ಗ್ಯಾರಂಟಿ ಸೌಲಭ್ಯ ಪಡೆಯಲು ತಾಂತ್ರಿಕ ಸಮಸ್ಯೆಗಳು ತಕ್ಷಣ ಪರಿಹರಿಸಿ: ಚಂದ್ರಿಕಾ ಪರಮೇಶ್ವರ್
ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ:
ಕಲಬುರಗಿ: ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಯಾವುದೇ ಗೊಂದಲ ಇರಬಾರದು. ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ತಕ್ಷಣ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್ ಸೂಚನೆ ನೀಡಿದರು.
ಗುರುವಾರ ನಗರದ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪಂಚ ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ವಿಶೇಷವಾಗಿ ಗೃಹ ಲಕ್ಷ್ಮೀ ಯೋಜನೆಯಡಿ ತಾಂತ್ರಿಕ ತೊಂದರೆಯಿಂದ ಮಹಿಳೆಯರಿಗೆ ಹಣ ತಲುಪದಿದ್ದರೆ ಅಂತಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ತಾಲೂಕಿನ ಸಿ.ಡಿ.ಪಿ.ಒ ಕಚೇರಿಯನ್ನು ಸಂಪರ್ಕಿಸಬೇಕೆಂದು ಫಲಾನುಭವಿಗಳಿಗೆ ಜಾಗೃತಿ ಮೂಡಿಸಬೇಕೆಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಅಧ್ಯಕ್ಷರು ನಿರ್ದೇಶನ ನೀಡಿದರು.
ಸರ್ಕಾರದ ಈ ಯಾವುದೇ ಗ್ಯಾರಂಟಿ ಯೋಜನೆಗಳ ಅನುದಾನದ ಹಣವನ್ನು ಬ್ಯಾಂಕ್‌ಗಳು ಫಲಾನುಭವಿಗಳ ಹಳೆಯ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು. ಬ್ಯಾಂಕ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಕಡ್ಡಾಯವಾಗಿ ಸ್ಥಳೀಯ ಭಾಷೆಯಲ್ಲೇ ವ್ಯವಹರಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಚಂದ್ರಿಕಾ ಪರಮೇಶ್ವರ್ ಸೂಚನೆ ನೀಡಿದರು.
ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 5,97,166 ನೋಂದಾಯಿತ ಮಹಿಳಾ ಫಲಾನುಭವಿಗಳಿದ್ದು, 2023-24ರಲ್ಲಿ 782.64 ಕೋಟಿ ರೂ. 2024-25ರಲ್ಲಿ 1,044.48 ಕೋಟಿ ರೂ. ಹಾಗೂ 2025-26ರಲ್ಲಿ 1,077.88 ಕೋಟಿ ರೂ. ಹಾಗೂ 2026-27 ಪ್ರಸ್ತುತ ಸಾಲಿನಲ್ಲಿ ಏಪ್ರಿಲ್ ವರೆಗೆ 1,133.76 ಕೋಟಿ ರೂ. ಸೇರಿದಂತೆ ಒಟ್ಟಾರೆ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 3,018.39 ಕೋಟಿ ರೂ. ಅನುದಾನ ಫಲಾನುಭವಿಗಳ ಖಾತೆಗೆ ಯಶಸ್ವಿಯಾಗಿ ಜಮೆಯಾಗಿದೆ. ಇದರಿಂದ ಸಾಮಾನ್ಯ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಲಕ್ಷಾಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೊಸನಾಂದಿ ಹಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ ಎಸ್. ಸಂಕನೂರ ಅವರು ಮಾತನಾಡಿ, ಗರಹ ಲಕ್ಣ್ಮೀ ಯೋಜನೆ ಅನರ್ಹರ ಪಾಲಾಗದಂತೆ ತಡೆಯಲು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಜಿಲ್ಲೆಯಲ್ಲಿ ಗುರುತಿಸಲಾದ 9,156 ಮೃತ ಫಲಾನುಭವಿಗಳ ಪೈಕಿ 3,820 ಖಾತೆಗಳಿಗೆ ತಪ್ಪಾಗಿ ಜಮೆಯಾಗಿದ್ದ ಹಣವನ್ನು ಲೀಡ್ ಬ್ಯಾಂಕ್‌ಗಳ ಸಹಯೋಗದೊಂದಿಗೆ ಈಗಾಗಲೇ 44.34 ಲಕ್ಷ ಹಣವನ್ನು ವಸೂಲಿಮಾಡಿ ಸರ್ಕಾರಕ್ಕೆ ಜಮೆ ಮಾಡಲಾಗಿದೆ. ಉಳಿದ ಹಣ ಮರುಪಾವತಿ ಪ್ರಕ್ರಿಯೆಯಲ್ಲಿದೆ. ಶೀಘ್ರದಲ್ಲೇ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ವಿಶೇಷ ಆ್ಯಪ್ ಹಾಗೂ ಬಯೋಮೆಟ್ರಿಕ್ ಮೂಲಕ ಮರು ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಮತ್ತೊಂದೆಡೆ ‘ಗೃಹಜ್ಯೋತಿ’ ಯೋಜನೆಯಡಿ 5.86 ಲಕ್ಷಕ್ಕೂ ಹೆಚ್ಚು ಗ್ರಾಹಕರು ನೋಂದಾಯಿಸಿಕೊಂಡಿದ್ದು, ವಿದ್ಯುತ್ ಬಿಲ್‌ನಲ್ಲಿ ಹೆಚ್ಚಿನ ಮೊತ್ತ ಬರುತ್ತಿರುವ ಸಾರ್ವಜನಿಕರ ಗೊಂದಲ ನಿವಾರಿಸಲು ಜೆಸ್ಕಾಂ ಇಲಾಖೆಯಿಂದ ವಿಶೇಷ ಪರಿಶೀಲನಾ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಮನೆ ಬಾಗಿಲಿಗೆ ತೆರಳಿ ಪ್ರತಿದಿನ ಸುಮಾರು 3,000 ಅರ್ಜಿಗಳನ್ನು ಇತ್ಯರ್ಥಪಡಿಸುತ್ತಿವೆ. ಕಳೆದ 1 ವರ್ಷದ ಸರಾಸರಿ ಬಳಕೆಗಿಂತ ಹೆಚ್ಚಿನ ಬಳಕೆ ಇದ್ದರೆ ಅಥವಾ ಹಳೆಯ ಬಿಲ್ ಬಾಕಿ ಇದ್ದರೆ ಮಾತ್ರ ಹೆಚ್ಚುವರಿ ಮೊತ್ತ ಪಾವತಿಸಬೇಕಾಗಿದ್ದು, ಹಳೆಯ ಬಾಕಿಗೆ ಕಂತುಗಳ ಸೌಲಭ್ಯ ನೀಡಲಾಗಿದೆ. ಪ್ರತೀ ಏರಿಯಾದ ಲೈನ್ ಮ್ಯಾನ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಲಾಗಿದ್ದು, ಸಾರ್ವಜನಿಕರು ನೇರವಾಗಿ ಸಂಪರ್ಕಿಸಬಹುದು ಎಂದು ಜೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.
ಯುವನಿಧಿ ಯೋಜನೆಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನ*
ಯುವನಿಧಿ’ ಯೋಜನೆಯಡಿ ಜಿಲ್ಲೆಯ 31,807ಕ್ಕೂ ಹೆಚ್ಚು ನಿರುದ್ಯೋಗಿ ಯುವಜನರು ನೊಂದಣಿ ಮಾಡಿಕೊಂಡಿದು, ಕಲಬುರಗಿ ಇಡೀ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ನಿರುದ್ಯೋಗಿ ಯುವಕರು ಪ್ರತಿ ತಿಂಗಳು ಕಡ್ಡಾಯವಾಗಿ ಸ್ವಯಂ ಘೋಷಣೆ ಸಲ್ಲಿಸುವ ಮೂಲಕ ಭತ್ಯೆಯ ಜೊತೆಗೆ ಸರ್ಕಾರದ ‘ಯುವನಿಧಿ ಪ್ಲಸ್’ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಯ ಪ್ರಯೋಜನ ಪಡೆಯಬಹುದಾಗಿದೆ ಎಂದು ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ವಿವರ ನೀಡಿದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 22 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದಾರೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯು ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿದೆ ಎಂದಿ ಸಾರಿಗೆ ಅಧಿಕಾರಿಗಳು ತಿಳಿಸಿದರು.
ಅನ್ನ ಭಾಗ್ಯ ಚರ್ಚೆಯ ಸಂದರ್ಭದಲ್ಲಿ ಯೋಜನೆಯಡಿ ನೀಡುವ ಉಚಿತ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾದದಲ್ಲಿ ಲೋಪವೆಸಗುವ ನ್ಯಾಯಬೆಲೆ ಅಂಗಡಿಗಳನ್ನು ತಕ್ಷಣವೇ ಅಮಾನತುಗೊಳಿಸಲು ಸೂಚಿಸಿದರು. ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ತಪಾಸಣೆ ನಡೆಸಬೇಕು ಹಾಗೂ ಪ್ರತಿಯೊಂದು ಅಂಗಡಿಯ ಮುಂಭಾಗದಲ್ಲಿ ದೂರು ಸಲ್ಲಿಕೆಯ ಸಹಾಯವಾಣಿ ಸಂಖ್ಯೆಯನ್ನು ಪ್ರದರ್ಶಿಸಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳಾದ ಸೋಮಶೇಖರ ಹಿರೇಮಠ, ವಿಜಯಕುಮಾರ ಕಟ್ಟಿಮನಿ, ನಿರ್ಮಲಾ ಬರ್ಗಲಿ, ಸುರೇಶ ತಿಪ್ಪಶೆಟ್ಟಿ, ನರಸಿಂಹಲು ಕುಂಬಾರ ಸೇರಿದಂತೆ ಜಿಲ್ಲಾ ಸಮಿತಿ ಸದಸ್ಯರು, ತಾಲೂಕಿನ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಸಿ.ಪಿ.ಓ ಮಧುಮತಿ ಹೊಸಮನಿ ಉಪಸ್ಥಿತರಿದ್ದರು.