ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಮುಷ್ಕರದ ವೇಳೆಯಲ್ಲಿ ಕಡ್ಡಾಯ ವರ್ಗಾವಣೆ ಶಿಕ್ಷೆ ನೀಡಿದ್ದ ರಾಜ್ಯ ಸರ್ಕಾರ ಇದೀಗ ಹಲವರ ವರ್ಗಾವಣೆಯನ್ನು ಹಿಂಪಡೆದಿದೆ. ಅಮಾನತು ಕೂಡ ರದ್ದು ಪಡಿಸಲಾಗಿದೆ ಎಂದು ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಸಾರಿಗೆ ನೌಕರರ ಮುಷ್ಕರ ತಡೆಯಲು ಮತ್ತು ಮುಷ್ಕರದಿಂದ ಉಂಟಾಗಿರುವ ನಷ್ಟ ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಈ ವೇಳೆ ಸಾರಿಗೆ ನಿಗಮಗಳ ಪರ ವಕೀಲರು ಕೆಲವು ನೌಕರರ ವಿರುದ್ಧ ಹೊರಡಿಸಿದ್ದ ವರ್ಗಾವಣೆ ಮತ್ತು ಅಮಾನತ್ತು ಆದೇಶಗಳನ್ನು ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೆಎಸ್ಆರ್ ಟಿಸಿಯಲ್ಲಿ 143 ನೌಕರರು, ಎನ್ ಡಬ್ಲ್ಯೂಕೆಆರ್ ಟಿಸಿಯಲ್ಲಿ 60 ನೌಕರರು, ಎನ್ ಇಕೆಆರ್ ಟಿಸಿ 63 ಮತ್ತು ಬಿಎಂಟಿಸಿಯಲ್ಲಿ 2,494 ನೌಕರರನ್ನು ಅಮಾನತ್ತು ಮಾಡಲಾಗಿತ್ತು. ಅವರುಗಳಲ್ಲಿ ಕೆಎಸ್ ಆರ್ ಟಿಸಿಯಲ್ಲಿ 11 ನೌಕರರು, ಎನ್ ಡಬ್ಲ್ಯೂಕೆಆರ್ ಟಿಸಿಯಲ್ಲಿ ಒಬ್ಬ ನೌಕರ, ಎನ್ಇಕೆಆರ್ ಟಿಸಿಯಲ್ಲಿ 52 ನೌಕರರು ಮತ್ತು ಬಿಎಂಟಿಸಿಯಲ್ಲಿ 848 ನೌಕರರ ಅಮಾನತ್ತು ಆದೇಶವನ್ನು ಹಿಂಪಡೆಯಲಾಗಿದೆ.