Shubhashaya News

ಸರ್ಕಾರಿ ಶಾಲೆಗಳತ್ತ ಮತ್ತೆ ವಿದ್ಯಾರ್ಥಿಗಳ ಹೆಜ್ಜೆ

ದ್ವಿಭಾಷಾ ಬೋಧನೆ, ೧೦ನೇ ತರಗತಿ ಫಲಿತಾಂಶ ಏರಿಕೆಯಿಂದ ಆಳಂದ ಶಿಕ್ಷಣ ಇಲಾಖೆಗೆ ಹೊಸ ಚೈತನ್ಯ

ಆಳಂದ: ಪಟ್ಟಣದ ಶಿಕ್ಷಣ ಇಲಾಖೆ ಗೋದಾಮಿನಿಂದ ಶಾಲೆಗಳಿಗೆ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕವನ್ನು ನೋಡಲ್ ಅಧಿಕಾರಿ ಶ್ರೀಮಂತ ಪಾಟೀಲ ವಿತರಣೆ ಮಾಡಿದರು.

 


ಆಳಂದ: ಸ್ಥಳೀಯ ಬಿಆರ್‌ಸಿ ಕೇಂದ್ರದಲ್ಲಿ ಶಾಲಾ ಹಂತದಿAದಲೇ ದ್ವಿಭಾಷಾ ಬೋಧನೆಗೆ ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ ನೇತೃತ್ವದಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

