Shubhashaya News

ರೈತ, ಕೃಷಿಕಾರ್ಮಿಕರ ಹಕ್ಕಿಗಾಗಿ ಹೋರಾಟ: ಭೀಮಾಶಂಕರ ಮಾಡಿಯಾಳ

ಆಳಂದ: ಕಿಸಾನಸಭಾದ ಬೇಡಿಕೆಗೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಟೆಂಟನಲ್ಲಿ ಬಸವ ಜಯಂತಿ ಹಾಗೂ ಬಿಕೆಎಂಯು ಪ್ರಥಮ ಸಮ್ಮೇಳನ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಉಯದ್ಘಾಟಿಸಿದರು. ಪ್ರಭುದೇವ ಯಳಸಂಗಿ, ಮೌಲಾ ಮುಲ್ಲಾ ಇತರರು ಇದ್ದರು.

ಆಳಂದ: ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಕಿಸಾನಸಭಾ ನೇತೃತ್ವದಲ್ಲಿ ರೈತರ ವಿವಿಧ ಬೇಡಿಕೆಗಳಿಗಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಟೆಂಟ್‌ನಲ್ಲಿ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತೀಯ ಖೇತ ಮಜದೂರ ಯುನಿಯನ್ (ಬಿಕೆಎಂಯು) ಪ್ರಥಮ ಜಿಲ್ಲಾ ಸಮ್ಮೇಳನವೂ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಅವರು, ಬಸವಣ್ಣನವರ ತತ್ವಗಳು ಸಮಾನತೆ ಮತ್ತು ಶ್ರಮಕ್ಕೆ ಗೌರವ ನೀಡುವ ಸಂದೇಶಗಳನ್ನು ಸಾರುತ್ತವೆ. ಇಂದಿನ ಪರಿಸ್ಥಿತಿಯಲ್ಲಿ ರೈತರು ಹಾಗೂ ಕೃಷಿಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಗಮನಿಸಿದರೆ, ಅವರ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಮುಖ್ಯ ವಕ್ತಾರರಾದ ಎಐಸಿಟಿಯು ರಾಜ್ಯ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ ಅವರು ಮಾತನಾಡಿ, ರೈತರ ಮತ್ತು ಕೃಷಿ ಕೂಲಿಕಾರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಧರಣಿ ಹೋರಾಟಗಳು ಜನರ ಸಮಸ್ಯೆಗಳನ್ನು ಹೊರತರುವ ಪ್ರಮುಖ ಸಾಧನಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿ, ದೇಶದಲ್ಲಿ ಸುಮಾರು ೪೦ ಶೇಕಡಾ ಜನರು ಕೃಷಿ ಕೂಲಿಕಾರರಾಗಿದ್ದರೂ ಅವರಿಗೆ ಸಮರ್ಪಕ ಸಾಲ ಸೌಲಭ್ಯಗಳ ಕೊರತೆ ಇದೆ. ಇದರ ಪರಿಣಾಮವಾಗಿ ಅವರು ಹೆಚ್ಚಿನ ಬಡ್ಡಿದರದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಅವಲಂಬಿತರಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಸಮಸ್ಯೆಯಿಂದ ಪಾರಾಗಲು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಸುಲಭ ಸಾಲ ಸೌಲಭ್ಯ ಒದಗಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತರು ಮತ್ತು ಕೃಷಿಕಾರ್ಮಿಕರ ಹಿತಾಸಕ್ತಿಗಾಗಿ ನಿರಂತರ ಹೋರಾಟ ಮುಂದುವರಿಯಲಿದೆ ಎಂದರು.
ಈ ವೇಳೆ ಕಿಸಾನಸಭಾ ತಾಲೂಕು ಅಧ್ಯಕ್ಷ ಧರ್ಮಣ್ಣ ಪೂಜಾರಿ ಮಾತನಾಡಿ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ರೈತರಿಗೆ ಸಮರ್ಪಕ ಬೆಂಬಲ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಕೆಎಂಯು ಜಿಲ್ಲಾ ಸಂಚಾಲಕ ಸಾಜೀದ್ ಅಹ್ಮದ್, ರತನಚಂದ ಕಲಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬಿಕೆಎಂಯು ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಪ್ರಕಟಿಸಲಾಯಿತು. ಮಹಾದೇವ ಜಿಡ್ಡೆ ಅವರನ್ನು ಅಧ್ಯಕ್ಷರಾಗಿ, ಕಬೀರಾ ಬೇಗಂ ಹಾಗೂ ದತ್ತಾ ಪಾತ್ರೆ ಅವರನ್ನು ಉಪಾಧ್ಯಕ್ಷರಾಗಿ, ರಮೇಶ್ ಹತ್ತಿಕಾಳೆ ಅವರನ್ನು ಕಾರ್ಯದರ್ಶಿಯಾಗಿ, ಶಂಕರ ಜಿರೋಳೆ ಮತ್ತು ರಾಹುಲ್ ಪೋತೆ ಅವರನ್ನು ಕಾರ್ಯಾಧ್ಯಕ್ಷರಾಗಿ, ಪಾಶಾ ಯಳಸಂಗಿ ಅವರನ್ನು ಸಹ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

Comments are closed.

Don`t copy text!