ಆಳಂದ: ಸೆಪ್ಟೆಂಬರ್ ತಿಂಗಳಲ್ಲಿ ಆಳಂದ ತಾಲೂಕಿನಲ್ಲಿ ಸಾಮಾನ್ಯಕ್ಕಿಂತ ದ್ವಿಗುಣ ಮಳೆ ಸುರಿದು ಕೃಷಿ ವಲಯ ಗಂಭೀರ ಹಾನಿಗೊಂಡಿದೆ. ತೊಗರಿ, ಸೋಯಾಬೀನ್, ಉದ್ದು, ಹೆಸರು, ಜೋಳ ಸೇರಿದಂತೆ ಪ್ರಮುಖ ಬೆಳೆಗಳು ನೀರಿನಲ್ಲಿ ಮುಳುಗಿ ಬೇರು ಕೊಳೆಯುತ್ತಿದ್ದು, ಒಟ್ಟಾರೆ ಶೇ. 60–70ರಷ್ಟು ಇಳುವರಿ ಕುಸಿತವಾಗಲಿದೆ ಎಂದು ಕೃಷಿ ಇಲಾಖೆಯ ಪ್ರಾಥಮಿಕ ಅಂದಾಜು. ಬೆಳೆ ಹಾನಿ ಪರಿಹಾರ ನೀಡಲು ಸರ್ಕಾರ ತಡಮಾಡುತ್ತಿರುವುದರಿಂದ ರೈತರಲ್ಲಿ ವ್ಯಾಪಕ ಆಕ್ರೋಶ ಸಿಡಿಯುತ್ತಿದೆ.
ಮಳೆಯ ಅಂಕಿಅಂಶಗಳು ಬೆಳೆ ಹಾನಿಯ ಚಿತ್ರಣ ಹವಾಮಾನ ಇಲಾಖೆಯ ವರದಿ ಪ್ರಕಾರ ತಾಲೂಕಿನ ಐದು ಹೋಬಳಿಗಳಲ್ಲಿ ವಾಡಿಕೆಯಿಗಿಂತ ಶೇಕಡಾ 60–96 ಹೆಚ್ಚುವರಿ ಮಳೆ ದಾಖಲಾಗಿದೆ. ಮಳೆಯ ಅಂಕಿಅಂಶಗಳು ಬೆಳೆ ಹಾನಿಯ ಗಂಭೀರತೆ ಎತ್ತಿ ತೋರಿಸುತ್ತವೆ, ತಾಲೂಕಿನ ಐದು ಹೋಬಳಿ ಕೇಂದ್ರಗಳಲ್ಲಿ ಸೆಪ್ಟೆಂಬರ ತಿಂಗಳ ವಾಡಿಕೆಯ ಮಳೆಗಿಂತ ದ್ವಿಗುಣ ಮಳೆ ಸುರಿದಿದೆ ಎಂಬ ಹವಾಮಾನ ಇಲಾಖೆಯ ಅಂಕಿಅಂಶಗಳ ಸ್ಪಷ್ಟಪಡಿಸಿವೆ.
ಆಳಂದ ಹೋಬಳಿ: ವಾಡಿಕೆಯ 623 ಮಿ.ಮೀ ಬದಲು 1121 ಮಿ.ಮೀ (ಶೇ 80 ಹೆಚ್ಚಳ), ಖಜೂರಿ: 620 ಮಿಮೀ ಬದಲು 999.7 ಮಿಮೀ (ಶೇ 61 ಹೆಚ್ಚಳ), ಮಾದನಹಿಪ್ಪರಗಾ: 595.3 ಮಿಮೀ ಬದಲು 1167 ಮಿಮೀ (ಶೇ 96 ಹೆಚ್ಚಳ), ನರೋಣಾ: 626 ಮಿಮೀ ಬದಲು 995 ಮಿಮೀ (ಶೇ 59 ಹೆಚ್ಚಳ), ನಿಂಬರಗಾ: 619 ಮಿಮೀ ಬದಲು 1112.6 ಮಿಮೀ (ಶೇ 80 ಹೆಚ್ಚಳ),
ರೈತರ ಆತಂಕ – ಆರ್ಥಿಕತೆಗೆ ಹೊಡೆತ:
ಸೋಯಾಬೀನ್, ತೊಗರಿ, ಉದ್ದು, ಸೂರ್ಯಕಾಂತಿ, ಹತ್ತಿ ಉತ್ಪಾದನೆ ಕುಸಿತದಿಂದ ಮಾರುಕಟ್ಟೆಯಲ್ಲಿ ಪೂರೈಕೆ ಅಡಚಣೆ, ಬೆಲೆ ಏರಿಕೆ, ಆಹಾರ ಧಾನ್ಯ ಲಭ್ಯತೆ ಕೊರತೆ ಅನಿವಾರ್ಯ. ರೈತರ ಸಾಲದ ಒತ್ತಡ ಹೆಚ್ಚುವ ಆತಂಕ ವ್ಯಕ್ತವಾಗಿದೆ.
