ಆಗಷ್ಟ್ ೧೬ ರಂದು ಪ್ರಥಮ ಕಾವ್ಯ ಮಹಿಳಾ ಸಮ್ಮೇಳನ
ಪರಿಷತ್‌ನಿಂದ ಮತ್ತೊಂದು ಹೊಸ ಪ್ರಯೋಗ:ಮಹಿಳೆಯರ ಕಾವ್ಯ ಧ್ವನಿಗೆ ವೇದಿಕೆ
ಕಲಬುರಗಿ: ಸಾಹಿತ್ಯದ ಮೂಲಕ ಸಮಾಜದಲ್ಲಿ ಹೊಸ ಚಿಂತನೆ ಮತ್ತು ಬದಲಾವಣೆಗೆ ಸೂಕ್ತ ದಾರಿ ಮಾಡಿಕೊಡುವ ದಿಸೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಮದ ಆಗಷ್ಟ್ ೧೬ ರಂದು ನಗರದ ಕನ್ನಡ ಭವನದಲ್ಲಿ ಕವಯಿತ್ರಿಯರ ಸಮಾಗದ ಒಂದು ದಿನದ ಕಲಬುರಗಿ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನವನ್ನು ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಸದಾ ಹೊಸತನದ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತೊಂದು ಹೊಸ ಪ್ರಯೋಗವೊಂದನ್ನು ಮಾಡಿದಂತಾಗಿದೆ.ಮಹಿಳೆಯ ಅಂತರಾಳದ ಧ್ವನಿಯು ಸಮಾಜದ ಕಟ್ಟು ಪಾಡುಗಳನ್ನು ಮೀರಿ ನಿಲ್ಲುವ, ಸ್ವಾಭಿಮಾನ ಹಾಗೂ ಸಮಾನತೆಯ ಸಂದೇಶ ಸಾರುವ ಪ್ರಬಲ ಕಾವ್ಯ ಸಾಹಿತ್ಯವಾಗಿದೆ. ಮಹಿಳೆಯಲ್ಲಿನ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸುವ ಹಾಗೂ ಅವರ ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಿ ನಿಲ್ಲುವ ಛಲವನ್ನು ಪ್ರೋತ್ಸಾಹಿಸುವ ಕಾರ್ಯ ಈ ಸಮ್ಮೇಳನ ಮಾಡಲಿದೆ ಎಂದು ಅವರು ವಿವರಿಸಿದರು.
ಮಹಿಳೆಯ ಅಂತರಾಳದಿAದ ಹೊರ ಹೊಮ್ಮುವ ಸಾಹಿತ್ಯಕ್ಕೆ ಪರಿಷತ್ತು ಪ್ರೋತ್ಸಾಹ ನೀಡಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ. ಮಹಿಳೆಯರ ಕಾವ್ಯ ಧ್ವನಿಗೆ ವೇದಿಕೆ ಸಿಕ್ಕಾಗ ಸಾಹಿತ್ಯ ಇನ್ನಷ್ಟು ಶ್ರೀಮಂತಗೊಳ್ಳುತ್ತದೆ ಎಂದು ವಿವರಣೆ ನೀಡಿದರು.
ಮುಂದಿನ ವಾರ ಕಾವ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಮಹಿಳಾ ಲೇಖಕಿಯೊಬ್ಬರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು. ಜತೆಗೆ ಸ್ವಾಗತ ಸಮಿತಿಯನ್ನೂ ರಚಿಸಲಾಗುವುದೆಂದು ತಿಳಿಸಿದರು.