ಮಳೆರಾಯನ ಅಟ್ಟಹಾಸಕ್ಕೆ ಆಳಂದ ಆರ್ಥಿಕ ಸಂಕಷ್ಟ
ಬೆಳೆ, ಮನೆ, ರಸ್ತೆ ಹಾನಿ – ಹಸಿ ಬರ ಘೋಷಿಸಿ ವಿಶೇಷ ಆರ್ಥಿಕ ಪ್ಯಾಕೇಜ್ ಬೇಡಿಕೆ
ಆಳಂದ: ಕಮಲಾನಗರ ಮತ್ತು ಬೋಧನ ಹಳ್ಳದ ನೀರಿನ ಪ್ರವಾಹದಿಂದಾಗಿ ಜಲಾವೃತ್ತಗೊಂಡು ಎರಡು ದಿನಗಳಿಂದ ಪ್ರಮುಖ ಗ್ರಾಮದ ಸಂಪರ್ಕ ಕಡಿತಗೊಂಡಿದೆ.
ಆಳಂದ: ಮಟಕಿ, ತೀರ್ಥ ಮಧ್ಯದ ರಸ್ತೆಯ ಸೇತುವೆ ನೀರಿನ ಪ್ರವಾಹ ಉಕ್ಕಿ ಹರಿದು ಪರಿಣಾಮ ಸಂಚಾರ ಕಡಿತಗೊಂಡು ಜನ ಪರದಾಡಿದರು.
ಆಳಂದ: ಪಟ್ಟಣದ ಹಳ್ಳಿಸಲಗರ ಗ್ರಾಮ ಸಂಪರ್ಕದ ಪಟ್ಟಣದ ಎಚ್‍ಕೆಇ ಡಿಗ್ರಿ ಕಾಲೇಜು ಮಾರ್ಗದಲ್ಲಿ ಸೇತುವೆ ಮೇಲಿಂದ ಪ್ರವಾಹ ಸಂಚಾರಕ್ಕೆ ಅಡಿಯಾಗಿ ಜನತು ತಮ್ಮ ವಾಹನ ಕೊಂಡೊಯ್ಯಲು ಪರದಾಡಿದರು.
ಆಳಂದ: ಕಳೆದ ನಾಲ್ಕು ದಿನಗಳಿಂದ ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಶನಿವಾರವೂ ಮಳೆ ಮುಂದುವರಿದ ಪರಿಣಾಮ 35 ಕೆರೆಗಳು, ಅಮರ್ಜಾ ಅಣೆಕಟ್ಟು, ಗೋಕಟ್ಟೆ, ಬಾವಿ ಹಾಗೂ ಹಳ್ಳ-ಕೊಳ್ಳ-ನಾಲಾಗಳು ತುಂಬಿ ಹರಿಯತೊಡಗಿದ್ದು, ನೂರಾರು ಎಕರೆ ಜಮೀನುಗಳು ಜಲಾವೃತಗೊಂಡು ಬಿತ್ತನೆಯಾದ ಬೆಳೆ ಹಾಳಾಗಿವೆ. ರೈತರ ಶ್ರಮ ವೃಥಾ ಹೋಗಿ ಆರ್ಥಿಕ ಹೊಡೆತ ಅನುಭವಿಸುವಂತಾಗಿದೆ.
ಇದೇ ವೇಳೆ ಎರಡು ದಿನಗಳಲ್ಲಿ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಕಿಣ್ಣಿ ಸುಲ್ತಾನ ಗ್ರಾಮದಲ್ಲಿ 10 ಮನೆಗಳಿಗೆ ನೀರು ನುಗ್ಗಿ ಆಹಾರ ಸಾಮಗ್ರಿಗಳು ಹಾನಿಯಾಗಿದ್ದು, ಎರಡು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಕೊರಳ್ಳಿ ಗ್ರಾಮದಲ್ಲಿ 7 ಮನೆಗಳಲ್ಲಿ ನೀರು ನುಗ್ಗಿದ್ದು, ಆಹಾರ ಮತ್ತು ವಸ್ತುಸಾಮಗ್ರಿ ಹಾನಿಗೊಳಗಾಗಿವೆ. ಒಟ್ಟಾರೆ 18 ಮನೆಗಳು ಜಲಾವೃತಗೊಂಡು ಕುಟುಂಬಗಳು ನಿರಾಶ್ರಿತರಾಗಿವೆ.
ರಸ್ತೆಗಳ ದುಸ್ಥಿತಿಯಿಂದ ಸಂಚಾರಕ್ಕೆ ಭಾರೀ ಅಡ್ಡಿಯಾಗಿದೆ. ಬೋಧನ-ಕಮಲಾನಗರ ರಸ್ತೆಯ ಸೇತುವೆ ನೀರಿನ ರಭಸಕ್ಕೆ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿದೆ. ಶಿರೂರ ಜಿ ಗ್ರಾಮದ ಸೇತುವೆ ಮೇಲಿಂದ ನೀರಿನ ಪ್ರವಾಹ ಹರಿದು ಸಂಚಾರ ಸ್ಥಗಿತಗೊಂಡಿದೆ. ಆಳಂದ ಪಟ್ಟಣದ ಹೊರವಲಯದ ತಡಕಲ್ ರಸ್ತೆಯ ದಭದಭಿ ಹಾಗೂ ಡಿಗ್ರಿ ಕಾಲೇಜು, ತೀರ್ಥ-ಸಾಲೇಗಾಂವ ಹಳ್ಳಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆ ಹಾನಿಯಿಂದ ಜನಸಾಮಾನ್ಯರು ಆರ್ಥಿಕವಾಗಿ ದಿವಾಳಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರ-ವೈಹಿವಾಟು ಸ್ಥಗಿತಗೊಂಡಿದ್ದು, ರೈತರು ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಸ್ಥಳೀಯರು ಹಸಿ ಬರ ಘೋಷಿಸಿ ವಿಶೇಷ ಆರ್ಥಿಕ ಪ್ಯಾಕೇಜ್ ಮೂಲಕ ಪರಿಹಾರ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
Comments are closed.