ರಾಜ್ಯದಲ್ಲಿ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯವು ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದೆ. ಈ ವರ್ಷ ಪರೀಕ್ಷೆ-1ರಲ್ಲಿ ಸಾರ್ವಕಾಲಿಕ ದಾಖಲೆಯ ಫಲಿತಾಂಶ ಬಂದ ಬೆನ್ನಲ್ಲೇ, ಇದೀಗ ಪರೀಕ್ಷೆ-2ರ ನಂತರ ಒಟ್ಟು ಕ್ರೋಢೀಕೃತ (Consolidated) ಫಲಿತಾಂಶವು ಶೇಕಡಾ 92.25ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದ 85.19% ಫಲಿತಾಂಶಕ್ಕೆ ಹೋಲಿಸಿದರೆ, ಇದು ಶೇಕಡಾ 7.06ರಷ್ಟು ಮಹತ್ವದ ಏರಿಕೆಯಾಗಿದ್ದು, ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಧನೆಯಾಗಿದೆ.
ಈ ಮಹತ್ತರ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಮತ್ತು ಇಲಾಖೆಯ ಅಧಿಕಾರಿಗಳಿಗೆ ತಮ್ಮ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಂಕಗಳ ಉತ್ತಮಿಕೆಗೆ ಸಿಕ್ಕ ಸುವರ್ಣಾವಕಾಶ
ಭಾರತ ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರವು ಈ ಎರಡು ಪರೀಕ್ಷೆಗಳ (ಪರೀಕ್ಷೆ-1 ಇತ್ಯಾದಿ) ವಿಧಾನವನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಪರೀಕ್ಷೆ-2ರಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಎರಡೂ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಯಾವ ವಿಷಯದಲ್ಲಿ ಗರಿಷ್ಠ ಅಂಕ ಪಡೆದಿರುತ್ತಾನೋ ಅದನ್ನೇ ಅಂತಿಮವಾಗಿ ಪರಿಗಣಿಸಿರುವುದರಿಂದ, ಉತ್ತೀರ್ಣರಾದವರ ಸಂಖ್ಯೆಯಷ್ಟೇ ಅಲ್ಲದೆ ವಿದ್ಯಾರ್ಥಿಗಳ ಅಂಕಗಳೂ ಸಹ ಗಣನೀಯವಾಗಿ ಹೆಚ್ಚಳ ಕಂಡಿವೆ.
ಕಲಾ, ವಾಣಿಜ್ಯ ಮತ್ತು ವಿಜ್ಞಾನ: ಎಲ್ಲ ವಿಭಾಗಗಳಲ್ಲೂ ಭರ್ಜರಿ ಯಶಸ್ಸು
ಮೂರೂ ವಿಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಅದ್ಭುತ ಪ್ರಗತಿ ದಾಖಲಾಗಿದೆ:
ಕಲಾ ವಿಭಾಗ: ಕಳೆದ ವರ್ಷದ 69.47% ರಿಂದ 83.31% ಕ್ಕೆ ಏರಿಕೆ.
ವಾಣಿಜ್ಯ ವಿಭಾಗ: ಕಳೆದ ವರ್ಷದ 87.83% ರಿಂದ 92.84% ಕ್ಕೆ ಏರಿಕೆ.
ವಿಜ್ಞಾನ ವಿಭಾಗ: ಕಳೆದ ವರ್ಷದ 91.88% ರಿಂದ 96.01% ಕ್ಕೆ ಭರ್ಜರಿ ಏರಿಕೆ ಕಂಡಿದೆ.
ನಗರವನ್ನು ಹಿಂದಿಕ್ಕಿದ ಹಳ್ಳಿ ಪ್ರತಿಭೆಗಳು!
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಬಾರಿ ವಿಶೇಷ ಸಾಧನೆ ಮಾಡಿದ್ದಾರೆ. ಗ್ರಾಮಾಂತರ ಪ್ರದೇಶದ ಒಟ್ಟಾರೆ ಫಲಿತಾಂಶ 92.77% ದಾಖಲಾಗಿದ್ದರೆ, ನಗರ ಪ್ರದೇಶದ ಫಲಿತಾಂಶ 92.01% ಆಗಿದೆ. ಕಳೆದ ವರ್ಷ ಗ್ರಾಮೀಣ ಭಾಗದ ಫಲಿತಾಂಶ 84.94% ಇತ್ತು. ಈ ಬಾರಿ ಕಂಡುಬಂದಿರುವ ಸುಧಾರಣೆಯು ಹಳ್ಳಿ ಮಕ್ಕಳ ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಸರ್ಕಾರಿ ಕಾಲೇಜುಗಳ ಐತಿಹಾಸಿಕ ಮುನ್ನಡೆ
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಫಲಿತಾಂಶದಲ್ಲಿ ಅಪ್ರತಿಮ ಪ್ರಗತಿ ಕಂಡುಬಂದಿದೆ. ಕಳೆದ ವರ್ಷ 73.04% ರಷ್ಟಿದ್ದ ಸರ್ಕಾರಿ ಕಾಲೇಜುಗಳ ಕ್ರೋಢೀಕೃತ ಫಲಿತಾಂಶವು ಈ ಬಾರಿ 87.03% ಕ್ಕೆ ತಲುಪಿದೆ. ಸುಮಾರು 13.99% ರಷ್ಟು ಕಂಡುಬಂದಿರುವ ಈ ಸುಧಾರಣೆಯು ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಗಟ್ಟಿಗೊಳಿಸಿದೆ.
