ಶಾಲಾ ಪ್ರಾರಂಭೋತ್ಸವವನ್ನು ಕೇವಲ ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಳಿಸದೆ, ಮಕ್ಕಳಿಗೆ ಸದಾ ನೆನಪಿನಲ್ಲಿ ಉಳಿಯುವಂತೆ ಹಾಗೂ ಅವರು ಅತ್ಯಂತ ಸಂತೋಷದಿಂದ ಶಾಲೆಗೆ ಬರುವಂತೆ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಆಯುಕ್ತರ ಕಚೇರಿಯು ಕೆಲವು ವಿನೂತನ ಮತ್ತು ಆಕರ್ಷಕ ಸಲಹಾತ್ಮಕ ಚಟುವಟಿಕೆಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಬದಲಾಗುತ್ತಿರುವ ಶೈಕ್ಷಣಿಕ ವಾತಾವರಣಕ್ಕೆ ತಕ್ಕಂತೆ ಇಂದಿನ ಆಧುನಿಕ ದಿನಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ಐದು ಪ್ರಮುಖ ವಿಭಾಗಗಳ ಅಡಿಯಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲು ಶಾಲೆಗಳಿಗೆ ಸೂಚಿಸಲಾಗಿದೆ.
1. ವಿಶೇಷ ಪ್ರವೇಶ ಮತ್ತು ವಿಶಿಷ್ಟ ಸ್ವಾಗತ (Grand & Creative Welcome)
ಡಿಜಿಟಲ್ ಸೆಲ್ಫಿ ಬೂತ್: ಶಾಲೆಯ ಮುಖ್ಯ ದ್ವಾರದಲ್ಲಿ ಕೆಂಪು ಹಾಸು (Red Carpet) ಹಾಕಿ, ಕಾರ್ಟೂನ್ ಪಾತ್ರಗಳ ವೇಷ ಧರಿಸಿದ ಶಿಕ್ಷಕರಿಂದ ಮಕ್ಕಳನ್ನು ಸ್ವಾಗತಿಸುವುದು. ಜೊತೆಗೆ ‘ನನ್ನ ಮೊದಲ ದಿನ’ ಎಂಬ ಥೀಮ್ ಉಳ್ಳ ಸೆಲ್ಫಿ ಬೂತ್ ನಿರ್ಮಿಸಿ ಪೋಷಕರೊಂದಿಗೆ ಫೋಟೋ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವುದು.
ಹೂವಿನ ಮಳೆಯಿಂದ ಸ್ವಾಗತ: ಮಕ್ಕಳು ಗೇಟ್ ಒಳಗಡೆ ಬರುವಾಗ ಅವರ ಮೇಲೆ ಹೂವಿನ ದಳಗಳನ್ನು ಹಾಕುವುದು ಅಥವಾ ಕೈಗೆ ಸುಗಂಧಭರಿತ ರೋಸ್ವಾಟರ್ ಪ್ರೋಕ್ಷಣೆ ಮಾಡುವುದು.
‘ವಿದ್ಯಾ ಜ್ಯೋತಿ’ ನಡಿಗೆ (The Torch of Knowledge): ಒಲಿಂಪಿಕ್ಸ್ ಮಾದರಿಯಲ್ಲಿ, ಗ್ರಾಮದ ಅಥವಾ ವಾರ್ಡ್ನ ಪ್ರಮುಖ ವೃತ್ತದಿಂದ ಶಾಲೆಯವರೆಗೆ ಹಳೆಯ ವಿದ್ಯಾರ್ಥಿಗಳು, ಸಾಧಕರು ಮತ್ತು ಪ್ರಮುಖರು ಜ್ಞಾನದ ಸಂಕೇತವಾಗಿ ‘ಜ್ಯೋತಿ’ಯನ್ನು ಒಬ್ಬರಿಂದೊಬ್ಬರು ಕೈಬದಲಾಯಿಸುತ್ತಾ ಶಾಲೆಗೆ ತರುವುದು.
ಗ್ರಾಮಸ್ಥರಿಂದ ‘ಹರಕೆಯ ಹರಸುವಿಕೆ’ (The Blessing Arch): ಶಾಲೆಯ ಪ್ರವೇಶ ದ್ವಾರದಲ್ಲಿ ಊರಿನ ಹಿರಿಯರು, ನಿವೃತ್ತ ಶಿಕ್ಷಕರು ಅಥವಾ ಸಾಧಕರು ಸಾಲಾಗಿ ನಿಂತು, ಒಳಗೆ ಬರುವ ಪ್ರತಿಯೊಂದು ಮಗುವಿನ ತಲೆಯ ಮೇಲೂ ಅಕ್ಕಿ/ಹೂವು ಹಾಕಿ ಆಶೀರ್ವದಿಸಿ ಕಳುಹಿಸುವುದು.