ಆಳಂದ: ಆಂಗ್ಲಮಾಧ್ಯಮ ಹಾಗೂ ಖಾಸಗಿ ಶಾಲೆಗಳ ವ್ಯಾಮೋಹದಿಂದ ಕಳೆದ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಸುಮಾರು ೩ ಸಾವಿರ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಕಂಡಿದ್ದರೂ, ಈ ಬಾರಿ ದ್ವಿಭಾಷಾ ಬೋಧನೆ, ಉತ್ತಮ ಫಲಿತಾಂಶ ಹಾಗೂ ಮೂಲಸೌಕರ್ಯಗಳ ಬಲವರ್ಧನೆಯ ಮೂಲಕ ಮತ್ತೆ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯಲು ತಾಲೂಕಿನ ಶಿಕ್ಷಣ ಇಲಾಖೆ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ.
ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ದ್ವಿಭಾಷಾ ಬೋಧನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕಳೆದ ವರ್ಷ ೧೦ನೇ ತರಗತಿಯಲ್ಲಿ ಕೇವಲ ಶೇ.೪೨ರಷ್ಟು ಫಲಿತಾಂಶ ದಾಖಲಿಸಿದ್ದ ತಾಲೂಕು, ಈ ಬಾರಿ ವಿಶೇಷ ತರಗತಿಗಳು ಹಾಗೂ ನಿರಂತರ ಬೋಧನಾ ಚಟುವಟಿಕೆಗಳ ಫಲವಾಗಿ ಶೇ.೮೧ರಷ್ಟು ಫಲಿತಾಂಶ ಸಾಧಿಸಿದೆ. ಈ ಸಾಧನೆಯೇ ಇಲಾಖೆಗೆ ಹೊಸ ಆತ್ಮವಿಶ್ವಾಸ ತುಂಬಿದ್ದು, ಪೋಷಕರಲ್ಲೂ ಸರ್ಕಾರಿ ಶಾಲೆಗಳ ಬಗ್ಗೆ ವಿಶ್ವಾಸ ಹೆಚ್ಚಿಸಿದೆ ಎಂದು ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ ಅವರು ಹೇಳಿಕೊಂಡಿದ್ದಾರೆ.
ಕಳೆದ ಸಾಲಿನಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಒಟ್ಟು ೫೫,೩೫೦ ವಿದ್ಯಾರ್ಥಿಗಳಿದ್ದರು. ಆದರೆ ಸುಮಾರು ೩ ಸಾವಿರ ಮಕ್ಕಳ ದಾಖಲಾತಿಯಲ್ಲಿ ಕುಸಿತ ಕಂಡ ಹಿನ್ನೆಲೆ, ಈ ಬಾರಿ ಮತ್ತೆ ೩ ಸಾವಿರಕ್ಕೂ ಅಧಿಕ ಮಕ್ಕಳನ್ನು ಶಾಲೆಗೆ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ. ಎಲ್‌ಕೆಜಿ ಹಾಗೂ ಯುಕೆಜಿ ಹಂತದಿAದಲೇ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕ್ರೂಢೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಇಲಾಖೆ ಗಮನ ಹರಿಸಿದೆ.
೧ರಿಂದ ೫ನೇ ತರಗತಿವರೆಗೆ ದ್ವಿಭಾಷಾ ಬೋಧನೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಶೇ.೭೦ರಷ್ಟು ತರಬೇತಿ ಪೂರ್ಣಗೊಂಡಿದ್ದು, ಒಟ್ಟು ೫೮೦ ಶಿಕ್ಷಕರಿಗೆ ಐದು ದಿನಗಳ ತರಬೇತಿ ಕಾರ್ಯಕ್ರಮ ಪ್ರಗತಿಯಲ್ಲಿದೆ.
ಜೂನ್ ೧ರಿಂದ ರಾಜ್ಯದಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಪುನರಾರಂಭಗೊಳ್ಳಲಿದ್ದು, ಶಾಲಾ ಆರಂಭಕ್ಕೆ ತಾಲೂಕಿನಾದ್ಯಂತ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಬೇಸಿಗೆ ರಜೆ ಬಳಿಕ ಮಕ್ಕಳು ಮತ್ತೆ ಶಾಲೆಗಳತ್ತ ಮುಖ ಮಾಡಲಿದ್ದು, ಶಾಲಾ ಆವರಣಗಳಲ್ಲಿ ವಿದ್ಯಾರ್ಥಿಗಳ ಕಿಲಕಿಲ ನಗೆ ಮತ್ತೆ ಕೇಳಿಸಲಿದೆ.
