ಸರ್ಕಾರದ ಮೂರು ವರ್ಷದ ಸಾಧನೆ ಶೂನ್ಯ- ಸುಭಾಷ ಗುತ್ತೇದಾರ
ತುಮಕೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ಆಯೋಜಿಸಿರುವುದು ಯಾವ ಪುರುಷಾರ್ಥಕ್ಕೆ. ಈ ಮೂರು ವರ್ಷದಲ್ಲಿ ಸರ್ಕಾರ ಕಡಿದು ಕಟ್ಟೆ ಹಾಕಿದ್ದು ಏನು ಎಂದು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿ ಸರ್ಕಾರದ ಅವಧಿಯ ಯೋಜನೆಗಳನ್ನು ತಮ್ಮ ಸರ್ಕಾರದ ಯೋಜನೆಗಳು ಎಂಬAತೆ ಈಗಿನ ಕಾಂಗ್ರೆಸ್ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಹುಬ್ಬಳ್ಳಿಯಲ್ಲಿ ಭಾರಿ ಸಂಖ್ಯೆಯಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಈ ಸರ್ಕಾರ ಆಯೋಜಿಸಿತ್ತು. ಅದೂ ಕೂಡ ಬಿಜೆಪಿ ಸರ್ಕಾರದ ನಿರ್ಧಾರ. ಹಳೆ ಸರ್ಕಾರದ ಕೆಲಸಗಳನ್ನು ತಮ್ಮ ಕೆಲಸ ಎಂದು ಜನರಿಗೆ ತೋರಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಪರಿಣಾಮಕಾರಿಯಾದ ವಿರೋಧ ಪಕ್ಷವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಹೋರಾಟ ಮಾಡದೇ ಹೋಗಿದ್ದೇ ಇದ್ದರೆ ವಾಲ್ಮೀಕಿ ಹಗರಣದಲ್ಲಿ ಸಚಿವರು ರಾಜೀನಾಮೆ ನೀಡುತ್ತಿರಲಿಲ್ಲ. ಈ ಸರ್ಕಾರಕ್ಕೆ ಭಂಡತನವಿದೆ. ಏನೇ ನಾವು ಹೋರಾಟ ಮಾಡಿದರೆ ತಾಗುವುದಿಲ್ಲ. ಈ ಭಂಡತನವನ್ನು ರಾಜ್ಯದ ಜನ ನೋಡುತ್ತಿದ್ದಾರೆ. ನಾವು ಸಮಯಕ್ಕೆ ಸರಿಯಾಗಿ ಹೋರಾಟ ಮಾಡುತ್ತಿದ್ದೇವೆ. ಈ ಆಟ ಬಹಳ ದಿನ ನಡೆಯುವುದಿಲ್ಲ ಎಂದಿದ್ದಾರೆ.
ಆಳAದ ತಾಲೂಕಿನಲ್ಲಿ ಅಂತರ್ಜಲ ಬತ್ತಿ ಹೋಗಿದೆ. ಕೆರೆ ಕುಂಟೆಗಳು ಖಾಲಿಯಾಗಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ತಾಲೂಕಿನಲ್ಲಿ ಶಿರಪೂರ ಮಾದರಿ ನೀರಾವರಿ ಮಾಡಿದ್ದೇವೆಂದು ಬಡಾಯಿ ಕೊಚ್ಚಿಕೊಳ್ಳುವ ಶಾಸಕ ಬಿ ಆರ್ ಪಾಟೀಲ ಸಧ್ಯದ ಪರಿಸ್ಥಿತಿಯಲ್ಲಿ ಏನಾಗಿದೆ ಎಂಬ ಅರಿವು ಅವರಿಗಿದೆಯೇ ಎಂದು ಪ್ರಶ್ನಿಸಿದರು.
