ಎಸ್‍ಆರ್‍ಜಿ ಫೌಂಡೇಶನನಿಂದ ಸರ್ವೋತ್ತಮ ಶಿಕ್ಷಕ ಪ್ರಶಸಿ ಪ್ರದಾನ
ಶಿಕ್ಷಣವು ಪವಿತ್ರ ವೃತ್ತಿ, ನಿರಂತರ ಜ್ಞಾನಾರ್ಜನೆಯ ಮೂಲಕ ಸುಗಂಧ ಬೆಳೆಸಿ- ಡಾ. ಕುಬಕಡ್ಡಿ
ಆಳಂದ ಪಟ್ಟಣದ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಎಸ್‍ಆರ್‍ಜಿ ಫೌಂಡೇಶನನಿಂದ ಆಚರಿಸಿದ ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ಶಾಲೆಗಳ ಶಿಕ್ಷಕರು, ಕಾಲೇಜು ಉಪನ್ಯಾಸಕರನ್ನು ಸರ್ವೋತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹರ್ಷಾ ಎಸ್. ಗುತ್ತೇದಾರ, ಡಾ. ಬಸವರಾಜ ಕುಬಕಡ್ಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ, ಎಂ ಎಸ್ ಬೆಳ್ಳೆ ಇದ್ದರು.
ಆಳಂದ: ಆಧುನಿಕ ತಂತ್ರಜ್ಞಾನದ ಜೊತೆಗೆ ಪ್ರಾಚೀನ ವಿದ್ಯೆಯನ್ನು ಸಮನ್ವಯಗೊಳಿಸಿ ಶಿಕ್ಷಕರು ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಭಾವನೆಯನ್ನು ಉತ್ತೇಜಿಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್‍ನ ಡೀನ್ ಡಾ. ಬಸವರಾಜ್ ಕುಬಕಡ್ಡಿ ಅವರು ಕರೆ ನೀಡಿದರು.

ಪಟ್ಟಣದ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ತಡಕಲ್ ಹಾಗೂ ಎಸ್‍ಆರ್‍ಜಿ ಫೌಂಡೇಶನ್‍ನ ಆಶ್ರಯದಲ್ಲಿ ಎಸ್‍ಆರ್‍ಜಿ ಕಾಂಪ್ಲೆಕ್ಸ್ ಬಳಿಯ ಶೈಕ್ಷಣಿಕ ಆವರಣದಲ್ಲಿ ಹಮ್ಮಿಕೊಂಡ ಸರ್ವೋತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಗೌರವ ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ವೃತ್ತಿಯನ್ನು “ಪವಿತ್ರ ಧರ್ಮ” ಎಂದು ವರ್ಣಿಸಿದ ಅವರು, “ಇದು ಹುದ್ದೆಯ ವೇತನಕ್ಕಾಗಿಯಲ್ಲ, ಬದಲಿಗೆ ಜೀವನದ ಉದ್ದೇಶಕ್ಕಾಗಿ. ಶಿಕ್ಷಕರು ನಿರಂತರ ಓದು-ಅಧ್ಯಯನದ ಮೂಲಕ ತಮ್ಮನ್ನು ತಾವು ಮೇಲ್ಪಂಕ್ತಿಗೆ ಬರಲು ತಯಾರಿ ಮಾಡಿಕೊಳ್ಳಬೇಕು. ಶ್ರೀಗಂಧದ ಕಟ್ಟಿಗೆ ತಿಕ್ಕಿ ತೆಗೆದಾಗ ಸುಗಂಧ ಹೊರಬರುವಂತೆ, ಶಿಕ್ಷಕರೂ ಜ್ಞಾನದ ಆಳವಾದ ಅಧ್ಯಯನದಿಂದ ಸಮಾಜಕ್ಕೆ ಸುಗಂಧವನ್ನು ಹರಡಬೇಕು” ಎಂದು ಸಲಹೆ ನೀಡಿದರು.
ಶಿಕ್ಷಕರನ್ನು ಸರ್ಕಾರಿ ಶಾಲೆಗಳು, ಕಾಲೇಜುಗಳು, ಖಾಸಗಿ ಸಂಸ್ಥೆಗಳಲ್ಲಿ ವಿಭಿನ್ನ ಸ್ಥಾನಗಳಲ್ಲಿ ಕಾಣುತ್ತೇವೆ ಆದರೆ, “ಶಿಕ್ಷಣದಲ್ಲಿ ಮಾಡುವ ಕೆಲಸವೇ ಮುಖ್ಯ. ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಶಿಕ್ಷಕರು ಮಾದರಿಯಾಗಿ ನಿಲ್ಲಬೇಕು. ಇದಕ್ಕಾಗಿ ಹೆಚ್ಚಿನ ಶಕ್ತಿ ಮತ್ತು ಉತ್ಸಾಹವನ್ನು ತಂದುಕೊಳ್ಳಿ” ಎಂದು ಸಲಹೆ ನೀಡಿದರು.
