Shubhashaya News

ಬಣ್ಣದ ಚಿಟ್ಟೆ ಮತ್ತು ಕಾಯುವಿಕೆಯ ಕೌತುಕ

ಬೇಸಿಗೆಯ ಬಿರುಬಿಸಿಲಿಗೆ ಮರಗಿಡಗಳೆಲ್ಲಾ ಒಣಗುತ್ತಿದ್ದರೂ, ಸಮೃದ್ಧನ ಮನೆಯ ಹಿತ್ತಲಿನಲ್ಲಿರುವ ಪುಟ್ಟ ಕೈತೋಟದಲ್ಲಿ ಮಾತ್ರ ತಂಪಾದ ವಾತಾವರಣವಿತ್ತು. ಅಲ್ಲಿ ನಾನಾ ಬಗೆಯ ಹೂವುಗಳು ಅರಳಿ ನಿಂತಿದ್ದವು. ಬೆಳಗಾಗುತ್ತಲೇ ಆ ತೋಟಕ್ಕೆ ಬಣ್ಣ ಬಣ್ಣದ ಚಿಟ್ಟೆಗಳು ಮಕರಂದ ಹೀರಲು ಬರುತ್ತಿದ್ದವು.
ಸಮೃದ್ಧನಿಗೆ ಆ ಚಿಟ್ಟೆಗಳನ್ನು ಕಂಡರೆ ಎಲ್ಲಿಲ್ಲದ ಕುತೂಹಲ. ಅವುಗಳನ್ನು ಹಿಡಿದು ಗಾಜಿನ ಡಬ್ಬಿಯಲ್ಲಿ ಕೂಡಿಡಬೇಕು ಎಂಬುದು ಅವನ ಆಸೆ. ತೋಟಕ್ಕೆ ಬರುವ ಚಿಟ್ಟೆಗಳ ಹಿಂದೆ ಅವನು ಢಬ್ ಢಬ್… ಢಬ್ ಢಬ್… ಎಂದು ಓಡುತ್ತಿದ್ದ. ಆದರೆ ಆ ಚಿಟ್ಟೆಗಳು ಅವನ ಕೈಗೆ ಸಿಗದೆ ಭುರ್… ಭುರ್… ಎಂದು ಹಾರಿಹೋಗುತ್ತಿದ್ದವು.
ಹೀಗಿರುವಾಗ ಒಂದು ದಿನ, ಹೊಳೆಯುವ ನೀಲಿ ಬಣ್ಣದ ಸುಂದರ ಚಿಟ್ಟೆಯೊಂದು ಗುಲಾಬಿ ಹೂವಿನ ಮೇಲೆ ಕುಳಿತಿತ್ತು. ಸಮೃದ್ಧ ಸದ್ದಿಲ್ಲದೆ, ಬೆಕ್ಕಿನಂತೆ ಹೆಜ್ಜೆ ಹಾಕುತ್ತಾ ಹೋಗಿ ಟಪ್ ಎಂದು ಅದನ್ನು ತನ್ನ ಎರಡು ಕೈಗಳ ಮಧ್ಯೆ ಮುಚ್ಚಿ ಹಿಡಿದೇ ಬಿಟ್ಟ. ಆದರೆ, ಕೈಯೊಳಗಿದ್ದ ಆ ಪುಟ್ಟ ಜೀವ ಭಯದಿಂದ ತನ್ನ ರೆಕ್ಕೆಗಳನ್ನು ಬಿಡಿಸಿಕೊಳ್ಳಲು ಪಟ ಪಟ… ಪಟ ಪಟ… ಎಂದು ಬಡಿದುಕೊಳ್ಳಲಾರಂಭಿಸಿತು.
ಸ್ವಲ್ಪ ಹೊತ್ತಿನ ನಂತರ ಸಮೃದ್ಧ ಮೆಲ್ಲನೆ ಕೈ ಬಿಚ್ಚಿ ನೋಡಿದ. ಆ ಸುಂದರ ನೀಲಿ ಚಿಟ್ಟೆಯ ರೆಕ್ಕೆಯ ಬಣ್ಣವೆಲ್ಲಾ ಉದುರಿ ಅವನ ಬೆರಳುಗಳಿಗೆ ಅಂಟಿಕೊಂಡಿತ್ತು. ಜಖಂಗೊಂಡಿದ್ದ ಆ ಚಿಟ್ಟೆ ಹಾರಲಾಗದೆ ಒದ್ದಾಡುತ್ತಾ ನೆಲಕ್ಕೆ ಬಿತ್ತು. ಅದನ್ನು ನೋಡಿದ ಸಮೃದ್ಧನಿಗೆ ಅಳು ಬಂತು.