2. ಪರಿಸರ ಸ್ನೇಹಿ ಆರಂಭ (Eco-Friendly Beginning)
ಹಸಿರು ಹೆಜ್ಜೆ (Green Welcome): ಶಾಲೆಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಸಣ್ಣ ಗಿಡದ ಸಸಿಯನ್ನು ನೀಡಿ ಸ್ವಾಗತಿಸುವುದು. ಆ ಸಸಿಯನ್ನು ಶಾಲಾ ಆವರಣದಲ್ಲೇ ನೆಟ್ಟು, ಅದಕ್ಕೆ ಆಯಾ ಮಗುವಿನ ಹೆಸರನ್ನೇ ಇಟ್ಟು, ವರ್ಷಪೂರ್ತಿ ಅದರ ಪೋಷಣೆ ಮಾಡುವ ಜವಾಬ್ದಾರಿ ನೀಡುವುದು.
ಬೀಜದ ಉಡುಗೊರೆ (Seed Balls): ಮಕ್ಕಳಿಗೆ ಸಿಹಿ ತಿಂಡಿಯ ಬದಲು ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ‘ಬೀಜದ ಉಂಡೆಗಳನ್ನು’ (Seed Balls) ಉಡುಗೊರೆಯಾಗಿ ನೀಡುವುದು.
3. ಆಕರ್ಷಕ ಕಾರ್ಯಚಟುವಟಿಕೆಗಳು (Engaging Activities)
‘ನನ್ನ ಕನಸಿನ ಗೋಡೆ’ (Wall of Dreams): ಶಾಲೆಯ ದೊಡ್ಡ ಬೋರ್ಡ್ ಅಥವಾ ಗೋಡೆಗೆ ಬಿಳಿ ಚಾರ್ಟ್ ಹಚ್ಚಿ, ಅದರಲ್ಲಿ ಮಕ್ಕಳು ಈ ಶೈಕ್ಷಣಿಕ ವರ್ಷದಲ್ಲಿ ತಾವು ಏನನ್ನು ಸಾಧಿಸಬೇಕೆಂದುಕೊಂಡಿದ್ದಾರೆ ಅಥವಾ ಅವರ ಕನಸೇನು ಎಂಬುದನ್ನು ಬರೆದು ಅಥವಾ ಚಿತ್ರ ಬಿಡಿಸಿ ಅಂಟಿಸಲು ಉತ್ತೇಜಿಸುವುದು.
ಸಮಯದ ಕ್ಯಾಪ್ಸುಲ್ (Time Capsule): ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ಈ ವರ್ಷ ಏನೇನು ಕಲಿಯಲು ಇಷ್ಟವಿದೆ ಎಂಬ ಪತ್ರವನ್ನು ಬರೆದು ಒಂದು ಡಬ್ಬದಲ್ಲಿ (Capsule) ಹಾಕಿಡುವುದು. ವರ್ಷದ ಕೊನೆಯ ದಿನ ಅದನ್ನು ತೆಗೆದು ಓದಿ, ಅವರ ಪ್ರಗತಿಯನ್ನು ಅವರೇ ಅವಲೋಕಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.
ನನ್ನ ಕನಸಿನ ರೆಕ್ಕೆಗಳು (Wings of my Dreams): ಶಾಲೆಯ ಮುಖ್ಯ ದ್ವಾರ ಅಥವಾ ಪ್ರಾರ್ಥನಾ ಮಂದಿರದ ಬಳಿ ದೊಡ್ಡದಾದ ರೆಕ್ಕೆಗಳ ಚಿತ್ರವಿರುವ ಫೋಟೋ ಶೂಟ್ ಮಾಡಿಸುವುದು.
ವಿಶೇಷ ಬ್ಯಾಡ್ಜ್ ಧರಿಸುವಿಕೆ (Badge of Honor): ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರ ತರಗತಿ ನಮೂದಿಸಿರುವ, ಶಾಲೆಯ ಲೋಗೋ ಇರುವ ಆಕರ್ಷಕ ‘ಸ್ಮಾರ್ಟ್ ಸ್ಟೂಡೆಂಟ್’ ಬ್ಯಾಡ್ಜ್ಗಳನ್ನು ಶಿಕ್ಷಕರೇ ಸ್ವತಃ ಶರ್ಟ್ಗೆ ಚುಚ್ಚಿ ಗೌರವಿಸುವುದು. ಇದು ಮಕ್ಕಳಲ್ಲಿ ಜವಾಬ್ದಾರಿಯ ಭಾವನೆ ಮೂಡಿಸುತ್ತದೆ.