ಸಮಾಜದ ಎಲ್ಲ ವರ್ಗಗಳ ಸಮಾನ ಯಶಸ್ಸು
ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶ್ಲಾಘನೀಯ ಸಾಧನೆ ಮಾಡಿದ್ದಾರೆ. ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳ ಫಲಿತಾಂಶ 77.66% ರಿಂದ 88.11% ಕ್ಕೆ ಹಾಗೂ ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳ ಫಲಿತಾಂಶ 76.15% ರಿಂದ 88.26% ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಇತರೆ ಹಿಂದುಳಿದ ವರ್ಗಗಳಾದ C-1, 2A, 2B, 3A ಮತ್ತು 3B ವರ್ಗಗಳಲ್ಲೂ ಅತ್ಯುತ್ತಮ ಫಲಿತಾಂಶ ಬಂದಿದೆ.
ಗುಣಮಟ್ಟದ ಶಿಕ್ಷಣ ಮತ್ತು ಶ್ರೇಣಿವಾರು ವಿವರ
ಈ ಬಾರಿ ಉನ್ನತ ಶ್ರೇಣಿ (Distinction – 85% ಕ್ಕಿಂತ ಹೆಚ್ಚು) ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷದ 1,04,562 ರಿಂದ ಬರೋಬ್ಬರಿ 1,73,507 ಕ್ಕೆ ಏರಿಕೆಯಾಗಿದೆ. ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರ ಸಂಖ್ಯೆಯೂ ಹೆಚ್ಚಾಗಿದೆ.
ಉನ್ನತ ಶ್ರೇಣಿ (Distinction): 1,73,507 ವಿದ್ಯಾರ್ಥಿಗಳು.
ಪ್ರಥಮ ದರ್ಜೆ (First Class): 3,01,934 ವಿದ್ಯಾರ್ಥಿಗಳು.
ದ್ವಿತೀಯ ದರ್ಜೆ (Second Class): 80,812 ವಿದ್ಯಾರ್ಥಿಗಳು.
ಉತ್ತೀರ್ಣ ದರ್ಜೆ (Pass Class): 28,824 ವಿದ್ಯಾರ್ಥಿಗಳು.
“ಯಾವೊಬ್ಬ ಮಗುವೂ ಹಿಂದೆ ಉಳಿಯಬಾರದು” ಎಂಬ ಸರ್ಕಾರದ ಆಶಯಕ್ಕೆ ಇಲಾಖೆಯು ಕೈಗೊಂಡಿದ್ದ ಅತಿಥಿ ಉಪನ್ಯಾಸಕರ ನೇಮಕ, ಡಿಸೆಂಬರ್ ಒಳಗೆ ಪಠ್ಯ ಮುಕ್ತಾಯ, ಪ್ರಶ್ನೆ ಬ್ಯಾಂಕ್ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳ ಲಭ್ಯತೆ, ಮೆಗಾ ಪೋಷಕರ-ಶಿಕ್ಷಕರ ಸಭೆಗಳು ಯಶಸ್ಸಿಗೆ ಬಲವಾದ ಅಡಿಪಾಯವಾಗಿವೆ ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ (KSEAB) ಅಧಿಕೃತ ಪ್ರಕಟಣೆ
2026ರ ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ದಿನಾಂಕ 30-04-2026 ರಿಂದ 13-05-2026 ರವರೆಗೆ ರಾಜ್ಯದ 253 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. 12 ಮೌಲ್ಯಮಾಪನ ಶಿಬಿರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಯಶಸ್ವಿಯಾಗಿ ನಡೆದಿದೆ.
ಫಲಿತಾಂಶ ವೀಕ್ಷಣೆ ಎಲ್ಲಿ?
ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಸಂಯೋಜನೆಯನ್ನು (Combination) ನಮೂದಿಸಿ ಅಧಿಕೃತ ವೆಬ್ಸೈಟ್ಗಳಾದ https://karresults.nic.in ಅಥವಾ https://dpue-exam.karnataka.gov.in/kseabdpue2025e1e2e3/WebForm1.aspx ನಲ್ಲಿ ದಿನಾಂಕ 21-05-2026 ರಂದು ಮಧ್ಯಾಹ್ನ 1:00 ಗಂಟೆಯಿಂದ ಫಲಿತಾಂಶ ವೀಕ್ಷಿಸಬಹುದಾಗಿದೆ.
ಕಾಲೇಜುಗಳ ಪ್ರಾಂಶುಪಾಲರ ಲಾಗಿನ್ನಲ್ಲೂ ಫಲಿತಾಂಶದ ಪಟ್ಟಿ ಲಭ್ಯವಿರಲಿದೆ. ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ವಿಷಯವಾರು ಅತ್ಯಧಿಕ ಅಂಕಗಳನ್ನು ಹೋಲಿಸಿ ಅಂತಿಮ ಫಲಿತಾಂಶದ ಪಟ್ಟಿಯನ್ನು ದಿನಾಂಕ 22-05-2026 ರಂದು ಮಂಡಲಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.