ಇದನ್ನೆಲ್ಲಾ ಗಮನಿಸುತ್ತಿದ್ದ ಅಜ್ಜಿ, ಸಮೃದ್ಧನ ಬಳಿ ಬಂದು ಪ್ರೀತಿಯಿಂದ ತಲೆ ಸವರಿದರು. “ಮಗೂ, ನಿಜವಾದ ಪ್ರೀತಿ ಎಂದರೆ ಮುಕ್ತವಾಗಿ ಹಾರಾಡಲು ಬಿಡುವುದು, ನಮ್ಮ ಸ್ವಾರ್ಥಕ್ಕಾಗಿ ಕಟ್ಟಿಹಾಕುವುದಲ್ಲ. ಬಲವಂತವಾಗಿ ಪಡೆದುಕೊಂಡರೆ ಹೀಗೆಯೇ ನೋವಾಗುತ್ತದೆ. ಅವು ತಾವಾಗಿಯೇ ನಿನ್ನ ಬಳಿ ಬರುವಂತೆ ಮಾಡಲು ನಾನೊಂದು ದಾರಿ ಹೇಳಿಕೊಡುತ್ತೇನೆ,” ಎಂದು ಹೇಳಿ ಅವನ ಕೈಗೊಂದು ಸಣ್ಣ ಬೀಜವನ್ನು ಕೊಟ್ಟರು.
ಸಮೃದ್ಧ ಅಜ್ಜಿಯ ಮಾತಿನಂತೆ ಆ ಬೀಜವನ್ನು ಒಂದು ಕುಂಡದಲ್ಲಿ ನೆಟ್ಟು, ಪ್ರತಿದಿನ ನೀರುಣಿಸಿ, ಗೊಬ್ಬರ ಹಾಕಿ ಪ್ರೀತಿಯಿಂದ ಆರೈಕೆ ಮಾಡತೊಡಗಿದ. ದಿನಗಳು ಕಳೆದವು, ಸಮೃದ್ಧನ ಕಾಯುವಿಕೆಗೆ ಫಲವಾಗಿ ಅದರಲ್ಲಿ ಒಂದು ಗಿಡ ಮೊಳೆತು, ಕೆಂಪಾದ ಆಕರ್ಷಕ ಹೂವೊಂದು ಅರಳಿತು. ಹೂವಿನಿಂದ ಸಿಹಿಯಾದ ಸುವಾಸನೆ ಸುಸುತ್ತಿತ್ತು.
ಮರುದಿನ ಬೆಳಿಗ್ಗೆ ಸಮೃದ್ಧ ಆ ಹೂವಿನ ಗಿಡದ ಬಳಿ ಸುಮ್ಮನೆ ನೋಡುತ್ತಾ ಕುಳಿತಿದ್ದ. ಆಗ ಇದ್ದಕ್ಕಿದ್ದಂತೆ, ಚಿನ್ನದ ಬಣ್ಣದ ದೊಡ್ಡ ಚಿಟ್ಟೆಯೊಂದು ಹಾರಿಬಂದು ಆ ಕೆಂಪು ಹೂವಿನ ಮೇಲೆ ಕುಳಿತು ಮಕರಂದ ಹೀರಿತು. ಸಮೃದ್ಧ ಈ ಬಾರಿ ಅದನ್ನು ಹಿಡಿಯಲು ಹೋಗಲಿಲ್ಲ. ಬದಲಾಗಿ, ಅದರ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ಶಾಂತವಾಗಿ ಕುಳಿತ.
ಸ್ವಲ್ಪ ಹೊತ್ತಿನ ನಂತರ, ಆ ಚಿಟ್ಟೆ ಹೂವಿನಿಂದ ಮೇಲಕ್ಕೆದ್ದು, ಹಾರುತ್ತಾ ಬಂದು ಸಮೃದ್ಧನ ಭುಜದ ಮೇಲೆ ನಿರಾಳವಾಗಿ ಕುಳಿತುಕೊಂಡಿತು. ಸಮೃದ್ಧನಿಗೆ ಆ ಕ್ಷಣ ಜಗತ್ತನ್ನೇ ಗೆದ್ದಷ್ಟು ಸಂತೋಷವಾಯಿತು. ಬಲವಂತದಿಂದ ಸಿಗದ ಖುಷಿ, ತಾಳ್ಮೆ ಮತ್ತು ಪ್ರೀತಿಯಿಂದ ಒಲಿದು ಬಂದಿತ್ತು.
ಕಥೆಯ ಮೌಲ್ಯ:
ಯಾವುದೇ ಒಳ್ಳೆಯ ಪ್ರತಿಫಲ ಸಿಗಬೇಕಾದರೆ ತಾಳ್ಮೆ ಅತ್ಯಗತ್ಯ. ಪ್ರಕೃತಿಯನ್ನು ಮತ್ತು ಇತರ ಜೀವಿಗಳನ್ನು ಪ್ರೀತಿಸುವುದೆಂದರೆ ಅವುಗಳ ಸ್ವಾತಂತ್ರ್ಯವನ್ನು ಗೌರವಿಸುವುದು.
ಶಿವರಾಜ ಸೂ. ಸಣಮನಿ, ಮದಗುಣಕಿ
Leave A Reply

Your email address will not be published.