4. ಮೋಜಿನ ಆಟಗಳು ಮತ್ತು ಕನೆಕ್ಟಿವಿಟಿ (Ice-Breaking Games)
ಶಿಕ್ಷಕರ ಪರಿಚಯ (ನಾಟಕದ ಮೂಲಕ): ಶಿಕ್ಷಕರು ಕೇವಲ ವೇದಿಕೆ ಮೇಲೆ ನಿಂತು ಹೆಸರು ಹೇಳುವ ಬದಲು, ಒಂದು ಸಣ್ಣ ಪ್ರಹಸನ (Skit) ಅಥವಾ ಮೈಮ್ (Mime) ಮೂಲಕ ತಮ್ಮನ್ನು ತಾವು ಪರಿಚಯಿಸಿಕೊಂಡರೆ ಮಕ್ಕಳಿಗೆ ಶಿಕ್ಷಕರ ಮೇಲಿರುವ ಭಯ ದೂರವಾಗಿ ಆಪ್ತತೆ ಬೆಳೆಯುತ್ತದೆ.
5. ಡಿಜಿಟಲ್ ಮತ್ತು ಸೃಜನಶೀಲ ಸ್ಪರ್ಶ (Digital & Creative Touch)
ಡಿಜಿಟಲ್ ಕೌಂಟ್ಡೌನ್ ವಿಡಿಯೋ: ಶಾಲೆ ಆರಂಭವಾಗುವ ಮುನ್ನವೇ ಶಿಕ್ಷಕರೆಲ್ಲರೂ ಸೇರಿ ಮಕ್ಕಳಿಗೆ “We Miss You, ಸುಸ್ವಾಗತ” ಎಂದು ಹೇಳುವ 1 ನಿಮಿಷದ ಸಣ್ಣ ವಿಡಿಯೋ ಮಾಡಿ ಪೋಷಕರ ವ್ಯಾಟ್ಸ್ಆಪ್ ಗ್ರೂಪ್ಗೆ ಕಳುಹಿಸುವುದು.
ಫ್ಲ್ಯಾಶ್ ಮಾಬ್ (Flash Mob): ಪ್ರಾರ್ಥನಾ ಸಭೆ (Assembly) ಮುಗಿಯುತ್ತಿದ್ದಂತೆ ಹಠಾತ್ತನೆ ಶಿಕ್ಷಕರೆಲ್ಲರೂ ಸೇರಿ ಮಕ್ಕಳಿಗಾಗಿ ಒಂದು ಉತ್ಸಾಹ ಭರಿತ ಹಾಡಿಗೆ ನೃತ್ಯ (Flash Mob) ಮಾಡಿದರೆ ಮಕ್ಕಳ ಖುಷಿ ದುಪ್ಪಟ್ಟಾಗುತ್ತದೆ.
ಪೋಷಕರಿಗೆ ‘ಕೃತಜ್ಞತಾ ಪತ್ರ’: ಮಕ್ಕಳನ್ನು ಶಾಲೆಗೆ ಬಿಡಲು ಬರುವ ಪೋಷಕರಿಗೆ ಶಾಲೆಯ ವತಿಯಿಂದ ಒಂದು ಸಣ್ಣ ಧನ್ಯವಾದಗಳ ಕಾರ್ಡ್ ನೀಡುವುದು (ಉದಾಹರಣೆಗೆ: “ನಿಮ್ಮ ನಂಬಿಕೆಗೆ ಧನ್ಯವಾದಗಳು, ಇಂದಿನಿಂದ ನಿಮ್ಮ ಮಗುವಿನ ಜವಾಬ್ದಾರಿ ನಮ್ಮದು”). ಇದು ಪೋಷಕರಲ್ಲಿ ಶಾಲೆಯ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ.
ವಿಶೇಷ ಸೂಚನೆ: ಶಾಲೆಯ ಮೊದಲ ದಿನ ಯಾವುದೇ ಕಠಿಣ ನಿಯಮಗಳನ್ನು ಹೇಳದೆ ಕೇವಲ ಪ್ರೀತಿ, ನಗು ಮತ್ತು ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ. ಶಾಲೆಗಳು ತಮ್ಮ ದೀರ್ಘಕಾಲೀನ ಪ್ರಗತಿಯ ಮಾದರಿಗೆ ತಕ್ಕಂತೆ ಈ ಮೇಲಿನ ಚಟುವಟಿಕೆಗಳಲ್ಲಿ ಸೂಕ್ತವಾದವುಗಳನ್ನು ಆಯ್ಕೆ ಮಾಡಿಕೊಂಡು, ಅದನ್ನು ಶಾಲೆಯ ಶಾಶ್ವತ ಬ್ರ್ಯಾಂಡಿಂಗ್ ಕಾರ್ಯಕ್ರಮವನ್ನಾಗಿ ರೂಪಿಸಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.