ಅದ್ಯಾಕೋ ಗೊತ್ತಿಲ್ಲ. ಇಂದು ಬೆಳಗ್ಗೆ ೧೧ ಗಂಟೆಯಾಗಿರಬಹುದು. ಮಾಧ್ಯಮ ಮಿತ್ರ ಸಂಗಮನಾಥ ರೇವತಗಾಂವ ಅವರೊಂದಿಗೆ ಮಾತನಾಡುತ್ತ ಜಯತೀರ್ಥ ಕಾಗಲಕರ್ ಗುಣಮುಖವಾಗಿದ್ದಾರಾ? ಎಂದು ಕೇಳಿದೆ.
ದೋಸ್ತಾ ನೀ ಎಲ್ಲಿದಿ. ಎರಡ್ಮೂರು ದಿನ ಆಯ್ತು ವೆಂಟಿಲೇಟರ್ನಲ್ಲೇ ಇದ್ದಾರೆ. ಅವರಿಗೆ ಅಗತ್ಯವಾಗಿದ್ದ ಇಂಜೆಕ್ಷನ್ (ರೆಮಿಡಿಸಿವಿಆರ್) ಎಲ್ಲ ಕೊಡಲಾಗಿದೆ. ಆದರೆ ವೈದ್ಯರು 90% ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಉಳಿದರೆ ಮಿರ್ಯಾಕಲ್ ಎಂದಿದ್ದಾರೆ ಎಂದು ಹೇಳಿದ.
ಕಲಬುರಗಿಯ ಮಾಧ್ಯಮ ಮಿತ್ರರಿಗೆ ಸೋಂಕು ತಗುಲಿದ್ದು, ಯರ್ಯಾರು ಹೋಮ್ ಐಸೋಲೇಷನ್ ನಲ್ಲಿ ಇದ್ದಾರೆ, ಯಾರ್ಯಾರು ಗುಣಮುಖರಾಗಿದ್ದಾರೆ ಎಂದು ಮಾತನಾಡುತ್ತ ಕಾಗಲ್ಕರ್ ಅವರ ಒಳ್ಳೆಯ ಗುಣಗಳನ್ನು ಪರಸ್ಪರ ಕೊಂಡಾಡಿದೇವು. ಛೇ ಕೊರೊನಾ ನಿನಗಿಲ್ಲವೇ? ಒಂದಿಷ್ಟು ಕರುಣೆಯೇ? ಎಂದು ಪರಸ್ಪರ ಶಾಪ ಹಾಕಿದೆವು.
ಇದಾಗಿ ಅರ್ಧಗಂಟೆ ಕೂಡ ಆಗಿರಲಿಕ್ಕಿಲ್ಲ. ಕೆಲಸದ ನಿಮಿತ್ತ ಹೊರಗಡೆ ಬಂದಿದ್ದ ನಾನು, ಜೇಬಿನಲ್ಲಿದ್ದ ಮೊಬೈಲ್ ತೆಗೆದು ಇಂಟರ್ ನೆಟ್ ಆನ್ ಮಾಡಿದೆ. ಅವರು ಕೋವಿಡ್ ಗೆ ಬಲಿಯಾದ ಸುದ್ದಿ ಮಹಿಪಾಲರೆಡ್ಡಿ ಮುನ್ನೂರ ಅವರಿಂದ ತಿಳಿಯಿತು. ಎದೆ ಧಸಕ್ಕೆಂದಿತು.
ಹಿತ, ಮಿತಭಾಷಿಯಾಗಿದ್ದ ಕಾಗಲಕರ್ ಅವರನ್ನು ನಾನು ಸುಮಾರು 20 ವರ್ಷಗಳಿಂದ ಬಲ್ಲೆ. ನಾವಾದರೂ ರಾಜಕಾರಣಿಗಳು ಪಕ್ಷ ಬದಲಾಯಿಸುವಂತೆ ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡಿದವರು. ಆದರೆ ಕಾಗಲ್ ಕರ್ ಮಾತ್ರ ಅದೇ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲೇ ವರದಿಗಾರ, ಹಿರಿಯ ವರದಿಗಾರ, ಮುಖ್ಯ ವರದಿಗಾರ ಕೊನೆಗೆ ಸ್ಥಾನಿಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ತೀರಾ ಇತ್ತೀಚಿಗೆ ನಮ್ಮ ಇ-ಮೀಡಿಯಾದಲ್ಲಿ ಬರುವ ಸುದ್ದಿಗಳು ಕಾಪಿ ಆಗದಿದ್ದಾಗ, ಸರ್, ನುಡಿ ಕನ್ವರ್ಟ್ ಮಾಡಿ ಕಳಿಸಿ ಎಂದು ವಾಟ್ಸ್ ಆಪ್ ಮೂಲಕ ಮೆಸೆಜ್ ಕಳಿಸುತ್ತಿದ್ದರು. ನಾನು ಕಳುಹಿಸಿದ ಸುದ್ದಿಗಳನ್ನು ತಮ್ಮ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿಸುವುದಲ್ಲದೆ ನನ್ನ ವಾಟ್ಸ್ ಆಪ್ ಗೆ ಆ ಸುದ್ದಿ ತುಣುಕನ್ನು ಫಾರ್ವರ್ಡ್ ಮಾಡುತ್ತಿದ್ದರು.
ಆಶ್ಚರ್ಯದ ಸಂಗತಿಯೆನೆಂದರೆ ನಿನ್ನೆ ಕೂಡ ಒಂದು ಸುದ್ದಿಯನ್ನು ಅವರ ಮೇಲ್ ಗೆ ಫಾರ್ವರ್ಡ್ ಮಾಡಿದ್ದೆ. ಇದುವೇ ಅವರಿಗೆ ನಾನು ಕಳಿಸುವ ಮೇಲ್ ಇದೇ ಕೊನೆಯಾಗಿರುತ್ತದೆ ಎಂದು ನಾನು ನಂಬಿರಲೇ ಇಲ್ಲ. ಅವರು ಈಗ ನಮ್ಮೊಂದಿಗಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ.
ಮಧುಮೇಹ ದೇಹಕ್ಕೆ ಕೊರೊನಾ ವೈರಸ್ ಅಟ್ಯಾಕ್ ಮಾಡಿದಾಗಿನಿಂದ ಇವರು ಬಹಳ ಹೆದರಿದ್ದರು ಎಂದು ಕೇಳಿದ್ದೆ. ತೀರಾ ಸಂಕೋಚದ ಸ್ವಭಾವದ ಇವರು ಧೈರ್ಯದಿಂದ ಕೊರೊನಾ ಎದುರಿಸಿದ್ದರೆ ಉಳಿಯುತ್ತಿದ್ದರೇನೋ! ಪತ್ರಕರ್ತರು ಕೊರೊನಾ ಫ್ರಂಟ್ ವಾರಿಯರ್ಸ್ ಎನ್ನುವ ಸರ್ಕಾರ ಅಥವಾ ಸಂಸ್ಥೆಯವರು ಇನ್ನಾದರೂ ಪತ್ರಕರ್ತರಿಗೆ ಭದ್ರತೆ ಒದಗಿಸಬೇಕಾಗಿದೆ.