ತಜ್ಞರ ಎಚ್ಚರಿಕೆ:
“ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಇಂತಹ ಅತಿವೃಷ್ಟಿ ಸಾಮಾನ್ಯವಾಗುವ ಭೀತಿ ಇದೆ. ಕೃಷಿ ಪದ್ಧತಿಯಲ್ಲಿ ವೈಜ್ಞಾನಿಕ ಬದಲಾವಣೆ ತರದಿದ್ದರೆ ರೈತರು ನಿರಂತರ ನಷ್ಟದ ಶಿಕಾರಿಯಾಗುತ್ತಾರೆ” ಎಂದು ಕೃಷಿ ತಜ್ಞರು ಎಚ್ಚರಿಸಿದ್ದಾರೆ.
ಪರಿಹಾರ ಕ್ರಮಗಳ ಒತ್ತಾಯ:
ರೈತರು ಪ್ರತಿ ಎಕರೆಗೆ ಕನಿಷ್ಠ ರೂಪಾಯಿ 30,000–35,000 ಪರಿಹಾರ, ಸಾಲಮನ್ನಾ ಹಾಗೂ ಬೆಳೆ ವಿಮಾ ಮೊತ್ತ ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ. ದೀರ್ಘಾವಧಿಯಲ್ಲಿ ನೀರು ಇಂಗಿಸುವ ವ್ಯವಸ್ಥೆ, ಅತಿವೃಷ್ಟಿ ನಿರ್ವಹಣೆಗೆ ತಂತ್ರಜ್ಞಾನ ಆಧಾರಿತ ಕ್ರಮ ಅವಶ್ಯಕತೆ ಇದೆ.
ಶಾಸಕರ ಭರವಸೆ:
ಆಳಂದ ಶಾಸಕ ಬಿ.ಆರ್. ಪಾಟೀಲ ಹಾನಿ ಪ್ರದೇಶ ಪರಿಶೀಲನೆ ನಂತರ, “ಪರಿಹಾರ ಪ್ಯಾಕೇಜ್ ಕುರಿತು ರಾಜ್ಯ ಸರ್ಕಾರ ಚರ್ಚೆ ನಡೆಸುತ್ತಿದೆ. ಶೀಘ್ರದಲ್ಲೇ ರೈತರಿಗೆ ನೆರವು ಒದಗಿಸಲಾಗುವುದು” ಎಂದು ಹೇಳಿದರು.
ವಿರೋಧ ಪಕ್ಷದ ಟೀಕೆ:
ಬಿಜೆಪಿ ಮಾಜಿ ಶಾಸಕ ಸುಭಾಷ ಗುತ್ತೇದಾರ, ಸಿಪಿಐ ಮುಖಂಡ ಮೌಲಾ ಮುಲ್ಲಾ, ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ ಸೇರಿ ವಿರೋಧ ಪಕ್ಷಗಳು ತೀವ್ರ ಟೀಕೆ ಮಾಡಿದ್ದು – “ಸರ್ಕಾರ ಭರವಸೆ ಮಾತ್ರ ನೀಡುತ್ತಿದೆ, ಆದರೆ ರೈತರಿಗೆ ನಿಜವಾದ ನೆರವು ತಲುಪಿಲ್ಲ. ಕಳೆದ ವರ್ಷದ ಬೆಳೆ ವಿಮೆಯೂ ಇನ್ನೂ ಪಾವತಿಯಾಗಿಲ್ಲ. ತಕ್ಷಣವೇ ಪ್ರತಿ ಎಕರೆಗೆ ರೂ. 35,000 ಪರಿಹಾರ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರ ಧ್ವನಿ:
ಕೃಷಿಕ ಸಮಾಜದ ಗುರುಶರಣ ಪಾಟೀಲ ಕೊರಳ್ಳಿ ಹಾಗೂ ಕಾಂಗ್ರೆಸ್ ಮಹಿಳಾ ಘಟಕದ ಜೈಚಿತ್ರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬೆಳೆ ಹಾನಿ ಮಳೆಯ ಅವಾಂತರ ಕುರಿತು ಬೆಳಕು ಚೆಲ್ಲಿದ್ದಾರೆ. ಜೈಚಿತ್ರ ಅವರು“ರೈತರ ನೋವಿಗೆ ಸ್ಪಂದಿಸದಿದ್ದರೆ ಜನರು ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ” ಎಂದು ಎಚ್ಚರಿಸಿದರು.
ರೈತರ ಹೋರಾಟದ ಸನ್ನಾಹ:
ಪಕ್ಷಾತೀತವಾಗಿ ಎಲ್ಲ ನಾಯಕರು, ಸಂಘಟನೆಗಳು ಸೇರಿ ಹೋರಾಟ ನಡೆಸಲೇಬೇಕಾಗಿದೆ ಎಂಬ ಅಭಿಪ್ರಾಯ ರೈತರಲ್ಲಿ ಹೆಚ್ಚುತ್ತಿದೆ. “ಈ ದುಸ್ಥಿತಿ ಎಲ್ಲರಿಗೂ ಸಾಮಾನ್ಯ, ರೈತರ ಬದುಕು ಉಳಿಸಲು ಪಕ್ಷಭೇದ ಮೀರಿ ಹೋರಾಡಬೇಕು” ಎಂದು ಸಿದ್ದು ಹೊನ್ನಶೆಟ್ಟಿ ಎಂಬುವರು ಹೇಳಿದ್ದಾರೆ.
Comments are closed.