ಶಾಲಾ ಆರಂಭದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಉದ್ದೇಶದಿಂದ ಈಗಾಗಲೇ ಪಠ್ಯಪುಸ್ತಕ ವಿತರಣೆ ಕಾರ್ಯ ಆರಂಭವಾಗಿದೆ. ತಾಲೂಕಿನ ೪೫೧ ಶಾಲೆಗಳಲ್ಲಿನ ೩೯,೫೪೯ ವಿದ್ಯಾರ್ಥಿಗಳಿಗೆ ಒಟ್ಟು ೫೭,೩೪,೯೯೯ ಪಠ್ಯಪುಸ್ತಕಗಳ ಬೇಡಿಕೆ ಇದ್ದು, ಇದರಲ್ಲಿ ಉಚಿತ ವಿತರಣೆಗೆ ೪೪,೯೯,೯೯೫ ಹಾಗೂ ಮಾರಾಟಕ್ಕೆ ೧,೨೩,೫೦೪ ಪುಸ್ತಕಗಳ ಅವಶ್ಯಕತೆ ಇದೆ. ಆರ್‌ಟಿಇ ಅಡಿಯಲ್ಲಿ ೧,೦೯೮ ವಿದ್ಯಾರ್ಥಿಗಳಿಗೆ ಪುಸ್ತಕಗಳ ಬೇಡಿಕೆಯಿದ್ದು, ಈಗಾಗಲೇ ಉಚಿತ ಹಾಗೂ ಮಾರಾಟದ ಪುಸ್ತಕಗಳ ಸರಬರಾಜು ಪ್ರಗತಿಯಲ್ಲಿದೆ. ಆದರೆ ಇನ್ನೂ ಶೇ.೩೫ರಷ್ಟು ಪುಸ್ತಕಗಳ ಪೂರೈಕೆ ಬಾಕಿಯಿರುವುದು ಗಮನಾರ್ಹವಾಗಿದೆ.
ತಾಲೂಕಿನಲ್ಲಿ ೨೫೬ ಹಿರಿಯ ಪ್ರಾಥಮಿಕ ಶಾಲೆಗಳು, ೯೦ ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ೫೩ ಸರ್ಕಾರಿ ಪ್ರೌಢಶಾಲೆಗಳಿವೆ. ಜೊತೆಗೆ ಖಾಸಗಿ ವಲಯದ ೧೧೫ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೂ ಪಠ್ಯಪುಸ್ತಕ ವಿತರಣೆ ನಡೆಯುತ್ತಿದೆ.
ಹೊಸ ಶೈಕ್ಷಣಿಕ ವರ್ಷವನ್ನು ಸುಗಮವಾಗಿ ಆರಂಭಿಸಲು ಶಾಲೆಗಳ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಅಕ್ಷರ ದಾಸೋಹ ಅಡುಗೆ ಕೊಠಡಿಗಳ ನಿರ್ವಹಣೆ ಸೇರಿದಂತೆ ಮೂಲಸೌಕರ್ಯಗಳ ಸಿದ್ಧತೆ ಕೈಗೊಳ್ಳಲಾಗಿದೆ. ಮೇ ೨೮ರಿಂದಲೇ ಶಾಲೆಗಳ ಸ್ವಚ್ಛತಾ ಕಾರ್ಯ ಆರಂಭವಾಗಲಿದ್ದು, ಮೇ ೩೦ರಂದು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಲಿದ್ದಾರೆ. ಜೂನ್ ೧ರಂದು ಮೇಘಾ ಪೋಷಕರ ಸಭೆಯೊಂದಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಅವರು ತಿಳಿಸಿದ್ದಾರೆ.
ಈ ಬಾರಿ ತಾಲೂಕಿನಲ್ಲಿ ೮ ಕೆಪಿಎಸ್ ಶಾಲೆಗಳು ಹೊಸದಾಗಿ ಆರಂಭಗೊಳ್ಳಲಿದ್ದು, ಚಿಂಚನಸೂರ, ಅಂಬಲಗಾ, ಖಜೂರಿ, ಮಟಕಿ, ಮದಗುಣಕಿ, ನಿರಗುಡಿ ಹಾಗೂ ಖಂಡಾಳ ಗ್ರಾಮಗಳಲ್ಲಿ ಶಾಲೆಗಳು ಕಾರ್ಯಾರಂಭ ಮಾಡಲಿವೆ.
ಇನ್ನೊಂದೆಡೆ ಕರ್ನಾಟಕ ಕೈಮಗ್ಗ ನಿಗಮದ ಅಧಿಕಾರಿಗಳು ಆಳಂದದ ಗೊದಾಮಿಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ವಿತರಿಸಲು ದಾಸ್ತಾನು ಮಾಡಿರುವ ಸಮವಸ್ತ್ರಗಳ ಗುಣಮಟ್ಟ ಪರಿಶೀಲಿಸಿದರು. ಈ ವೇಳೆ ಪುಸ್ತಕ ನೋಡಲ್ ಅಧಿಕಾರಿ ಶ್ರೀಮಂತ ಪಾಟೀಲ ಉಪಸ್ಥಿತರಿದ್ದರು.
ಶಿಕ್ಷಣಾಧಿಕಾರಿಗಳ ಹೇಳಿಕೆ:
“ಬರುವ ಶೈಕ್ಷಣಿಕ ವರ್ಷದ ಯೋಜನೆಯಂತೆ ಎಲ್ಲಾ ಶಾಲೆಗಳಲ್ಲಿ ೧ರಿಂದ ೫ನೇ ತರಗತಿವರೆಗೆ ದ್ವಿಭಾಷಾ ಬೋಧನೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ೫೮೦ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ವಿತರಣೆ ಕಾರ್ಯವೂ ಹಂತ ಹಂತವಾಗಿ ನಡೆಯುತ್ತಿದೆ,” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ ಅವರು ತಿಳಿಸಿದ್ದಾರೆ.

Leave A Reply

Your email address will not be published.