Shubhashaya News

ಅಲೆಮಾರಿ ಜನಾಂಗದಲ್ಲಿ ಅರಳಿದ ಅಪರೂಪದ ಪ್ರತಿಭೆ!

ಅಲೆಮಾರಿ ಗೊಲ್ಲರ್ ವಿದ್ಯಾರ್ಥಿನಿ ಸುಜಾತಾ ಭೀಮಶಾ

ಆಳಂದ: ಮಾದಹಿಪ್ಪರಗಾ ಸರ್ಕಾರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಸುಜಾತ ಗೊಲ್ಲರ ಅವರ ಸಾಧನೆಗೆ ಶಿಕ್ಷಣ ಪ್ರೇಮಿಗಳು ಗೌರವಿಸಿದ್ದಾರೆ. ಇನ್ನೊಂದು ಚಿತ್ರದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ನಿತ್ಯ ಮನೆ ಮನೆಗೆ ಹೋಗಿ ರೂಟಿ ಬೇಡಿ ತರುವ ಚಿತ್ರ.

ಆಳಂದ: ಹೊಟ್ಟೆಪಾಡಿಗಾಗಿ ಮನೆಮನೆ ಬೇಡುತ್ತಾ, ಜ್ಞಾನದ ಹಸಿವು ತೀರಿಸಿದ ತಾಲೂಕಿನ ಮಾದನ ಹಿಪ್ಪರಗಾ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ: “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ಧ್ಯೇಯಕ್ಕೆ ಜೀವಂತ ಉದಾಹರಣೆಯಾಗಿ ಹೊರಹೊಮ್ಮಿದೆ.
ರಾಜ್ಯದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ೨೦೨೬ ರಲ್ಲಿ ರಾಜ್ಯದಾದ್ಯಂತ ಪಾಸ್ ಪ್ರತಿಶತ ೯೪.೧% ತಲುಪಿದ್ದರೆ, ಕಲಬುರಗಿ ಜಿಲ್ಲೆಯೂ ಗಣನೀಯ ಸುಧಾರಣೆ ಕಂಡಿದೆ. ಆದರೆ ಈ ಫಲಿತಾಂಶದ ನಡುವೆಯೇ ಒಂದು ಸಾಮಾನ್ಯ ವಿದ್ಯಾರ್ಥಿನಿಯ ಅಸಾಧಾರಣ ಸಾಧನೆ ರಾಜ್ಯದ ಗಮನ ಸೆಳೆಯುತ್ತಿದೆ.
ಆಳಂದ್ ತಾಲೂಕಿನ ಮಾದನ ಹಿಪ್ಪರಗಾ ಸರ್ಕಾರಿ ಪಬ್ಲಿಕ್ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸುಜಾತಾ ಭೀಮಶಾ ಗೊಲ್ಲರ್ ಅವರು ಒಟ್ಟು ೬೨೫ ಅಂಕಗಳಲ್ಲಿ ೫೨೯ ಅಂಕಗಳನ್ನು ಪಡೆದು ೮೪.೬೪% ಅಂಕಗಳೊAದಿಗೆ ಉತ್ತೀರ್ಣರಾಗಿದ್ದಾರೆ.
ಮೂಲತಃ ಅಲೆಮಾರಿ ಜನಾಂಗಕ್ಕೆ ಸೇರಿದ ಗೊಲ್ಲರ್ ಸಮುದಾಯದ ಸುಜಾತಾ ಅವರು ಅನಕ್ಷರಸ್ಥ, ಕಡು ಬಡತನದ ಕುಟುಂಬದಲ್ಲಿ ಜನಿಸಿದ್ದಾರೆ. ತಂದೆ ಭೀಮಶಾ ಗೊಲ್ಲರ್. ಪ್ರತಿದಿನ ಬೆಳಗಿನಿಂದ ಸಂಜೆಯವರೆಗೆ ಹೊಟ್ಟೆಪಾಡಿಗಾಗಿ ಮನೆಮನೆಗೆ ಬಿಕ್ಷಾಟನೆ ಮಾಡುತ್ತಾ ಹಸಿವನ್ನು ಇಂಗಿಸಿಕೊಳ್ಳುವಾಗಲೂ, ಅದೇ ಸಮಯದಲ್ಲಿನ ಹೆಣ್ಣುಮಗುವೊಂದು ಶಾಲೆಗೆ ಬಂದು ಜ್ಞಾನದ ಹಸಿವನ್ನು ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅಲೆಮಾರಿ ಗೊಲ್ಲರ್ ಸಮುದಾಯದ ಕಡು ಬಡತನದಲ್ಲಿ ಹುಟ್ಟಿ ಬೆಳೆದ ಸುಜಾತಾ, ಕುಟುಂಬದ ಆರ್ಥಿಕ ಸಂಕಷ್ಟಗಳ ನಡುವೆಯೂ ಶಿಕ್ಷಣದ ಹಂಬಲವನ್ನು ಬಿಡಲಿಲ್ಲ. ಹೊಟ್ಟೆಪಾಡಿಗಾಗಿ ಪ್ರತಿದಿನ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುತ್ತಲೇ ತನ್ನ ಬದುಕನ್ನು ಸಾಗಿಸುತ್ತಿದ್ದರೂ, ಜ್ಞಾನದ ಹಸಿವು ಅವಳನ್ನು ಶಾಲೆಯತ್ತ ಸೆಳೆದಿತ್ತು. ದಿನನಿತ್ಯದ ಸಂಕಷ್ಟಗಳ ನಡುವೆಯೂ ಭೀಕ್ಷೆ ಮತ್ತು ಹಠದಿಂದ ಓದನ್ನು ಮುಂದುವರಿಸಿದ ಆಕೆಯ ಪರಿಶ್ರಮಕ್ಕೆ ಇದೀಗ ಸಾರ್ಥಕ ಫಲ ಸಿಕ್ಕಿದೆ ಎಂದು ಹೇಳಲಾಗಿದೆ.
