನೂನಿನ ಜಾರಿಗಿಂತಲೂ, ಅದರ ಶಬ್ದಾರ್ಥಗಳ ವ್ಯಾಖ್ಯಾನಗಳು ಸಮಾಜದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ‘ದೇಶವಿರೋಧಿ’ ಅಥವಾ ‘ಅಶಾಂತಿ ಸೃಷ್ಟಿಸುವ’ ಚಟುವಟಿಕೆಗಳು ಎಂಬ ಪದಗುಚ್ಛಗಳ ವ್ಯಾಖ್ಯಾನವು ಅನೇಕ ಬಾರಿ ಆಡಳಿತಾರೂಢ ವ್ಯವಸ್ಥೆಯ ಮತ್ತು ಅಧಿಕಾರಿಶಾಹಿಯ ವಿವೇಚನೆಗೆ ಒಳಪಟ್ಟಿರುತ್ತದೆ. ಪರಿಸರ ಸಂರಕ್ಷಣೆಗಾಗಿ ನಡೆಯುವ ಹೋರಾಟಗಳು ಅಥವಾ ತಳಸಮುದಾಯಗಳ ಹಕ್ಕುಗಳಿಗಾಗಿ ಧ್ವನಿಯೆತ್ತುವ ಸಂಸ್ಥೆಗಳನ್ನು ‘ಅಭಿವೃದ್ಧಿ ವಿರೋಧಿಗಳು’ ಎಂದು ಮುದ್ರೆ ಒತ್ತುವ ಪ್ರವೃತ್ತಿ ಅಧಿಕಾರಶಾಹಿಯಲ್ಲಿ ಬೇರೂರಿರುತ್ತದೆ. ಇಂತಹ ಸಂದರ್ಭದಲ್ಲಿ, ಕಾಯ್ದೆಯ ಕಠಿಣತೆಯು ಕೇವಲ ವಿದೇಶಿ ಷಡ್ಯಂತ್ರಗಳನ್ನು ತಡೆಯುವುದಕ್ಕೆ ಸೀಮಿತವಾಗಿರಬೇಕು. ಜೊತೆಗೆ ಅದು ವ್ಯವಸ್ಥೆಯನ್ನು ಪ್ರಶ್ನಿಸುವ ದನಿಯನ್ನು ಹತ್ತಿಕ್ಕುವ ಆಡಳಿತಾತ್ಮಕ ಅಸ್ತ್ರವಾಗಿ ಬಳಕೆಯಾಗದಂತೆ ಎಚ್ಚರವಹಿಸುವುದು ಪ್ರಬುದ್ಧ ಸಮಾಜದ ಬಹುದೊಡ್ಡ ಹೊಣೆಗಾರಿಕೆಯಾಗಿದೆ.
ರಾಷ್ಟ್ರೀಯ ಭದ್ರತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳೆರಡೂ ಒಂದು ಸ್ವತಂತ್ರ ರಾಷ್ಟ್ರದ ಸಮಾನ ಅಡಿಪಾಯಗಳು. ಪಾರದರ್ಶಕತೆಯ ಹೆಸರಿನಲ್ಲಿ ಜಾರಿಗೆ ಬರುವ ಕಾನೂನುಗಳು ದೇಶದ ಸಾರ್ವಭೌಮತೆಯನ್ನು ಕಾಪಾಡುವ ಉಕ್ಕಿನ ಕೋಟೆಯಾಗಬೇಕೇ ಹೊರತು, ಪ್ರಜಾಸತ್ತಾತ್ಮಕ ಸಂವಾದಗಳನ್ನು ತಡೆಯುವ ಗೋಡೆಯಾಗಬಾರದು. ಸರ್ಕಾರದ ಈ ಹೊಸ ತಿದ್ದುಪಡಿಯು ನೈಜ ಸಮಾಜ ಸೇವಕರಿಗೆ ವಿಶ್ವಾಸ ತುಂಬುವ ಮತ್ತು ವಿದೇಶಿ ಷಡ್ಯಂತ್ರಗಳನ್ನು ಬೇರುಮಟ್ಟದಲ್ಲಿ ಚಿವುಟಿಹಾಕುವ ನಿಟ್ಟಿನಲ್ಲಿ ಯಶಸ್ವಿಯಾಗಬೇಕಾದರೆ, ಕಾನೂನಿನ ಜಾರಿಯಲ್ಲಿ ತಟಸ್ಥತೆ ಮತ್ತು ನಿಷ್ಪಕ್ಷಪಾತ ಧೋರಣೆ ಅತ್ಯಗತ್ಯ.
ಒಟ್ಟಾರೆಯಾಗಿ, ನಿಯಂತ್ರಣಗಳು ದೇಶದ ಹಿತದೃಷ್ಟಿಯಿಂದ ಅನಿವಾರ್ಯವಾಗಿವೆ. ಬಲಿಷ್ಠವಾದ ಪ್ರಭುತ್ವ ಮತ್ತು ಕ್ರಿಯಾಶೀಲವಾದ ನಾಗರಿಕ ಸಮಾಜಗಳೆರಡೂ ಪರಸ್ಪರ ನಂಬಿಕೆ ಹಾಗೂ ಜವಾಬ್ದಾರಿಯಿಂದ ಒಟ್ಟಾಗಿ ಹೆಜ್ಜೆ ಹಾಕಿದಾಗ ಮಾತ್ರ, ಅಭಿವೃದ್ಧಿ ಮತ್ತು ಭದ್ರತೆಗಳು ನೈಜ ಅರ್ಥದಲ್ಲಿ ಸಾಕಾರಗೊಳ್ಳುತ್ತವೆ. ಕಾನೂನಿನ ಚೂಪಾದ ಅಂಚು ಭ್ರಷ್ಟರನ್ನು ಮತ್ತು ಷಡ್ಯಂತ್ರಕಾರರನ್ನು ಮಾತ್ರ ಗುರಿಯಾಗಿಸಲಿ, ಬದಲಾಗಿ ಸಮಾಜವನ್ನು ಕಟ್ಟುವ ಪ್ರಾಮಾಣಿಕ ಕೈಗಳನ್ನು ಅದು ಪ್ರೋತ್ಸಾಹಿಸುವಂತಿರಲಿ.
ಶಿವರಾಜ ಸೂ. ಸಣಮನಿ, ಮದಗುಣಕಿ
9739741141