Shubhashaya News

ಶರಣಮಂಟಪದಲ್ಲಿ ದಸರಾ ಉತ್ಸವ – ಚಿಕ್ಕರೇವಣಸಿದ್ಧರ ಸ್ಮರಣೆ

ಆಳಂದ: ಸ್ಥಳೀಯ ಶರಣಮಂಟಪದಲ್ಲಿ ನಡೆದ ದಸರಾ ಉತ್ಸವದಲ್ಲಿ  ಶ್ರೀ ಚಿಕ್ಕ ರೇವಣಸಿದ್ದ ಶಿವಶರಣರ ದ್ವಿತೀಯ ಪುಣ್ಯರಾಧನೆ ಸಮಾರಂಭದಲ್ಲಿ ಪೀಠಾಧಿಪತಿ ಚನ್ನಬಸವ ಪಟ್ಟದೇವರ ಆಶೀರ್ವಚನ ನೀಡಿದರು. ಬಂಡಪ್ಪ ಶಾಸ್ತ್ರಿ ಪಟ್ಟಣ, ಭಕ್ತಾದಿಗಳಿದ್ದರು.

 

 

ಭಕ್ತರಿಗೆ ಜಗದ್ಗುರು ಸಿದ್ಧರೂಢರ ಮಹಿಮೆ ತೋರಿದ ರೇವಣಸಿದ್ಧ ಶರಣರು ಕೊಡುಗೆ: ಚನ್ನಬಸವ ಶ್ರೀ

ಆಳಂದ: ಜಗದ್ಗುರು ಸಿದ್ಧರೂಢರ ಅಪ್ರತಿಮ ತತ್ತ್ವಗಳನ್ನು ಭಕ್ತರ ಹೃದಯದಾಳದಲ್ಲಿ ಅಳವಡಿಸಿ ಎಲ್ಲೆಡೆ ಹರಡಿದ ಅಕ್ಕಲಕೋಟ ಮಠದ ಸದ್ಗುರು ರೇವಣಸಿದ್ಧ ಶಿವಶರಣ ಸ್ವಾಮಿಗಳ ತ್ಯಾಗ ಅತ್ಯುನ್ನತ. ಆ ಪರಂಪರೆಯ ದಾರಿಯಲ್ಲಿ ನಡೆದ ಚಿಕ್ಕ ರೇವಣಸಿದ್ಧ ಶರಣರು ಭಕ್ತರ ಪಾಲಿಗೆ ಅಮೂಲ್ಯ ರತ್ನವಾಗಿದ್ದರು ಎಂದು ಶರಣಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಹೇಳಿದರು.

ಪಟ್ಟಣದ ಶರಣನಗರದ ಸದ್ಗುರು ರೇವಣಸಿದ್ಧ ಶಿವಶರಣ ಮಂಟಪದಲ್ಲಿ ಶುಕ್ರವಾರ ದಸರಾ ಧಾರ್ಮಿಕ ಉತ್ಸವ ಹಾಗೂ ಅಕ್ಕಲಕೋಟ ಮಠದ ಚಿಕ್ಕ ರೇವಣಸಿದ್ಧ ಶಿವಶರಣ ಮಹಾಸ್ವಾಮಿಗಳ ಎರಡನೇ ಪುಣ್ಯಾರಾಧನೆ ಅಂಗವಾಗಿ ಕೈಲಾಸ ಮಂಟಪ ಪೂಜೆ, ದಸರಾ ದೇವಿಯ ಪುರಾಣ ಸಮಾರಂಭ ಮಾತನಾಡಿದರು.

“ಹುಬ್ಬಳ್ಳಿಯ ಸಿದ್ಧರೂಢರ ತತ್ತ್ವವನ್ನು ಎಲ್ಲೆಡೆ ತಲುಪಿಸಿದ ಸದ್ಗುರು ರೇವಣಸಿದ್ಧರು ಕೀರ್ತಿಪ್ರಾಯರಾಗಿದ್ದಾರೆ. ಅವರ ದಾರಿಯನ್ನು ಮುನ್ನಡೆಸಿದ ಚಿಕ್ಕ ರೇವಣಸಿದ್ಧರು ಮತ್ತು ಶರಣಮಂಟಪದ ತೀರ್ಥಲಿಂಗ ಪಟ್ಟದೇವರ ಸೇವೆಯನ್ನು ಭಕ್ತರು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಹಸನಾಗುತ್ತದೆ” ಎಂದು ಹೇಳಿದರು.