ಶಿಕ್ಷಣ ವ್ಯವಸ್ಥೆಯ ಸವಾಲುಗಳನ್ನು ಎದುರಿಸುತ್ತಿರುವ “ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ತೊಡಗಿಸುವುದು ಶೈಕ್ಷಣಿಕ ಕುಂಠಿತತೆಗೆ ಕಾರಣವಾಗುತ್ತದೆ. ಶಿಕ್ಷಕರ ಮೇಲೆ ಒತ್ತಡ ಹೆಚ್ಚುತ್ತದೆ ಮತ್ತು ಮಕ್ಕಳು ಸರ್ಕಾರಿ ಶಾಲೆಗಳನ್ನು ತ್ಯಜಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಉತ್ತಮ ಶಿಕ್ಷಕರ ಸಂಖ್ಯೆ ಹೆಚ್ಚು. ಅವರ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶ ನೀಡಬೇಕಾಗಿದೆ ಎಂದ ಅವರು, ಈ ನಡುವೆಯೂ ಖಾಸಗಿ ಶಾಲೆಗಳಲ್ಲಿ ಮುನ್ನೆಡೆಗೆ ಅಲ್ಲಿನ ನಿರಂತರ ಪಾಠಬೋಧನೆಯಿಂದಾಗಿ ಶಿಸ್ತುಪಾಲನೆ, ಸಂರಕ್ಷಣೆಗಳಿಂದಾಗಿ ಮುನ್ನೆಡೆ ಸಾಧಿಸುತ್ತಿವೆ ಇದು ಸಹ ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
“ಶಿಕ್ಷಕರು ಪ್ರಾಚೀನ ವಿದ್ಯೆಯೊಂದಿಗೆ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಅಧ್ಯಯನದಲ್ಲಿ ಪರಿಣತರಾಗಬೇಕು. ನಿಮ್ಮ ಹಿಡಿತವಿರುವ ವಿಷಯದ ಮೇಲೆ ಕಾಪಿರೈಟ್ ಪಡೆದು ಹಣ ಸಂಪಾದಿಸಬಹುದು. ಪ್ರಾಜೆಕ್ಟ್‍ಗಳ ಮೂಲಕ ಪೇಟೆಂಟ್‍ಗಳನ್ನು ನೀಡಿ ವಿದ್ಯಾರ್ಥಿಗಳನ್ನು ಉತ್ತೇಜಿಸಿ. ಸಾಂಪ್ರದಾಯಿಕ ಜ್ಞಾನವನ್ನು ಮುಂದುವರಿಸಿ, ಭವಿಷ್ಯದ ವ್ಯವಸ್ಥೆಗೆ ಸಜ್ಜುಗೊಳಿಸಿ ನಿಲ್ಲಬೇಕು. ಇದರಿಂದ ಸವಾಲುಗಳನ್ನು ಎದುರಿಸಲು ಸಾಧ್ಯ” ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಅವರು ಮಾತನಾಡಿ, ಸಮಾಜದಲ್ಲಿ ಗುರುಗಳಿಗೆ ಅತ್ಯಂತ ಗೌರವ ಸ್ಥಾನವಿದೆ “ಶಿಕ್ಷಕರು ತಮ್ಮ ಪ್ರತಿಭೆಗಳನ್ನು ಹೆಚ್ಚಿಸಿಕೊಂಡು ಪರಿಣಾಮಕಾರಿ ಬೋಧನೆ ನಡೆಸಬೇಕು. ಎಸ್‍ಆರ್‍ಜಿ ಫೌಂಡೇಶನ್‍ನ ಸರ್ವೋತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನವು ಶ್ಲಾಘನೀಯ ಕಾರ್ಯ. ಸಮಾಜದಲ್ಲಿ ಇಂತಹ ಗುರುತಿಸುವ ಕಾರ್ಯಗಳು ಹೆಚ್ಚಾಗಬೇಕು” ಎಂದು ಅವರು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಹರ್ಷಾ ಗುತ್ತೇದಾರ ಅವರು ಮಾತನಾಡಿ, ಎಸ್‍ಆರ್‍ಜಿ ಫೌಂಡೇಶನ್ ಅಡಿಯಲ್ಲಿ ನಡೆಯುವ ಶಾಲೆಗಳು ಮತ್ತು ಕಾಲೇಜುಗಳ ಮೂಲಕ ಉತ್ತಮ ಶಿಕ್ಷಣ ನೀಡುವುದು ನಮ್ಮ ಗುರಿ ಎಂದು ತಿಳಿಸಿದರು. “ಇದಕ್ಕೆಲ್ಲ ಶಿಕ್ಷಕರೇ ಮುಖ್ಯ ಕಾರಣ. ತಾಲೂಕಿನಲ್ಲಿ ಸರ್ವೋತ್ತಮ ಶಿಕ್ಷಕರನ್ನು ಆಯ್ಕೆಮಾಡಿ ಪ್ರಶಸ್ತಿ ನೀಡಿ ಗೌರವಿಸುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ.. ಇದರ ಮೂಲಕ ಶಿಕ್ಷಣದ ಗುಣಮಟ್ಟವನ್ನು ಏರಿಸುವ ಚೇತರಿಕೆಯನ್ನು ಜಾಗೃತಗೊಳಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಶಿಕ್ಷಣ ಪ್ರೇಮಿ ಎಂ.ಎಸ್. ಬೆಳ್ಳೆ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಶಾಲೆ, ಕಾಲೇಜುಗಳಿಂದ ಆಯ್ಕೆಯಾದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿಗಳು ಮತ್ತು ಗೌರವ ಸತ್ಕಾರ ಕೈಗೊಳ್ಳಲಾಯಿತು.
ಬಿ.ಎಡ್ ಕಾಲೇಜು ಪ್ರಾಚಾರ್ಯ ಡಾ. ಅಶೋಕರೆಡ್ಡಿ ನಿರೂಪಿಸಿದರು. ಎಂಎಆರ್‍ಜಿ ಪಿಯು ಕಾಲೇಜು ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ ಸ್ವಾಗತಿಸಿದರು. ಎಂಪಿಎಂಜಿ ಬಾಲಕಿಯರ ಪಿಯು ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ ವಂದಿಸಿದರು.
Comments are closed.