“ನಾನು ಏನಾದರೂ ಸಾಧಿಸಬೇಕು” ಎಂಬ ದೃಢ ನಿರ್ಧಾರದೊಂದಿಗೆ, ಕುಟುಂಬದ ಬಡತನವನ್ನು ಮೆಟ್ಟಿ ನಿಂತು, ಎಲ್ಲರಂತೆ ಶಿಕ್ಷಣ ಪಡೆಯಬೇಕೆಂಬ ಛಲದಿಂದ ಸುಜಾತ ಅವರು ಈ ಸಾಧನೆ ಮಾಡಿದ್ದಾರೆ. ಬಸವಣ್ಣನ ವಚನ “ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ…” ಅವರಿಗೆ ಇದು ಸ್ಪೂರ್ತಿಯಾಗಿತ್ತು ಎನ್ನಲಾಗಿದೆ.
ಇಂದಿನ ಸಮಾಜದಲ್ಲಿ ಕಡು ಬಡವರಿಗೆ ಶಿಕ್ಷಣವೇ ದೊಡ್ಡ ಸವಾಲಾಗಿರುವಾಗ, ಸುಜಾತಾ ಅವರ ಕಥೆ ಅಲೆಮಾರಿ ಜನಾಂಗದಲ್ಲಿ ಅರಳಿದ ಅಪರೂಪದ ಪ್ರತಿಭೆಯಾಗಿ ನಿಂತಿದೆ. ಇದು ಕೇವಲ ಒಬ್ಬ ವಿದ್ಯಾರ್ಥಿನಿಯ ವೈಯಕ್ತಿಕ ಸಾಧನೆಯಲ್ಲ — ಬಡತನದ ಕತ್ತಲಲ್ಲಿ ಶಿಕ್ಷಣದ ಬೆಳಕನ್ನು ಹೊತ್ತಿಸುವ ಶಕ್ತಿಯ ಸಂಕೇತವಾಗಿದೆ. ಈ ವಿಶೇಷ ಸಾಧನೆಗಾಗಿ ಮಾದನಹಿಪ್ಪರಗಾದಲ್ಲಿನ ಸ್ಥಳೀಯ ಶಿಕ್ಷಣಪ್ರೇಮಿ ಬಳಗದ ವತಿಯಿಂದ ಸುಜಾತಾ ಅವರನ್ನು ಸನ್ಮಾನಿಸಲಾಗಿದೆ.
ಆಕೆಯ ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ೫೦೦ ರೂಪಾಯಿ ಸಂಗ್ರಹಿಸಲಾಗುತ್ತಿದ್ದ ಸಂದರ್ಭದಲ್ಲಿ, ಸುಜಾತಾಳಿಗೂ ಅದೇ ಮೊತ್ತವನ್ನು ಕೇಳಲಾಯಿತು. ಆಗ ಆಕೆಯ ನೋವಿನ ಮಾತುಗಳು ಅಲ್ಲಿದ್ದವರ ಮನಸ್ಸನ್ನು ಮಿಡಿಯುವಂತೆ ಮಾಡಿತು — “ಈಗತಾನೇ ಭಿಕ್ಷೆ ಬೇಡಿ ಊಟಕ್ಕೆ ರೊಟ್ಟಿ ತಂದಿದ್ದೇನೆ, ೫೦೦ ರೂಪಾಯಿ ಎಲ್ಲಿಂದ ಕೊಡಲಿ…?” ಎಂದು ಆಕೆಯ ನಿರ್ಭಂದದ ಉತ್ತರ ಎಲ್ಲರ ಕಣ್ಣೀರನ್ನು ತರಿಸಿತು. ಈ ಹೃದಯವಿದ್ರಾವಕ ಕ್ಷಣದಲ್ಲಿ ಮಾನವೀಯತೆ ಮೆರೆದ ಶಾಲೆಯ ಶಿಕ್ಷಕ ಸಮೂಹ, ಸುಜಾತಾಳ ಪರಿಸ್ಥಿತಿಯನ್ನು ಮನಗಂಡು, ಆಕೆಯ ಪ್ರವಾಸದ ಸಂಪೂರ್ಣ ವೆಚ್ಚವನ್ನು ತಮ್ಮಿಂದಲೇ ಭರಿಸಿದರು. ಅಲ್ಲದೆ, ಆಕೆಯ ಶಿಕ್ಷಣದತ್ತ ಇರುವ ಆಸಕ್ತಿಯನ್ನು ಗುರುತಿಸಿ, ಅಗತ್ಯವಿರುವ ಎಲ್ಲ ರೀತಿಯ ನೆರವು ಹಾಗೂ ಪ್ರೋತ್ಸಾಹವನ್ನು ನೀಡಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಮಾಜಸೇವಕರು ಮತ್ತು ರಾಜ್ಯದ ಎಲ್ಲ ಶಿಕ್ಷಣಪ್ರೇಮಿಗಳು ಈ ವಿದ್ಯಾರ್ಥಿನಿಯನ್ನು ಪ್ರೋತ್ಸಾಹಿಸಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಲಾಗುತ್ತಿದೆ. ಅವರ ಭವಿಷ್ಯ ಉಜ್ವಲವಾಗಲಿ, ಇನ್ನೂ ಎತ್ತರದ ಸಾಧನೆಗಳನ್ನು ಮಾಡಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

Comments are closed.

Don`t copy text!