 

“ದೇಹ ಅಸ್ಥಿರ, ಭೂಮಿಯ ಮೇಲೆ ಯಾರೂ ಶಾಶ್ವತವಲ್ಲ. ಆದರೆ ಶರಣರು-ಸಂತರು ದೇವರ ರೂಪದಲ್ಲಿ ಅವತರಿಸಿ, ಭಕ್ತರಿಗೆ ಶಾಂತಿ-ನೆಮ್ಮದಿ, ಜೀವನೋದ್ಧಾರ ನೀಡಿದ್ದಾರೆ. ದುಶ್ಚಟಗಳಿಂದ ದೂರವಿದ್ದು, ಅವರ ಸನ್ಮಾರ್ಗವನ್ನು ಅನುಸರಿಸಿ ಬದುಕನ್ನು ಸಾರ್ಥಕಗೊಳಿಸಬೇಕು” ಎಂದು ಅವರು ಸಂದೇಶ ನೀಡಿದರು.

ಬೃಹತ್ ಸಮಾರಂಭಕ್ಕೆ ಸಿದ್ಧತೆ

ಶರಣಮಂಟಪದಲ್ಲಿ ಬರುವ ಡಿಸೆಂಬರ್ 21ರಿಂದ ಆರು ದಿನಗಳ ಬೃಹತ್ ಪ್ರಮಾಣದ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಹರಗುರು ಚರಮೂರ್ತಿಗಳು ಪಾಲ್ಗೊಳ್ಳಲಿದ್ದಾರೆ. ಸದ್ಗುರು ರೇವಣಸಿದ್ಧ ಗುರುಗಳ ಶಿಲಾಮೂರ್ತಿಗೆ 20ಕ್ಕೂ ಹೆಚ್ಚು ಭಕ್ತರು ತುಲಾಭಾರ ನೆರವೇರಿಸಲು ಒಪ್ಪಿಕೊಂಡಿದ್ದಾರೆ. ಸಮಾರಂಭದ ಯಶಸ್ಸಿಗಾಗಿ ಮಂಟಪ ಸಮಿತಿಯವರು ಈಗಿನಿಂದಲೇ ಸಿದ್ಧತೆಯ ಕಾರ್ಯ ಪ್ರಾರಂಭಿಸಬೇಕು ಎಂದು ಶ್ರೀ ಚನ್ನಬಸವ ಪಟ್ಟದೇವರು ಸಲಹೆ ನೀಡಿದರು.

ಘಟಸ್ಥಾಪನೆ ಮತ್ತು ನವರಾತ್ರಿ ಆಚರಣೆ:

ನವರಾತ್ರಿ ಉತ್ಸವ ಅಂಗವಾಗಿ ಮಂಟಪದಲ್ಲಿ ಸ್ಥಾಪಿಸಲಾದ ಘಟಕ್ಕೆ ಪ್ರತಿದಿನ ದೇವಿಯ ವಿಶೇಷ ಪೂಜೆ ನಡೆಯುತ್ತಿದೆ. ಬೆಳಿಗ್ಗೆ ದೇವಿಯ ಪಾರಾಯಣ ಹಾಗೂ ಸಂಜೆ ದೇವಿಯ ಪುರಾಣ ಕಾರ್ಯಕ್ರಮ ನಡೆಯುತ್ತಿದ್ದು, ಪಟ್ಟಣದ ಬಂಡಪ್ಪ ಶಾಸ್ತ್ರಿ ಪುರಾಣ ನಿರ್ವಹಿಸುತ್ತಿದ್ದಾರೆ. ಸಂಗೀತ ಕಲಾವಿದರಿಂದ ಸೇವೆಯೂ ಮುಂದುವರೆದಿದೆ.

ಕಾರ್ಯಕ್ರಮದಲ್ಲಿ ಪಂಚಕಮಿಟಿಯ ಅಧ್ಯಕ್ಷ ಸೂರ್ಯಕಾಂತ್ ತಟ್ಟೆ, ಕಾರ್ಯದರ್ಶಿ ಶ್ರೀಶೈಲ್ ಉಳ್ಳೆ, ಶರಣರಾದ ಭೀಮಣ್ಣಪ್ಪ ಶೆಟ್ಗುಂಡೆ, ಮಾಳಿ ಸಮಾಜದ ಶುಭಾμï ಬಳೂರಿಗೆ, ಹಿರಿಯರಾದ ಸಿದ್ಧಾರೂಢ ಕಂಟೆ, ಶಿವಶರಣ ಘಸನೇ ಸ್ವಾಮಿಗಳು, ಅಕ್ಕಮಹಾದೇವಿ ಭಜನಾ ಸಂಘದ ಅಧ್ಯಕ್ಷೆ ಮಹಾದೇವಿ ಜುಳಜುಳೆ ಹಾಗೂ ಅನೇಕ ಶರಣರು-ಶರಣೀಯರು ಭಾಗವಹಿಸಿ, ಶ್ರೀಗಳ ದರ್ಶನ-ಆಶೀರ್ವಾದ ಪಡೆದರು.

Comments are closed.

Don`t copy text!