ಶಿರಪೂರ ಮಾದರಿ ಕಾಮಗಾರಿ ಮಾಡಿದ ಸ್ಥಳದಲ್ಲಿ ಪ್ರಸ್ತುತ ಒಂದೇ ಒಂದು ಹನಿ ನೀರಿಲ್ಲ. ಆದರೆ ತಾವು ನಿರ್ಮಿಸಿದ ಕೆರೆಗಳಲ್ಲಿ ಈಗಲೂ ಸಮೃದ್ಧವಾಗಿ ನೀರಿದೆ ಅದರಿಂದ ಜಾನುವಾರುಗಳಿಗೆ ಹಾಗೂ ಗೃಹ ಬಳಕೆಗೆ ನೀರು ಲಭ್ಯವಾಗುತ್ತಿದೆ. ಶಿರಪೂರ ಮಾದರಿ ಎಂದು ಜನರಿಗೆ ತೋರಿಸಿ ಅದರಲ್ಲಿ ಕೋಟ್ಯಾಂತರ ರೂ. ಭೃಷ್ಟಾಚಾರ ಎಸಗುವ ಹುನ್ನಾರವಿದೆ ಎಂದು ಆಪಾದಿಸಿದ್ದಾರೆ.
ಈ ಹಿಂದೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಶಾಸಕ ಬಿ ಆರ್ ಪಾಟೀಲ ವಾರಕ್ಕೆ ಕನಿಷ್ಠ ೨ ಬಾರಿಯಾದರೂ ಆಳಂದ ಪಟ್ಟಣಕ್ಕೆ ನೀರು ಪೂರೈಸುವ ವಾಗ್ದಾನ ನೀಡಿದ್ದರು ಆದರೆ ಆ ಮಾತು ಈಗ ಅವರಿಗೆ ನೆನಪಿಸುವ ಅವಶ್ಯಕತೆ ಬಂದಿದೆ ಎಂದು ತಿಳಿಸಿದ್ದಾರೆ.
ಕುಡಿಯಲು, ಬಳಸಲು ನೀರಿಲ್ಲದೇ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ಅರಿವಿಲ್ಲದೇ ಶಾಸಕರು ಜನರ ಗಮನ ಬೇರೆಡೆ ಸೆಳೆಯಲು ಇಲ್ಲದ ಸಲ್ಲದ ವಿಚಾರಗಳನ್ನು ಪ್ರಸ್ತಾಪಿಸಿ ಕಾಲಹರಣ ಮಾಡುತ್ತಿದ್ದಾರೆ. ಕೂಡಲೇ ಜನರ ಆದ್ಯತೆಯ ವಿಷಯಗಳ ಮೇಲೆ ಗಮನಹರಿಸಿ ನೀರು ಪೂರೈಕೆಗೆ ತ್ವರಿತ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಆಳಂದ ತಾಲೂಕಿನ ಅಮರ್ಜಾ ಅಣೆಕಟ್ಟಿನ ವ್ಯಾಪ್ತಿಯ ಪ್ರದೇಶದ ರೈತರ ಹೊಲಗಳಿಗೆ ಸಮರ್ಪಕ ನೀರು ಬಿಡದೇ ಇರುವುದರಿಂದ ಬೇಸಿಗೆ ಕಾಲದಲ್ಲಿ ತೀವ್ರ ತೊಂದರೆ ಅನುಭವಿಸುವಂತಾಗಿದೆ. ರೈತರು ಹಚ್ಚಿರುವ ಕಬ್ಬಿಗೆ ತೇವಾಂಶ ಕೊರತೆಯಾಗುವ ಸಂಭವವಿದೆ. ಅಲ್ಲದೇ ಜಾನುವಾರುಗಳಿಗೂ ಕುಡಿಯುವ ನೀರಿಲ್ಲದೇ ಪರಿತಪಿಸುವ ಸಂದರ್ಭ ತಲೆದೂರಿದೆ ಎಂದು ಆಪಾದಿಸಿದ್ದಾರೆ.
ಅತೀ ಹೆಚ್ಚಿನ ಉಷ್ಣಾಂಶ ಆಳಂದ ತಾಲೂಕಿನಲ್ಲಿ ದಾಖಲಾಗುತ್ತಿರುವುದರಿಂದ ಈ ಪ್ರದೇಶದ ರೈತರು ಆತಂಕದಲ್ಲಿಯೇ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಮಧ್ಯ ಪ್ರವೇಶಿಸಿ ಸಮರ್ಪಕವಾಗಿ ರೈತರ ಹೊಲಗಳಿಗೆ ನೀರು ಬಿಡಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ.