Shubhashaya News

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಿದರೆ ಸುಸ್ಥಿರ ಭವಿಷ್ಯ ನಿರ್ಮಾಣ: ಧರ್ಮಣ್ಣ ಧನ್ನಿ

ಕಡಗಂಚಿಯಲ್ಲಿ ಸಸಿ ನೆಡುವ, ಗುರುವಂದನಾ; ಶಿಕ್ಷಕರಿಗೆ ಹಳೆ ವಿದ್ಯಾರ್ಥಿಗಳಿಂದ ಸನ್ಮಾನ

ಆಳಂದ: ಕಡಗಂಚಿಯಲ್ಲಿ ಆಯೋಜಿಸಿದ್ದ ಸಸಿ ನೆಡುವ ಹಾಗೂ ಗುರುವಂದನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಧರ್ಮಣ್ಣ ಹೆಚ್. ಧನ್ನಿ, ಶಾಲೆಯ ಮುಖ್ಯಗುರು ಲಿಂಗರಾಜ ಎಸ್. ಪಾಟೀಲ, ಮುಖ್ಯಗುರು ಚಂದ್ರಕಲಾ ಹಾಗೂ ಇತರರು ಉಪಸ್ಥಿತರಿದ್ದರು.

ಆಳಂದ: ಪರಿಸರ ಸಂರಕ್ಷಣೆ ಬಗ್ಗೆ ಇಂದಿನ ಮಕ್ಕಳಲ್ಲಿ ಅರಿವು ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುವುದು ಅತ್ಯಗತ್ಯವಾಗಿದ್ದು, ಪರಿಸರ ಪ್ರಜ್ಞೆಯು ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಧರ್ಮಣ್ಣ ಹೆಚ್. ಧನ್ನಿ ಹೇಳಿದರು.
ತಾಲೂಕಿನ ಕಡಗಂಚಿ ಗ್ರಾಮದ ವಿದ್ಯಾವರ್ಧಕ ಸಂಘದ ವಿ.ವಿ.ಹೆಚ್.ಎಸ್. ಪ್ರೌಢ ಶಾಲೆಯಲ್ಲಿ ಸ್ಪೂರ್ತಿ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಸಸಿ ನೆಡುವ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ಜೀವನಶೈಲಿಯ ನಡುವೆ ಶಿಕ್ಷಣವು ಕೇವಲ ಉದ್ಯೋಗಕ್ಕೆ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿ, ಪರಿಸರ ಕಾಳಜಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಾಧನವಾಗಬೇಕು ಎಂದು ಅವರು ಹೇಳಿದರು. ಮಕ್ಕಳಲ್ಲಿ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ದಾಸರು ಹಾಗೂ ಶರಣರ ವಚನಗಳನ್ನು ಪರಿಚಯಿಸುವ ಮೂಲಕ ಅವರ ಜೀವನ ಮೌಲ್ಯಗಳನ್ನು ತಿಳಿಸಿಕೊಡಬೇಕೆಂದರು.
ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಜೊತೆಗೆ ತಾಯ್ನಾಡಿನ ಋಣ ತೀರಿಸುವ ಮನೋಭಾವ, ತಂದೆ-ತಾಯಿ, ಗುರುಗಳು ಹಾಗೂ ಹಿರಿಯರ ವಿದ್ಯಾರ್ಥಿಗಳು ಗೌರವವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಲಿಂಗರಾಜ ಎಸ್. ಪಾಟೀಲ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಸಂಸ್ಕೃತಿ ಉಳಿಯಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಸ್ಪೂರ್ತಿ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆಯ ಕಾರ್ಯದರ್ಶಿ ಕರಬಸಪ್ಪ ಭುಸನೂರ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಉದ್ದೇಶ ವಿವರಿಸಿದರು.
ಈ ಸಂದರ್ಭದಲ್ಲಿ ೨೦೦೫ನೇ ಸಾಲಿನ ಹಳೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸುವ ಮೂಲಕ ಕೃತಜ್ಞತೆ ವ್ಯಕ್ತಪಡಿಸಿದರು. ಬಳಿಕ ಶಾಲಾ ಆವರಣದಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು.
ಮುಖAಡ ಶರಣಬಸಪ್ಪ ನರೋಣಿ, ಬಾಬುರಾವ ಹೊಸಕುರುಬ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಚಂದ್ರಕಲಾ, ಅಧ್ಯಕ್ಷ ಅಂದಪ್ಪ ಡೋಣಿ, ನಿವೃತ್ತ ಉಪನ್ಯಾಸಕ ಮಹಾದೇವಪ್ಪ ಹೊಸಳ್ಳಿ, ವಿದ್ಯಾರ್ಥಿ ಮುಖಂಡರಾದ ರಾಜಕುಮಾರ ಜವಳಿ, ರಾಜೇಶ ಜಮಾದಾರ, ಮಹೇಶ ಅಲ್ದಿ, ಮಲ್ಲಿಕಾರ್ಜುನ ಜವಳಿ, ಶಾಮರಾವ ಹೊಸಕುರುಬ, ಶಾಂತಕುಮಾರ ತಡಕಲ್, ವಿಶ್ವನಾಥ, ಮಲ್ಲು ಸುಂಟನೂರ, ಭೀಮಾ ಗೋಮದ, ಬೀರಣ್ಣ ಅರಬ ಸೇರಿದಂತೆ ಗ್ರಾಮಸ್ಥರು ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave A Reply

Your email address will not be published.