ಆಳಂದ: ಪಟ್ಟಣದಲ್ಲಿ ಮಟ ಮಟ ಮಧ್ಯಾಹ್ನದ ಬೇಸಿಗೆ ವಿಪರೀತ ಬಿಸಲಿನ ರಕ್ಷಣೆಗೆ ದೈನಂದಿನ ಚಟುವಟಿಕೆ ಹೊರಟವರು ಟ್ಯಾವೆಲ್, ದಸ್ತಿ ಮಹಿಳೆಯರು ಸೀರೆ ಶರಗದೊಂದಿಗೆ ರಕ್ಷಣೆ ಪಡೆಯುತ್ತ ಓಡಾಡಿ ಸಂಕಷ್ಟ ಪಡುತ್ತಿದ್ದಾರೆ.
ಆಳಂದ: ತಾಲೂಕಿನಾದ್ಯಂತ ತಾಪಮಾನ ದಿನೇದಿನೇ ಏರಿಕೆಯಾಗುತ್ತಿದ್ದು, ಉರಿ ಬಿಸಿಲಿನ ಹೊಡೆತಕ್ಕೆ ಜನಜೀವನ ಸಂಪೂರ್ಣವಾಗಿ ತತ್ತರಿಸಿದೆ. ಬೆಳಿಗ್ಗೆಯಿಂದಲೇ ನೆತ್ತಿ ಸುಡುವಂತ ಬಿಸಿಲು ಬೀಳುತ್ತಿದ್ದು, ಮಧ್ಯಾಹ್ನ ವೇಳೆಗೆ ಹೊರಗೆ ಸಂಚರಿಸುವುದು ಜನರಿಗೆ ಸವಾಲಾಗಿ ಪರಿಣಮಿಸಿದೆ. ಮದುವೆ, ಗೃಹಪ್ರವೇಶ, ನಿಶ್ಚಿತಾರ್ಥಗಳಂತಹ ಶುಭ ಸಮಾರಂಭಗಳು ನಡೆಯುತ್ತಿರುವ ನಡುವೆಯೂ ಬಿಸಿಲಿನ ಕಾಟ ಕಡಿಮೆಯಾಗದೆ ಜನರು ಪರದಾಡುತ್ತಿದ್ದಾರೆ.
ಕೃಷಿಕರಿಗೆ ಹೊಲಗಳಲ್ಲಿ ಕೆಲಸ ಮಾಡುವುದು ದುಸ್ತರವಾಗಿದೆ. ಬಿಸಿಲಿನ ತಾಪಕ್ಕೆ ತಲೆಮೇಲೆ ಬೆಂಕಿ ಸುರಿಯುತ್ತಿರುವಂತ ಅನುಭವವಾಗುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಬಸ್ಗಳಲ್ಲಿ ಕಿಕ್ಕಿರಿದ ಪ್ರಯಾಣಿಕರು ಉರಿ ಬಿಸಿಲಿನ ನಡುವೆ ಸಂಚರಿಸುವುದೇ ಕಷ್ಟಕರವಾಗಿದೆ.
ಮಾರುಕಟ್ಟೆ ಮತ್ತು ಮುಖ್ಯ ರಸ್ತೆಗಳಲ್ಲಿ ಪಾದಚಾರಿಗಳು ಬಿಸಿಲಿನ ಶಾಖದಿಂದ ಬಳಲುತ್ತಿದ್ದು, ವ್ಯಾಪಾರ ವ್ಯವಹಾರಗಳ ಮೇಲೂ ಪರಿಣಾಮ ಬೀರಿದೆ. ಬಿಸಿಲಿನ ದಣಿವು ನಿವಾರಿಸಿಕೊಳ್ಳಲು ಜನರು ತಂಪಾದ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಮಜ್ಜಿಗೆ, ಕೋಲ್ಡ್ ಡ್ರಿಂಕ್ಸ್, ಹಣ್ಣಿನ ಜ್ಯೂಸ್, ಎಳೆನೀರು ಹಾಗೂ ತೆಂಗಿನ ನೀರಿನ ಬೇಡಿಕೆ ಹೆಚ್ಚಳವಾಗಿದ್ದು, ಅವುಗಳ ಬೆಲೆ ಸಹ ಏರಿಕೆಯಾಗಿದೆ.
ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಕಲ್ಲಂಗಡಿ, ಟರಬೋಜ್, ಸೇಬು, ಅಂಜೂರಿನ ಬೆಲೆ ಏರಿಕೆಯಿಂದ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಇವುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.
ಮನೆಯಲ್ಲಿ ಪ್ಯಾನ್, ಕೂಲರ್, ಏರ್ ಕೂಲಿಂಗ್ ಉಪಕರಣಗಳ ಬಳಕೆ ಹೆಚ್ಚಳವಾಗಿದ್ದು, ದಿನವಿಡೀ ತಂಪಿನ ವಾತಾವರಣಕ್ಕಾಗಿ ಜನರು ಪ್ರಯತ್ನಿಸುತ್ತಿದ್ದಾರೆ. ಮದುವೆ ಸಂಭ್ರಮಗಳ ಮಧ್ಯೆಯೂ ಬಿಸಿಲಿನ ಪರಿತಾಪ ಜನರನ್ನು ಕಂಗೆಡಿಸುತ್ತಿದ್ದು, ನೆರಳಿನ ಹುಡುಕಾಟ ಸಾಮಾನ್ಯ ದೃಶ್ಯವಾಗಿದೆ.
ಒಟ್ಟಾರೆ, ಉರಿ ಬಿಸಿಲಿನ ತೀವ್ರತೆ ಆಳಂದ ಪ್ರದೇಶದಲ್ಲಿ ಜನರ ದಿನನಿತ್ಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ತಂಪಿನ ಆಯ್ಕೆಗಳತ್ತ ಜನರು ಹೆಚ್ಚಾಗಿ ಮುಖಮಾಡುತ್ತಿದ್ದಾರೆ.
Comments are closed.